ADVERTISEMENT

ಕರಾವಳಿಯಲ್ಲಿ ರಾಮನಗರ ಮಾವಿನ ಘಮಲು

ದೊಡ್ಡಣಗುಡ್ಡೆ ತೋಟಗಾರಿಕಾ ಇಲಾಖೆ ಆವರಣದಲ್ಲಿ ಮೂರುದಿನ ಮಾವು ಮೇಳ; ತರಹೇವಾರಿ ಮಾವು ಖರೀದಿಗೆ ಲಭ್ಯ

ಬಾಲಚಂದ್ರ ಎಚ್.
Published 21 ಮೇ 2022, 19:30 IST
Last Updated 21 ಮೇ 2022, 19:30 IST
ಉಡುಪಿಯ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿರುವ ಮಾವು ಮೇಳದಲ್ಲಿರುವ ಆಲ್ಫಾನ್ಸೋ.
ಉಡುಪಿಯ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿರುವ ಮಾವು ಮೇಳದಲ್ಲಿರುವ ಆಲ್ಫಾನ್ಸೋ.   

ಉಡುಪಿ: ರಾಮನಗರ ಜಿಲ್ಲೆಯ ತರಹೇವಾರಿ ಮಾವಿನ ಸವಿ ಸವಿಯುವ ಅವಕಾಶ ಕರಾವಳಿಗರಿಗೆ ಒದಗಿ ಬಂದಿದೆ. ಮೇ 21ರಿಂದ 23ರವರೆಗೆ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆ ಆವರಣದಲ್ಲಿ ಮಾವು ಮೇಳ ಆಯೋಜಿಸಲಾಗಿದೆ. ರಾಮನಗರ ಮಾವು ಹಾಗೂ ತೆಂಗು ರೈತ ಉತ್ಪಾದಕರ ಸಂಘದಿಂದ ಮೇಳ ಹಮ್ಮಿಕೊಳ್ಳಲಾಗಿದ್ದು ಗ್ರಹಾಕರು ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸಬಹುದು.

ಯಾವ ತಳಿಯ ಮಾವು ಲಭ್ಯ

ಬಾದಾಮಿ, ಆಲ್ಫಾನ್ಸೊ, ಮಲ್ಲಿಕಾ, ಸಕ್ಕರೆಗುತ್ತಿ, ಸಿಂಧೂರ, ರಸಪುರಿ, ಮಲಗೋವಾ, ತೋತಾಪುರಿ, ಆಮ್ರಪಲ್ಲಿ, ಬೈಂಗನ್‌ಪಲ್ಲಿ, ನೀಲಂ ಖರೀದಿಗೆ ಲಭ್ಯ. ಸ್ಥಳೀಯವಾಗಿ ಬೆಳೆಯಲಾಗುವ ಮುಂಡಪ್ಪ, ಬೆನೆಟ್ ಆಲ್ಫಾನ್ಸೊ ಮಾವುಗಳನ್ನು ಪ್ರದರ್ಶನಕ್ಕಿಡಲಾಗಿದೆ.

ADVERTISEMENT

ಮಾವು ಮೇಳದ ವಿಶೇಷ

ರಾಮನಗರ ಜಿಲ್ಲೆಯ ಕೆಲವು ಮಾವು ಬೆಳೆಗಾರರು ಸಂಘಟಿತರಾಗಿ ‘ರಾಮನಗರ ಮಾವು ಹಾಗೂ ತೆಂಗು ರೈತ ಉತ್ಪಾದಕ ಸಂಘ‘ವನ್ನು (ಎಫ್‌ಪಿಸಿ) ರಚಿಸಿಕೊಂಡಿದ್ದು, ತಾವು ಬೆಳೆದ ಮಾವನ್ನು ಮಧ್ಯವರ್ತಿಗಳ ಹಸ್ತಕ್ಷೇಪ ಇಲ್ಲದೆ ಮೇಳಗಳ ಮೂಲಕ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ.

ನೈಸರ್ಗಿಕ ವಿಧಾನದಲ್ಲಿ ಮಾವನ್ನು ಮಾಗಿಸಲಾಗಿದ್ದು, ರಾಸಾಯನಿಕ ಬಳಕೆ ಮಾಡಿಲ್ಲ. ಹಾಗಾಗಿ, ಮಕ್ಕಳು ಸಹಿತ ಪ್ರತಿಯೊಬ್ಬರೂ ಆತಂಕವಿಲ್ಲದೆ ಮಾವಿನ ರುಚಿ ಸವಿಯಬಹುದು ಎನ್ನುತ್ತಾರೆ ರಾಮನಗರ ಮಾವು ಹಾಗೂ ತೆಂಗು ರೈತ ಉತ್ಪಾದಕರ ಸಂಘದ ನಿರ್ದೇಶಕರು ಹಾಗೂ ರೈತರೂ ಆಗಿರುವ ಸಿದ್ದರಾಜು.

ರಾಮನಗರ ಮಾವಿನ ವಿಶೇಷ

ರಾಜ್ಯದಲ್ಲಿ ಕೋಲಾರ ಹೊರತುಪಡಿಸಿದರೆ ರಾಮನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತದೆ. ಕಲ್ಲು ಮಿಶ್ರಿತ ಭೂಮಿ, ಗುಡ್ಡಗಾಡು ಪ್ರದೇಶ ಹಾಗೂ ಹೊಲಗಳಲ್ಲಿ ಹೆಚ್ಚಾಗಿ ಮಾವು ಬೆಳೆಯುವುದರಿಂದ ವಿಶೇಷ ರುಚಿ ಹೊಂದಿರುತ್ತದೆ. ಇತರೆಡೆ ಬೆಳೆಯುವ ಮಾವಿಗಿಂತಲೂ ರಾಮನಗರ ಮಾವು ಸಿಹಿಯಲ್ಲಿ, ರುಚಿಯಲ್ಲಿ ಒಂದಂಶ ಹೆಚ್ಚು ಎನ್ನುತ್ತಾರೆ ಸಿದ್ದರಾಜು.

ರಾಮನಗರದ ಮಾವು ನೋಡಲಷ್ಟೆ ಅಲ್ಲ ಆರೋಗ್ಯಕ್ಕೂ ಹಿತಕರ. ವಿಟಮಿನ್ಸ್‌, ಮಿನರಲ್ಸ್‌, ಫೈಬರ್ ಸೇರಿದಂತೆ ಆರೋಗ್ಯಕ್ಕೆ ಪೂರಕವಾದ ಅಂಶಗಳು ಹೆಚ್ಚಾಗಿವೆ. ಎಲ್ಲ ವಯೋಮಾನದವರೂ ತಿನ್ನಬಹುದು. ಮೇಳದಲ್ಲಿ 20 ಮಳಿಗೆಗಳಿದ್ದು 30 ಟನ್‌ಗೂ ಹೆಚ್ಚು ಮಾವು ತರಲಾಗಿದೆ. ಮಳೆಯ ಕಾರಣದಿಂದ ಸದ್ಯ ವ್ಯಾಪಾರ ಕಡಿಮೆ ಇದೆ. ಭಾನುವಾರ ಚೇತರಿಕೆಯಾಗುವ ವಿಶ್ವಾಸವಿದೆ ಎನ್ನುತ್ತಾರೆ ಬೆಳೆಗಾರರು.

ದರ ಎಷ್ಟು:

ನೈಸರ್ಗಿಕವಾಗಿ ಹಣ್ಣು ಮಾಡಿರುವ ಮಾವಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ಬೆಲೆ ಹೆಚ್ಚಾಗಿರುತ್ತದೆ. ಆದರೆ, ಮಾವು ಮೇಳದಲ್ಲಿ ಹಾಪ್‌ಕಾ‌ಮ್ಸ್ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮೂರು ಕೆಜಿಯ ಆಲ್ಫಾನ್ಸೋ (ಬಾದಾಮಿ) ಮಾವಿನ ಹಣ್ಣಿನ ಬಾಕ್ಸ್‌ಗೆ ₹ 400 ದರ ಇದೆ. ಚಿಲ್ಲರೆಯಾಗಿ ಖರೀದಿಸಿದರೆ ಕೆ.ಜಿ.ಗೆ ₹ 150 ದರ ಇದೆ. ರಸಪುರಿ ₹ 120, ಸಿಂಧೂರ ₹ 80, ತೋತಾಪುರಿ ₹ 40, ಮಲ್ಲಿಕಾ ₹ 120 ರಿಂದ ₹ 140 ದರ ನಿಗದಿಪಡಿಸಲಾಗಿದೆ ಎಂದು ವಿವರ ನೀಡಿದರು.

‘ರೈತರಿಗೆ, ಗ್ರಾಹಕರಿಗೆ ಅನುಕೂಲ’

ರಾಮನಗರದ ಮಾವಿನ ರುಚಿಯನ್ನು ಕರಾವಳಿಗರು ಸವಿಯಬೇಕು ಹಾಗೂ ರೈತರು ಬೆಳೆದ ಮಾವು ದಲ್ಲಾಳಿಗಳ ಹಸ್ತಕ್ಷೇಪ ಇಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಾಟವಾಗಬೇಕು ಎಂಬ ಉದ್ದೇಶದಿಂದ ರಾಮನಗರ ಮಾವು ಹಾಗೂ ತೆಂಗು ರೈತ ಉತ್ಪಾದಕರ ಸಂಘಕ್ಕೆ ಉಡುಪಿಯಲ್ಲಿ ಮಾವು ಮೇಳ ಆಯೋಜಿಸಲು ಅವಕಾಶ ನೀಡಲಾಗಿದೆ. ಕರಾವಳಿಯಲ್ಲಿ ಬೆಳೆಯದ ಮಾವಿನ ತಳಿಗಳು ಮೇಳದಲ್ಲಿ ಲಭ್ಯವಿದ್ದು ಗ್ರಾಹಕರು ಇಷ್ಟದ ಹಣ್ಣುಗಳನ್ನು ಖರೀದಿಸಬಹುದು. ಮೂರುದಿನ ಮೇಳ ನಡೆಯಲಿದೆ. ಗ್ರಾಹಕರಿಂದ ಉತ್ತಮ ಸ್ಪಂದನ ದೊರೆತರೆ ಮೇಳದ ಅವಧಿಯನ್ನು ವಿಸ್ತರಿಸಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.