ಉಡುಪಿ: ಯುಪಿಎ ಸರ್ಕಾರದ ಅವಧಿಯಲ್ಲಿ ಐತಿಹಾಸಿಕ ರಾಮಸೇತುವನ್ನು ಧ್ವಂಸಗೊಳಿಸಲು ಯೋಜನೆ ಸಿದ್ಧವಾಗಿತ್ತು. ಶ್ರೀರಾಮನ ಪ್ರೇರಣೆ ಹಾಗೂ ಕಾನೂನು ಹೋರಾಟದ ಫಲವಾಗಿ ರಾಮಸೇತು ಉಳಿಯಿತು ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದರು.
ಬುಧವಾರ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಯುರೋಪ್ ರಾಷ್ಟ್ರಗಳ ಹಡುಗಗಳು ತಮಿಳುನಾಡಿನ ಚೆನ್ನೈ ಬಂದರನ್ನು ನೇರವಾಗಿ ಪ್ರವೇಶಿಸಲು ಅಡ್ಡಿಯಾಗಿದ್ದ ರಾಮಸೇತುವನ್ನು ಧ್ವಂಸಗೊಳಿಸಿ, ಹಡಗುಗಳ ಸುಗಮ ಸಂಚಾರಕ್ಕೆ ಪರ್ಯಾಯ ಸಮುದ್ರ ಮಾರ್ಗ ನಿರ್ಮಾಣಕ್ಕೆ ಡಿಎಂಕೆ ನಿರ್ಧರಿಸಿತ್ತು.
2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಪತನಗೊಂಡಾಗ ರಾಮಸೇತುವನ್ನು ಒಡೆದು ಸೇತು ಸಮುದ್ರ ಪರಿಯೋಜನೆ ಜಾರಿಗೊಳಿಸಬೇಕು ಎಂಬು ಷರತ್ತು ಮುಂದಿರಿಸಿ ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿತು. ಅದರಂತೆ, ಡಿಎಂಕೆ ಪಕ್ಷವನ್ನು ಸಂತುಷ್ಟಗೊಳಿಸಲು ಯುಪಿಎ ಸರ್ಕಾರ ₹ 3,000 ಕೋಟಿ ವೆಚ್ಚದಲ್ಲಿ ಸೇತುಸಮುದ್ರ ಪರಿಯೋಜನೆ ಅನುಷ್ಠಾನಕ್ಕೆ ಮುಂದಾಯಿತು.
ಈ ಸಂದರ್ಭ ಅಂದಿನ ಆರ್‌ಎಸ್‌ಎಸ್‌ನ ನಾಯಕರಾಗಿದ್ದ ಸುದರ್ಶನ್ ಹಾಗೂ ವಿಎಚ್‌ಪಿ ಪ್ರಮುಖರಾದ ಅಶೋಕ್ ಸಿಂಘಲ್ ಹೇಗಾದರೂ ಮಾಡಿ ರಾಮಸೇತು ಉಳಿಸಲೇಬೇಕು ಎಂದು ಒತ್ತಡ ಹೇರಿದರು. ಇದಕ್ಕೂ ಮುನ್ನ ರಾಮಸೇತು ಉಳಿಸಲು ಸಾಧು ಸಂತರು ಸಲ್ಲಿಸಿದ್ದ ಅರ್ಜಿಗಳೆಲ್ಲವನ್ನೂ ನ್ಯಾಯಾಲಯ ವಜಾ ಮಾಡಿತ್ತು. ಧಾರ್ಮಿಕ ವಿಚಾರಗಳು ಜಾತ್ಯತೀತ ಸಂವಿಧಾನ ವ್ಯವಸ್ಥೆಯಡಿ ನಿಲ್ಲುವುದಿಲ್ಲ ಎಂಬ ಆತಂಕ ಇತ್ತು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶ್ರೀರಾಮ ದಾರಿ ತೋರುತ್ತಾನೆ ಎಂದು ರಾಮಸೇತು ಉಳಿಸಲು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಿದೆ. ಸೇತು ಸಮುದ್ರಂ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಬರೋಬ್ಬರಿ ₹ 3,000 ಕೋಟಿ ವ್ಯಯಿಸಬೇಕಾಗಿದೆ. ಈ ಯೋಜನೆಯ ಬದಲಾಗಿ, ಕನ್ಯಾಕುಮಾರಿಯಿಂದ ಚೆನ್ನೈವರೆಗೂ ಸರಕು ಸಾಗಣೆ ರೈಲುಗಳ ಸಂಚಾರಕ್ಕೆ ಪರ್ಯಾಯ ಯೋಜನೆ ನಿರ್ಮಾಣ ಮಾಡಬಹುದು.
ವಿದೇಶಗಳಿಂದ ಬರುವ ಹಡಗುಗಳಿಂದ ಸರಕು ಸಾಗಣೆ ರೈಲುಗಳ ಮೂಲಕ ಚೆನೈನಗರವನ್ನು ತಲುಪಿಸಬಹುದು. ಈ ಯೋಜನೆಗೆ ಕೇವಲ ₹ 600 ಕೋಟಿ ವೆಚ್ಚವಾಗಲಿದೆ ಎಂದು ಸುಪ್ರೀಂಕೋರ್ಟ್‌ಗೆ ಮನದಟ್ಟು ಮಾಡಿಸಲಾಯಿತು. ಕೊನೆಗೆ ನ್ಯಾಯಾಲಯ ಕೂಡ ವಾದವನ್ನು ಪುರಸ್ಕರಿಸಿತು. ರಾಮಸೇತು ಉಳಿಯಿತು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು.
ದೇಶವನ್ನು ಮುಸಲ್ಮಾನ ದೊರೆಗಳಾದ ಮೊಘಲರು ಲೂಟಿ ಮಾಡಿದರು, ಬಳಿಕ ಬ್ರಿಟಿಷರು ಕೊಳ್ಳೆ ಹೊಡೆದರು. ನಿರಂತರ ದಾಳಿಗಳಿಂದ ದೇಶ ನಲುಗಿತು. ಆದರೂ, ದೇಶದ ಇತಿಹಾಸ, ಸಂಸ್ಕೃತಿ ಶ್ರೀಮಂತವಾಗಿದೆ. ಶೂನ್ಯವನ್ನು ಜಗತ್ತಿಗೆ ಪರಿಚಯಿಸಿದವರು ಭಾರತೀಯರು. ನಕ್ಷತ್ರ, ಗ್ರಹಗಳ ಆಧಾರದಲ್ಲಿ ಸಾವಿರಾರು ವರ್ಷಗಳ ಹಿಂದೆ ನಡೆದೆ ಘಟನಾವಳಿಗಳನ್ನು ನಿಖರವಾಗಿ ಹೇಳಬಹುದು ಎಂದರು.
ಕಾಸರಗೋಡು ಎಡನೀರು ಮಠದ ಸಚ್ಚಿದಾನಂದ ಭಾರತಿ ತೀರ್ಥ ಸ್ವಾಮೀಜಿ, ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಎಸ್.ಎ.ಪ್ರಭಾಕರ ಶರ್ಮ ಅವರನ್ನು ಸನ್ಮಾನಿಸಲಾಯಿತು. ಡಾ.ಮೈಸೂರು ಮಂಜುನಾಥ ಹಾಗೂ ಪಂ.ಜಯತೀರ್ಥ ಮೇವುಂಡಿ ಅವರ ಪಿಟೀಲು ಸಂಗೀತ ವಿಶೇಷ ಜುಗಲ್‌ಬಂದಿ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.