ಉಡುಪಿ: ಸೌಹಾರ್ದದ ನೆಲವಾಗಿರುವ ಕರಾವಳಿಯಲ್ಲಿ ದ್ವೇಷದ ವಿಷ ಬೀಜ ಬಿತ್ತಲಾಗಿದೆ. ನಾವೆಲ್ಲರೂ ಒಟ್ಟಾಗಿ ವಿಷ ಬೀಜದ ಫಸಲು ಬಿತ್ತಿದವರ ಕೈ ಸೇರದಂತೆ ತಡೆಯಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್ ಕರೆ ನೀಡಿದರು.
ಶನಿವಾರ ಕ್ರಿಶ್ಚಿಯನ್ ಶಾಲೆಯ ಮೈದಾನದಲ್ಲಿ ಸೌಹಾರ್ದಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಹಬಾಳ್ವೆ ಸಮಾವೇಶದಲ್ಲಿ ಮಾತನಾಡಿ, ದೇಶ ಒಡೆದರೆ ಪ್ರತಿಯಾಗಿ ದೇಶ ಕಟ್ಟೋಣ, ಮಂದಿರಗಳನ್ನು ಕಟ್ಟಿದರೆ ಬದಲಾಗಿ ಸೌಹಾರ್ದ ಸೌಧಗಳನ್ನು ನಿರ್ಮಾಣ ಮಾಡೋಣ ಎಂದರು.
ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವುದು ನಿಜವಾದ ದೇಶ ಧರ್ಮ. ಧರ್ಮಪಾಲಿಸಲು ಸಾಧ್ಯವಿಲ್ಲದವರಿಗೆ ಅಧಿಕಾರದ ಕುರ್ಚಿಯಲ್ಲಿ ಕೂರುವ ಅರ್ಹತೆ ಇಲ್ಲ. ದೇಶಪ್ರೇಮಿಗಳು ಯಾರು, ದೇಶದ್ರೋಹಿಗಳು ಯಾರು ಎಂದು ಕೆಲವರು ಪ್ರಮಾಣಪತ್ರ ನೀಡುತ್ತಿದ್ದಾರೆ. ದೇಶ ಕಟ್ಟುವವರು ಮಾತ್ರ ದೇಶಪ್ರೇಮಿಗಳು, ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕುವವರು ದೇಶದ್ರೋಹಿಗಳು ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಬುಲ್ಡೋಜರ್ ರಾಜಕಾರಣ ನಡೆಯುತ್ತಿದ್ದು, ಸಂವಿಧಾನದ ಆಶಯಗಳ ಮೇಲೆ ಬುಲ್ಡೋಜರ್ ಹರಿಸಲಾಗುತ್ತಿದೆ. ಪ್ರತಿಯೊಬ್ಬರೂ ಬುಲ್ಡೋಜರ್ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕಿದೆ ಎಂದರು.
ಆಳುವವರ ಕಿಸೆಯಲ್ಲಿ ಮಾಧ್ಯಮಗಳು, ಪೊಲೀಸ್ ಇಲಾಖೆ, ಅಧಿಕಾರ ಇದ್ದರೆ, ನಮ್ಮೊಂದಿಗೆ ಬುದ್ಧ, ಬಸವಣ್ಣ, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಮಹಾತ್ಮಾ ಗಾಂಧಿ, ಅಂಬೇಡ್ಕರ್ ಕೊಟ್ಟ ಸಂವಿಧಾನ ಹಾಗೂ ಸೂಫಿ ಪರಂಪರೆ ಇದೆ. ಮಹಾತ್ಮರ ಸಿದ್ಧಾಂತಗಳನ್ನು ಎಂದಿಗೂ ಸೋಲಲು ಬಿಡಬಾರದು ಎಂದು ಕರೆ ನೀಡಿದರು.
ಸಾಮಾಜಿಕ ಹೋರಾಟಗಾ ಶಶಿಕಾಂತ್ ಸೆಂಥಿಲ್ ಮಾತನಾಡಿ, ಉಡುಪಿಯ ಸಹಬಾಳ್ವೆ ಸಮಾವೇಶ ದೇಶದೆಲ್ಲೆಡೆ ವಿಸ್ತರಿಸಲಿ, ಯುವಜನತೆ ಇದರ ನೇತೃತ್ವ ವಹಿಸಲಿ. ದ್ವೇಷ ಹರಡುವವರಿಗೂ ಪ್ರೀತಿ, ಸೌಹಾರ್ದ ಹಂಚಲಿ ಎಂದರು.
ಸಮಾವೇಶಕ್ಕೂ ಮುನ್ನ ನಗರದ ಹುತಾತ್ಮರ ಸ್ಮಾರಕದ ಎದುರು ಹೋರಾಟಗಾರರಾದ ಕೆ.ನೀಲಾ, ನಜ್ಮಾ ಚಿಕ್ಕನರೇರಳೆ, ಮಾವಳ್ಳಿ ಶಂಕರ್, ಚಾಮರಸ ಮಾಲಿ ಪಾಟೀಲ್, ಎಚ್.ಆರ್.ಬಸವರಾಜಪ್ಪ, ಸಬಿಹಾ ಫಾತಿಮಾ ಏಳು ಬಣ್ಣದ ಬಾವುಟಗಳನ್ನು ಎತ್ತಿ ಹಿಡಿಯುವ ಮೂಲಕ ಸಾಮರಸ್ಯ ನಡಿಗೆಗೆ ಚಾಲನೆ ನೀಡಿದರು.
ಸಾಮಾಜಿಕ ಹೋರಾಟಗಾರ ಶಶಿಕಾಂತ್ ಸೆಂಥಿಲ್, ಬಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು, ಖಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪುತ್ತೂರು ಮಲಂಕರ ಕ್ಯಾಥೊಲಿಕ್ ಚರ್ಚ್‌ನ ಬಿಷಪ್ ವರ್ಗೀಸ್ ಮಾರ್ ಮಕರಿಕೋಸ್, ಮೈಸೂರು ಬಸವ ಜ್ಞಾನ ಮಂದಿರದ ಡಾ.ಮಾತೆ ಬಸವಾಂಜಲಿ, ಬಸವಧರ್ಮ ಪೀಠದ ಬಸವ ಪ್ರಕಾಶ ಸ್ವಾಮೀಜಿ, ಲೋಕರತ್ನ ಬುದ್ಧವಿಹಾರದ ಭಂತೆ ಮಾತೆ ಮೈತ್ರಿ, ಮೌಲಾನ ಇಪ್ಪಿಕಾರ್ ಅಹ್ಮದ್ ಕಾಸ್ಮಿ, ಡಾ.ಎಂ.ಎಸ್.ಎಂ.ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್, ಮೌಲಾನ ಯು.ಕೆ.ಅಬ್ದುಲ್ ಅಝೀಜ್ ದಾರಿಮಿ, ಫಾದರ್ ಚೇತನ್ ಲೋಬೋ, ಗ್ಯಾನಿ ಬಲರಾಜ್ ಸಿಂಗ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.