ADVERTISEMENT

ರಶ್ಮಿ ಸಾಮಂತ್ ಆಕ್ಸ್‌ಫರ್ಡ್‌ ಸ್ಟುಡೆಂಟ್ ಯೂನಿಯನ್‌ ಅಧ್ಯಕ್ಷೆ

ಉಡುಪಿ ಮೂಲದ ಯುವತಿಗೆ ಒಲಿದ ಜಯ: ಮೊದಲ ಭಾರತೀಯ ವಿದ್ಯಾರ್ಥಿನಿ ಎಂಬ ಅಗ್ಗಳಿಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 10:38 IST
Last Updated 18 ಫೆಬ್ರುವರಿ 2021, 10:38 IST
ರಶ್ಮಿ ಸಾಮಂತ್
ರಶ್ಮಿ ಸಾಮಂತ್   

ಉಡುಪಿ: ಇಂಗ್ಲೆಂಡ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್‌ ಸ್ಟುಡೆಂಟ್‌ ಯೂನಿಯನ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಉಡುಪಿ ಮೂಲದ ರಶ್ಮಿ ಸಾಮಂತ್‌ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಆಕ್ಸ್‌ಫರ್ಡ್‌ ಸ್ಟುಡೆಂಟ್‌ ಯೂನಿಯನ್‌ ಅಧ್ಯಕ್ಷೆಯಾಗಿ ಆಯ್ಕೆಯಾದ ಭಾರತ ಮೂಲದ ಮೊದಲ ವಿದ್ಯಾರ್ಥಿನಿ ಎಂಬ ಸಾಧನೆ ಮಾಡಿದ್ದಾರೆ.

ರಶ್ಮಿ ಸಾಮಂತ್‌ ಮೂಲತಃ ಮಣಿಪಾಲದವರಾಗಿದ್ದು, ವತ್ಸಲಾ ಸಾಮಂತ್ ಹಾಗೂ ದಿನೇಶ್ ಸಾಮಂತ್ ಅವರ ಪುತ್ರಿ. ರಶ್ಮಿ ಪ್ರಾಥಮಿಕ ಶಿಕ್ಷಣವನ್ನು ಮಣಿಪಾಲ ಹಾಗೂ ಉಡುಪಿಯಲ್ಲಿ ಮುಗಿಸಿದ್ದು, ಮಣಿಪಾಲ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕಾನಿಕಲ್‌ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಎಂಐಟಿಯ ಸ್ಟುಡೆಂಟ್‌ ಕೌನ್ಸಿಲ್‌ನಲ್ಲಿಯೂ ತಾಂತ್ರಿಕ ಕಾರ್ಯದರ್ಶಿಯಾಗಿ ರಶ್ಮಿ ಆಯ್ಕೆಯಾಗಿದ್ದರು.

ADVERTISEMENT

‌ಈಚೆಗೆ ನಡೆದ ಚುನಾವಣೆಯಲ್ಲಿ 4881 ವಿದ್ಯಾರ್ಥಿಗಳು ಮತ ಚಲಾಯಿಸಿದ್ದರು. ಈ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಚಲಾವಣೆಯಾದ ಒಟ್ಟು 3708 ಮತಗಳ ಪೈಕಿ 1966 ಮತಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಮಂತಗಳ ಅಂತರದಿಂದ ರಶ್ಮಿ ಜಯಗಳಿಸಿದ್ದಾರೆ. ಚುನಾವಣೆಯಲ್ಲಿ ಎದುರಾಳಿ ಸ್ಪರ್ಧಿಗಳು ಗಳಿಸಿದ ಒಟ್ಟು ಮತಕ್ಕಿಂತಲೂ ಹೆಚ್ಚು ಮತಗಳನ್ನು ರಶ್ಮಿ ಪಡೆದಿರುವುದು ವಿಶೇಷ.

‌ರಶ್ಮಿ ಸದ್ಯ ಆಕ್ಸ್‌ಫರ್ಡ್‌ ವಿಶ್ವಿವಿದ್ಯಾಲಯದಲ್ಲಿ ಎನರ್ಜಿ ಸಿಸ್ಟಮ್ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ. ಕೋವಿಡ್‌ ಸುರಕ್ಷತೆ, ಮಾನಸಿಕ ಆರೋಗ್ಯ, ಪರಿಸರ ಪೂರಕ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ ಮಾಡುವ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದರು. ರಶ್ಮಿ ಗೆಲುವಿಗೆ ಮಾಹೆ ಆಡಳಿತ ಮಂಡಳಿ, ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.