ADVERTISEMENT

ಸಂಶೋಧಕರಿಗೆ ಬಹುಭಾಷಾ ಜ್ಞಾನ ಅಗತ್ಯ: ವಿವೇಕ ರೈ ಅಭಿಮತ

ಗೋವಿಂದ ಪೈ ಸಂಶೋಧನ ಸಂಪುಟ–1 ಅನಾವರಣ ಕಾರ್ಯಕ್ರಮದಲ್ಲಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 8:18 IST
Last Updated 17 ನವೆಂಬರ್ 2024, 8:18 IST
ಗೋವಿಂದ ಪೈ ಸಂಶೋಧನ ಸಂಪುಟ–1 ಅನ್ನು ಮಾಹೆಯ ಸಹ ಕುಲಾಧಿಪತಿ ಡಾ. ಎಚ್‌.ಎಸ್‌.ಬಲ್ಲಾಳ್‌ ಶನಿವಾರ ಅನಾವರಣಗೊಳಿಸಿದರು
ಗೋವಿಂದ ಪೈ ಸಂಶೋಧನ ಸಂಪುಟ–1 ಅನ್ನು ಮಾಹೆಯ ಸಹ ಕುಲಾಧಿಪತಿ ಡಾ. ಎಚ್‌.ಎಸ್‌.ಬಲ್ಲಾಳ್‌ ಶನಿವಾರ ಅನಾವರಣಗೊಳಿಸಿದರು   

ಉಡುಪಿ: ಬೇರೆ ಬೇರೆ ಭಾಷೆಗಳ ಮೂಲ ಕೃತಿಗಳ ಕುರಿತು ಅಧ್ಯಯನ ಮಾಡಲು ಸಂಶೋಧಕರು ಬಹು ಭಾಷೆಗಳನ್ನು ಕಲಿಯುವ ಅಗತ್ಯ ಇದೆ ಎಂದು ಸಾಹಿತಿ ಬಿ.ಎ. ವಿವೇಕ ರೈ ಅಭಿಪ್ರಾಯಪಟ್ಟರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಎಂಜಿಎಂ ಕಾಲೇಜಿನ ರವೀಂದ್ರ ಕಲಾಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗೋವಿಂದ ಪೈ ಸಂಶೋಧನ ಸಂಪುಟ–1 ರ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ಕೃತಿಗಳ ಇಂಗ್ಲಿಷ್‌ ಅನುವಾದದಲ್ಲಿ ಕೆಲವೊಂದು ತಪ್ಪುಗಳು ನುಸುಳಿರುತ್ತವೆ, ಈ ಸಂದರ್ಭದಲ್ಲಿ ಮೂಲ ಕೃತಿಗಳ ಲಿಪಿ ಜ್ಞಾನವಿದ್ದರೆ ಅವುಗಳನ್ನು ಪರಿಶೀಲಿಸಬಹುದು. ಇದೇ ಕಾರಣಕ್ಕೆ ರಾಷ್ಟ್ರಕವಿ ಗೋವಿಂದ ಪೈ ಅವರು ಹಲವು ಭಾಷೆಗಳ ಲಿಪಿಗಳನ್ನು ಓದುವ ಸಾಮರ್ಥ್ಯ ಬೆಳೆಸಿಕೊಂಡಿದ್ದರು ಎಂದು ಹೇಳಿದರು.

ADVERTISEMENT

ಗೋವಿಂದ ಪೈ ಅವರು ಪ್ರಾದೇಶಿಕ ಅಧ್ಯಯನದಲ್ಲಿ ತಮ್ಮದೇ ಆದ ಮಾದರಿಯನ್ನು ಅನುಸರಿಸಿದ್ದಾರೆ. ಅವರ ಸಂಶೋಧನಾ ಲೇಖನಗಳಲ್ಲಿ ಸ್ಥಳಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಇರುತ್ತಿತ್ತು. ಅವರ ಲೇಖನಗಳ ಗಟ್ಟಿತನಕ್ಕೆ ಅವರಲ್ಲಿದ್ದ ತಾದಾತ್ಮ್ಯ ಗುಣವೇ ಕಾರಣ ಎಂದರು.

ಗೋವಿಂದ ಪೈಗಳ ಸಂಶೋಧನಾ ಲೇಖನಗಳ ಮರು ಓದು ಆಗಬೇಕು. ಇದರಿಂದ ಹೊಸ ಹೊಳವುಗಳು ಲಭಿಸಲಿವೆ. ಪೈಗಳ ಲೇಖನಗಳನ್ನು ಅನೇಕ ಬಾರಿ ಓದಿದಾಗ ಮಾತ್ರ ಅರ್ಥೈಸಲು ಸಾಧ್ಯ ಎಂದು ಪ್ರತಿಪಾದಿಸಿದರು.

ವಿವಿಧ ಧರ್ಮಗಳ, ಅನೇಕ ಸಮುದಾಯಗಳ ಬಗ್ಗೆ ಪೈಗಳು ಸಂಶೋಧನ ಲೇಖನಗಳನ್ನು ಬರೆದಿದ್ದಾರೆ ಎಂದರು.

ಸಾಹಿತಿ ಮುರಳೀಧರ ಉಪಾಧ್ಯ ಹಿರಿಯಡ್ಕ ಮಾತನಾಡಿ, ಗೋವಿಂದ ಪೈ ಸಂಶೋಧನ ಸಂಪುಟದಲ್ಲಿ ಹೊಸ ಲೇಖನಗಳೂ ಸೇರಿಕೊಂಡಿವೆ. ಈ ಕೃತಿಯು ಎರಡು ಭಾಗವಾಗಿ ಪ್ರಕಟಗೊಂಡಿದ್ದು, ಇನ್ನೊಂದು ಭಾಗ ಶೀಘ್ರ ಬಿಡುಗಡೆಗೊಳ್ಳಲಿದೆ ಎಂದರು.

ಸಂಪುಟದ ಸಂಪಾದಕ ಪಾದೇಕಲ್ಲು ವಿಷ್ಣು ಭಟ್‌ ಮಾತನಾಡಿ, ಗೊವಿಂದ ಪೈಗಳು ತಮ್ಮ ಸಂಶೋಧನ ಲೇಖನಗಳನ್ನು ಕೃತಿಯ ರೂಪದಲ್ಲಿ ಪ್ರಕಟಿಸಿಲ್ಲ. ಅದು ನಾಡಿನಾದ್ಯಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಅವೆಲ್ಲವನ್ನೂ ಒಟ್ಟುಗೂಡಿಸಿ ಸಂಶೋಧನ ಸಂಪುಟವನ್ನು ಹೊರತರಲಾಗಿದೆ ಎಂದು ಹೇಳಿದರು.

ಮಾಹೆ ಸಹ ಕುಲಾಧಿಪತಿ ಡಾ. ಎಚ್‌.ಎಸ್‌. ಬಲ್ಲಾಳ್‌ ಕೃತಿ ಅನಾವರಣಗೊಳಿಸಿದರು.  ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕರಿ ಡಾ. ಬಿ. ಜಗದೀಶ್‌ ಶೆಟ್ಟಿ, ಎಂಜಿಎಂ ಕಾಲೇಜು ಪ್ರಾಂಶುಪಾಲ ಲಕ್ಷ್ಮಿನಾರಾಯಣ ಕಾರಂತ ಉಪಸ್ಥಿತರಿದ್ದರು.

ಅರವಿಂದ ಹೆಬ್ಬಾರ್‌ ಪ್ರಾರ್ಥಿಸಿದರು. ಅರುಣ್‌ ಕುಮಾರ್‌ ಎಸ್‌. ಆರ್‌. ಕಾರ್ಯಕ್ರಮ ನಿರೂಪಿಸಿದರು.

ಸಂಶೋಧನೆ ಎಂದರೆ ಕೇವಲ ಸಾಮಗ್ರಿ ಸಂಗ್ರಹಣೆಯಲ್ಲ. ಅದರಲ್ಲಿ ತಾತ್ವಿಕತೆಯು ಮುಖ್ಯವಾಗುತ್ತದೆ. ಯುವ ಪೀಳಿಗೆಯವರು ಗೋವಿಂದ ಪೈಗಳ ಕೃತಿಗಳನ್ನು ಓದಬೇಕು
-ಬಿ.ಎ.ವಿವೇಕ ರೈ ಸಾಹಿತಿ
ಕವಿತ್ವ ಮತ್ತು ಸಂಶೋಧನೆಯನ್ನು ಒಟ್ಟಿಗೆ ‘ಸವ್ಯಸಾಚಿಸಿ’ದವರು ಗೋವಿಂದ ಪೈಗಳು. ವಿಸ್ತಾರವಾದ ಓದು ಅವರ ಲೇಖನಗಳಲ್ಲಿ ಪ್ರತಿಫಲಿಸಿವೆ
-ಪಾದೇಕಲ್ಲು ವಿಷ್ಣು ಭಟ್‌ ಸಂಪುಟದ ಸಂಪಾದಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.