ADVERTISEMENT

ಹೆಬ್ರಿ: ಪೇಟೆಯಲ್ಲಿದ್ದ ಠಾಣೆ ಕಾಡು ಬದಿಯಲ್ಲಿ

ಹೆಬ್ರಿ ಪರಿಸರದಲ್ಲಿ ನಕ್ಸಲ್‌ ಚಟುವಟಿಕೆ ಮತ್ತೆ ಶುರು: ಪೊಲೀಸ್ ಠಾಣೆ ಬಲವರ್ಧನೆಗೆ ಆಗ್ರಹ

ಸುಕುಮಾರ್ ಮುನಿಯಾಲ್
Published 21 ನವೆಂಬರ್ 2024, 7:03 IST
Last Updated 21 ನವೆಂಬರ್ 2024, 7:03 IST
ಹೆಬ್ರಿ ಪೊಲೀಸ್‌ ಠಾಣೆ
ಹೆಬ್ರಿ ಪೊಲೀಸ್‌ ಠಾಣೆ   

ಹೆಬ್ರಿ: ಪಟ್ಟಣದ ಸಮೀಪದಲ್ಲೇ ಇದ್ದ ಹೆಬ್ರಿ ಪೊಲೀಸ್‌ ಠಾಣೆಯನ್ನು ಹೆಬ್ರಿ– ಕಾರ್ಕಳ ಮುಖ್ಯರಸ್ತೆಯ ಸಮೀಪಕ್ಕೆ ಸ್ಥಳಾಂತರಿಸಲಾಗಿದೆ. ಪಟ್ಟಣದಿಂದ ಸುಮಾರು 1 ಕಿ.ಮೀ ದೂರದಲ್ಲಿ ಕಾಡಿನಂಚಿನಲ್ಲಿ ಹೊಸ ಕಟ್ಟಡ ಕಟ್ಟಿ ಅಲ್ಲಿಗೆ ಸ್ಥಳಾಂತರಿಸಲಾಗಿದೆ.

ನಕ್ಸಲ್‌ ಎನ್‌ಕೌಂಟರ್, ನಕ್ಸಲರ ಸಕ್ರಿಯತೆಯಲ್ಲಿ ಈಗಾಗಲೇ ಹೆಬ್ರಿ ಸುದ್ದಿಯಲ್ಲಿದ್ದು, ಪೊಲೀಸ್ ಠಾಣೆಯನ್ನು ಬಲವರ್ಧನೆ ಮಾಡಬೇಕು ಎಂಬ ವಿಚಾರ ಈಗ ಮತ್ತೆ ಮುನ್ನಲೆಗೆ ಬಂದಿದೆ. ಠಾಣೆಗೆ ಹೆಚ್ಚಿನ ಸುರಕ್ಷತೆ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಮೋಸ್ಟ್‌ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡನ ಎನ್‌ಕೌಂಟರ್ ಬಳಿಕ ಆತಂಕ ಇನ್ನಷ್ಟು ಹೆಚ್ಚಾಗಿದೆ.

ಠಾಣಗೆ ಬೇಕು ಅಧಿಕ ಸುರಕ್ಷತೆ, ಸೌಲಭ್ಯ: ಕಾಡಿನ ಅಂಚಿನಲ್ಲಿರುವ ಹೆಬ್ರಿ ಪೊಲೀಸ್ ಠಾಣೆ ಸುತ್ತಲೂ ಕಾಡು ಆವರಿಸಿದ್ದು, ಸಂಪೂರ್ಣ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ನಕ್ಸಲ್‌ ಭಾದಿತ ಪ್ರದೇಶದ  ಠಾಣೆಗೆ ಈಗ ಇರುವ ಶಸ್ತ್ರಾಸ್ತ್ರಗಳನ್ನು ಹೊರತುಪಡಿಸಿ ಆಧುನಿಕ ಶಸ್ತ್ರಾಸ್ತ್ರ ಪೂರೈಸಬೇಕು. ಸಿಬ್ಬಂದಿ ಕೊರತೆ ಇದ್ದು, ಹೆಚ್ಚು ಸಿಬ್ಬಂದಿ ನಿಯೋಜಿಸಬೇಕು. ಗುಪ್ತಚರ ಮಾಹಿತಿ ಸಂಗ್ರಹ, ನಿರಂತರ ಪೊಲೀಸ್ ಪೆಟ್ರೋಲಿಂಗ್ ಮೂಲಕ ಮಾಹಿತಿಗಳನ್ನು ಕಲೆಹಾಕಲು ಹೆಚ್ಚುವರಿ ಸಿಬ್ಬಂದಿ ಬೇಡಿಕೆ ಇದ್ದು, ಎಲ್ಲಾ ವಿಭಾಗಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಬೇಕು.

ADVERTISEMENT

ಠಾಣೆಗೆ ಸುಸಜ್ಜಿತ ವಾಹನ ನೀಡಬೇಕು. ನಿರಂತರವಾಗಿ ಓಡಾಟ ಇರುವುದರಿಂದ ತುರ್ತು ಸಂದರ್ಭಗಳಲ್ಲಿ ವಾಹನ ಸಮಸ್ಯೆ ಉಂಟಾಗುತ್ತದೆ. ಮುಂದಿನ ದಿನಗಳಲ್ಲಿ ಇಲಾಖೆ ವಿಶೇಷ ಯೋಜನೆ ರೂಪಿಸಿ ಹೆಚ್ಚುವರಿ ವಾಹನಗಳನ್ನು ನೀಡಬೇಕು. ವಸತಿ ಗೃಹಗಳು ಅತ್ಯಂತ ಹಳೆಯದಾಗಿವೆ. ಸುಸಜ್ಜಿತ ಪೊಲೀಸ್‌ ವಸತಿ ಗೃಹಗಳನ್ನು ನಿರ್ಮಿಸಿ ಪೊಲೀಸ್ ವ್ಯವಸ್ಥೆಯ ಬಲವರ್ಧನೆ ಆಗಬೇಕು. ಕೆಲವೊಮ್ಮೆ ಸಮರ್ಪಕವಾದ ನೀರಿನ ವ್ಯವಸ್ಥೆ ಕೂಡ ಇರುವುದಿಲ್ಲ.

ಹೆಬ್ರಿ ಪಟ್ಟಣದಲ್ಲಿ ಸಮರ್ಪಕ ಸಿ.ಸಿ.ಟಿ.ವಿ ಕ್ಯಾಮರಾ ವ್ಯವಸ್ಥೆ ಇಲ್ಲದಿರುವುದರಿಂದ ಅನೇಕ ಸಂದರ್ಭಗಳಲ್ಲಿ ಹಿನ್ನಡೆ ಉಂಟಾಗಿದೆ. ಪಟ್ಟಣವನ್ನು ಸಂಪೂರ್ಣ ಸಿ.ಸಿ.ಟಿ.ವಿ ಕ್ಯಾಮರಾ ಕಣ್ಗಾವಲಿಗೆ ಒಳಪಡಿಸಬೇಕು. ಪಟ್ಟಣದಲ್ಲಿ ಪೊಲೀಸ್ ಔಟ್ ಪೋಸ್ಟ್ ಬೇಕಾಗಿದ್ದು, ಈ ಬಗ್ಗೆ ಆಗಾಗ ಚರ್ಚೆಗಳು ನಡೆದಿವೆ. ಉನ್ನತಾಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.

ವಿಪಿಜಿ ಫೋರ್ಸ್ ನೀಡಿ: ಈ ಹಿಂದೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಿಲೇಜ್ ಪ್ರೊಟೆಕ್ಷನ್ ಗ್ರೂಪ್ (ವಿಜಿಪಿ) ಎಂಬ ವಿಶೇಷ ಫೋರ್ಸ್ ನೀಡಿ ಪೋಲಿಸ್ ಇಲಾಖೆಗೆ ಬಲ  ತುಂಬಲಾಗಿತ್ತು. ನಂತರ ದಿನಗಳಲ್ಲಿ ಅದನ್ನು ತೆಗೆದು ಹಾಕಲಾಗಿದೆ. ಮತ್ತೆ ವಿಪಿಜಿ ಫೋರ್ಸ್ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿರುವ ಹಿನ್ನೆಲೆ ಸೂಕ್ತ ಕಟ್ಟೆಚ್ಚರ ವಹಿಸಲಾಗುವುದು. ಹೆಬ್ರಿ ಪೊಲೀಸ್ ಠಾಣೆಗೆ ವಿಶೇಷ ರಕ್ಷಣೆ ಒದಗಿಸುವ ಬಗ್ಗೆ ಯೋಚಿಸಿ ಕ್ರಮ ಜರುಗಿಸಲಾಗುವುದು.
–ಡಾ. ಅರುಣ್ ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಹೆಬ್ರಿ ಪೊಲೀಸ್ ಠಾಣೆಯ ಬಲವರ್ಧನೆ ಮಾಡಬೇಕು. ನಕ್ಸಲರು ಪ್ರತಿಕಾರ ತೀರಿಸಬಹುದು. ಠಾಣೆಗೆ ಸುಸಜ್ಜಿತ ಶಸ್ತ್ರ ವಾಹನ ವಿಪಿಜಿ ಫೋರ್ಸ್ ನೀಡಿ ಬಲ ತುಂಬಬೇಕು. ನಾಡಿನಲ್ಲಿ ಇರಬೇಕಾದ ಠಾಣೆ ಕಾಡಿನಲ್ಲಿದ್ದು ಭದ್ರತೆ ಬೇಕು. ಸಿಬ್ಬಂದಿ ಕೊರತೆ ಇದೆ.
–ಹರೀಶ ಶೆಟ್ಟಿ ನಾಡ್ಪಾಲು, ಸಾರ್ವಜನಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.