ADVERTISEMENT

ಸಮಾಜದ ಅನಿಷ್ಠ ತೊಳೆಯುವ ರಂಗಭೂಮಿ: ಡಾ.ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ

ಚಿತ್ರದುರ್ಗದ ತರಳಬಾಳು ಶಾಖಾಮಠ ಸಾಣೆಹಳ್ಳಿ ಮಠದ ಡಾ.ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 5:48 IST
Last Updated 14 ಫೆಬ್ರುವರಿ 2022, 5:48 IST
ಚಿತ್ರದುರ್ಗದ ತರಳಬಾಳು ಶಾಖಾಮಠ ಸಾಣೆಹಳ್ಳಿ ಮಠದ ಡಾ.ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಗೆ ರಂಗಭೂಮಿ ಪುರಸ್ಕಾರ ಪ್ರದಾನ ಮಾಡಲಾಯಿತು.
ಚಿತ್ರದುರ್ಗದ ತರಳಬಾಳು ಶಾಖಾಮಠ ಸಾಣೆಹಳ್ಳಿ ಮಠದ ಡಾ.ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಗೆ ರಂಗಭೂಮಿ ಪುರಸ್ಕಾರ ಪ್ರದಾನ ಮಾಡಲಾಯಿತು.   

ಉಡುಪಿ: ರಂಗಭೂಮಿಯು ಸಮಾಜಕ್ಕೆ ಅಂಟಿಕೊಂಡಿರುವ ಅನಿಷ್ಟಗಳನ್ನು ತೊಳೆಯುವ ಕಾರ್ಯ ಮಾಡುತ್ತಿದೆ ಎಂದು ಚಿತ್ರದುರ್ಗದ ತರಳಬಾಳು ಶಾಖಾಮಠ ಸಾಣೆಹಳ್ಳಿ ಮಠದ ಡಾ.ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಭಾನುವಾರ ರಂಗಭೂಮಿ ಉಡುಪಿ ಸಂಸ್ಥೆ ಆಯೋಜಿಸಿದ್ದ ರಂಗೋತ್ಸವ ಕಾರ್ಯಕ್ರಮದಲ್ಲಿ ರಂಗ ಪಂಚಾನನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕೇವಲ ರಂಗಭೂಮಿಯಲ್ಲಿ ಕೇವಲ ಮನರಂಜನೆಯೇ ಮುಖ್ಯ ಉದ್ದೇಶವಾದರೆ ಅದು ಯಶಸ್ವಿ ನಾಟಕವಾಗುವುದಿಲ್ಲ. ಮನೋವಿಕಾಸ, ಆಲೋಚನೆ, ಉತ್ತಮ ತತ್ವಗಳನ್ನು ಸಾರುವುದು ಯಶಸ್ವಿ ನಾಟಕವಾಗುತ್ತದೆ ಎಂದರು.

ಕೆಲವು ಹವ್ಯಾಸಿ ನಾಟಕ ಸಂಸ್ಥೆಗಳು ಕಳಪೆ ಮನರಂಜನೆ, ದ್ವಂದ್ವಾರ್ಥ ಪದ ಪ್ರಯೋಗಗಳಿಂದ ನೈಜ ಕಲಾಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಶ್ರೀಗಳು, ಆದರ್ಶದ ಹಾದಿಯಲ್ಲಿ ಸಾಗುವವರೆಗೆ ವಿಪತ್ತುಗಳು ಎದುರಾಗುತ್ತದೆ ಎಂದರು.

ADVERTISEMENT

ಈಚೆಗೆ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಬೆಲೆ ಸಿಗದೆ ಸರ್ವಾಧಿಕಾರ ಮನೋಭಾವ ಹೆಚ್ಚುತ್ತಿದೆ. ಶರಣರ ನಡೆಯ ಅನುಕರಣೆ ಇಂತಹ ಸಮಸ್ಯೆಗಳಿಗೆ ಪರಿಹಾರವಾಗಬಲ್ಲುದು. 12ನೇ ಶತಮಾನದಲ್ಲಿ ಬಸವಣ್ಣ ಸಹಿತ ಹಲವು ಶರಣರು ಗಂಭೀರ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದರು ಎಂದು ಸ್ಮರಿಸಿದರು.

ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ರಂಗಕಲೆಯಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಸಾಧ್ಯವಿದ್ದು, ಉಡುಪಿ ರಂಗಭೂಮಿ ಸಂಸ್ಥೆಯ ರಂಗ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು ಸಮಾಜಕ್ಕೆ ಕೊಡುಗೆ ನೀಡಿದೆ ಎಂದರು.

ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಪದಾಧಿಕಾರಿಗಳಾದ ನಂದಕುಮಾರ್, ಭಾಸ್ಕರ ರಾವ್ ಕಿದಿಯೂರು, ಉದ್ಯಮಿ ಯು. ವಿಶ್ವನಾಥ್ ಶೆಣೈ ಇದ್ದರು.

ರಂಗಭೂಮಿ ಉಡುಪಿ ಕಾರ್ಯದರ್ಶಿ ಪ್ರದೀಪ್‍ಚಂದ್ರ ಕುತ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.