ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪಶ್ಚಿಮ ಕರಾವಳಿಯ ಉಪ್ಪುಂದದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪೌರಾಣಿಕ ಹಿನ್ನೆಲೆ ಹೊಂದಿದೆ.
ಪರಶುರಾಮ ಕ್ಷೇತ್ರದ ಪ್ರಮುಖವಾದ ದೇಗುಲಗಳಲ್ಲಿ ದುರ್ಗಾ ಪರಮೇಶ್ವರಿ ದೇವಸ್ಥಾನವೂ ಒಂದು. ತಾಲ್ಲೂಕಿನಲ್ಲಿ ನಡೆಯುವ ಅತಿ ದೊಡ್ಡ ಜಾತ್ರೆ ಎಂದೇ ಪ್ರಸಿದ್ದಿ ಪಡೆದಿರುವ ಉಪ್ಪುಂದ ಜಾತ್ರೆಯನ್ನು ಈ ಭಾಗದಲ್ಲಿ ಕೊಡಿಹಬ್ಬ ಎಂತಲೂ ಕರೆಯುತ್ತಾರೆ. ಮೂರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸೇರಿ ತಾಯಿ ದುರ್ಗಾಪರಮೇಶ್ವರಿಯ ಆರಾಧನೆ ಮಾಡಿ ಕೃತಾರ್ಥರಾಗುತ್ತಾರೆ.
ದುರ್ಗಾಪರಮೇಶ್ವರಿ ದೇವಸ್ಥಾನವು ಸಂಪೂರ್ಣ ಶಿಲಾಮಯವಾಗಿ ಪೂರ್ವಾಭಿಮುಖವಾಗಿದೆ. ಗರ್ಭಗುಡಿಗೆ ತಾಮ್ರದ ಹೊದಿಕೆ ಇದ್ದು, ಮುಂಭಾಗದಲ್ಲಿ ಬೃಹತ್ ಸ್ವಾಗತ ಗೋಪುರವಿದೆ. ದೇವಳದ ಈಶಾನ್ಯ ದಿಕ್ಕಿನಲ್ಲಿ ಅಗಸ್ತ್ಯತೀರ್ಥ, ದಕ್ಷಿಣದಲ್ಲಿ ಮಾತಂಗ ತೀರ್ಥ, ಗರ್ಭಗುಡಿ, ತೀರ್ಥ ಮಂಟಪ, ಮುಖಮಂಟಪ ಇದೆ.
ದೇವಸ್ಥಾನದಲ್ಲಿ ಸುಂದರವಾದ ಶಿಲ್ಪಕಲೆಯ ಕೆತ್ತನೆಗಳನ್ನು ಕಾಣಬಹುದಾಗಿದೆ. ಪೂರ್ವ ಈಶಾನ್ಯದಲ್ಲಿ ಲಕ್ಷ್ಮೀನಾರಾಯಣ, ಪೂರ್ವ ಆಗ್ನೇಯದಲ್ಲಿ ಚತುರ್ಭುಜ ಗಣಪತಿ, ಪಶ್ಚಿಮ ವಾಯುವ್ಯದಲ್ಲಿ ಸಪ್ತ ಅಶ್ವಗಳಿಂದ ಎಳೆಯಲ್ಪಟ್ಟ ಲಕ್ಷ್ಮೀನಾರಾಯಣ, ಲಕ್ಷ್ಮೀ ನರಸಿಂಹ, ಗಣಪತಿ, ದೇವಳದ ಈಶಾನ್ಯದಲ್ಲಿ ಪಶ್ಚಿಮಾಭಿಮುಖವಾಗಿ ಪಾಣಿಪೀಠದ ಮೇಲೆ ಲಿಂಗರೂಪಿ ವೀರಭದ್ರ ದೇವರ ಸನ್ನಿಧಿ, ದಕ್ಷಿಣ ಭಾಗದಲ್ಲಿ ಪ್ರಾಚೀನ ಈಶ್ವರ ದೇಗುಲ, ಕಾಶಿಯಿಂದ ತಂದ ವಿಶ್ವೇಶ್ವರ, ಉಮಾಮಹೇಶ್ವರ ಹೀಗೆ ಪರಿವಾರ ದೇವರಾಗಿ ಇಲ್ಲಿ ನೆಲೆಗೊಂಡಿದ್ದಾರೆ.
ಯುಗಾದಿ, ರಾಮನವಮಿ, ಪ್ರತಿಷ್ಠಾ ವರ್ಧಂತಿ, ನಾಗರಪಂಚಮಿ, ಸ್ವರ್ಣಗೌರಿ ವ್ರತ, ಗಣೇಶ ಚತುರ್ಥಿ, ಸಿಂಹಮಾಸದಲ್ಲಿ ಸೋಣೆ ಆರತಿ, ಜ್ಯೇಷ್ಠಾಲಕ್ಷ್ಮೀ ವ್ರತ, ಕೇದಾರ ವ್ರತ, ನವರಾತ್ರಿ ಸೇರಿದಂತೆ ಹಲವಾರು ವಿಶೇಷ ಪೂಜೆಗಳು ನಡೆಯುತ್ತವೆ.
1996ರಲ್ಲಿ ನಡೆದ ಜೀರ್ಣೋದ್ಧಾರ ಹಾಗೂ ಅಷ್ಟಬಂಧ ಕಾರ್ಯಕ್ರಮದ ನಂತರ ಈ ವರ್ಷ ಅಷ್ಟಬಂಧ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 27 ರಿಂದ ಅಷ್ಟಬಂಧ, ಮನ್ಮಹರಥೋತ್ಸವ ಜರುಗಲಿದ್ದು ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾರಣಿಕ ಸ್ಥಳವಾಗಿರುವ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುವ ಭಕ್ತರು ಉಡುಪಿ ಜಿಲ್ಲೆ ಮಾತ್ರವಲ್ಲದೆ ಸುತ್ತಮತ್ತಲ ಜಿಲ್ಲೆಯಲ್ಲೂ ಸಾಕಷ್ಟು ಸಂಖ್ಯೆಯಲ್ಲಿರುವುದು ವಿಶೇಷ.
ಪೌರಾಣಿಕ ಹಿನ್ನೆಲೆ: ತ್ರೇತಾಯುಗದಲ್ಲಿ ಮಾತಂಗ ಋಷಿಯು ದುರ್ಗಾ ಪರಮೇಶ್ವರಿ ದೇವಿಯನ್ನು ಮಗಳಾಗಿ ಪಡೆಯಬೇಕು ಎಂದು ತಪಸ್ಸು ಮಾಡಿ, ಶ್ಯಾಮಲಾದೇವಿಯನ್ನು ಆರಾಧಿಸಿದನಂತೆ. ಮಾತಂಗ ಋಷಿಯ ಮಡದಿ ಸಿದ್ಧಿಮತಿಯ ಕನಸಿನಲ್ಲಿ ಶ್ಯಾಮಲಾದೇವಿಯು ಕಾಣಿಸಿಕೊಂಡು ಹೊಂಗೆ ಚಿಗುರಿನ ಗೊಂಚಲನ್ನು ಅನುಗ್ರಹಿಸಿದಳಂತೆ.
ಸ್ವಲ್ಪ ಸಮಯದಲ್ಲೇ ಸಿದ್ಧಿಮತಿ ಹೆಣ್ಣುಮಗುವಿಗೆ ಜನ್ಮ ನೀಡಿದಳಂತೆ. ಮಗುವಿಗೆ ಲಘು ಶ್ಯಾಮಲೆ ಎಂದು ನಾಮಕರಣ ಮಾಡಿದರಂತೆ. ಆಕೆ ವಿದ್ಯೆ, ಮಂತ್ರ ರಹಸ್ಯ ಕಲಿತು ಮಹಾಪ್ರತಿಭ ಸಂಪನ್ನೆಯಾಗಿ ಲಲಿತಾ ಪರಮೇಶ್ವರಿಯ ಕೃಪಾಕಟಾಕ್ಷಕ್ಕೆ ಪಾತ್ರಳಾದಳಂತೆ. ಉಪ್ಪುಂದ ಕಡಲ ತೀರದಲ್ಲಿ ದುರ್ಗಾ ಪರಮೇಶ್ವರಿಯು ಶಕ್ತಿ ಸ್ವರೂಪಿಣಿಯಾಗಿ ಉದ್ಭವಿಸಿದಳು. ಇದರ ಕುರುಹಾಗಿ ದೇವಿಕೆರೆಯಲ್ಲಿ ಈಗಲೂ ಹೊಂಗೆ ಗಿಡ ಇದೆ. ಅನಾದಿ ಕಾಲದಿಂದಲೂ ಈ ಗಿಡ ಹಾಗೆಯೇ ಇದೆ ಎನ್ನುವ ಪ್ರತೀತಿ ಈ ಭಾಗದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.