ಕುಂದಾಪುರ: ಉತ್ತರ ಪ್ರದೇಶದ ಉನ್ನವೊ ಲೋಕಸಭಾ ಕ್ಷೇತ್ರವನ್ನುಪ್ರತಿನಿಧಿಸುತ್ತಿರುವ ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್, ತೆಕ್ಕಟ್ಟೆಯ ಸಮೀಪದ ಕೊಮೆಯಲ್ಲಿ ಡಾ.ತನ್ಮಯ ಗೋಸ್ವಾಮಿ ನಡೆಸುತ್ತಿರುವ ‘ಆಯುರ್ವೇದ ಆಶ್ರಮ’ ದಲ್ಲಿ ಪಂಚಕರ್ಮ ಹಾಗೂ ಪ್ರಕೃತಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಸಾಕ್ಷಿ ಮಹಾರಾಜ್ ಉತ್ತರ ಪ್ರದೇಶದಿಂದ ಕರ್ನಾಟಕದ ಕರಾವಳಿಯ ಸೊಬಗಿಗೆ ಮನಸೋತು ಇಲ್ಲಿಗೆ ಬಂದಿರುವುದೇ ವಿಶೇಷ. ದೇಶದ ಕೆಲವೇ ಮಂದಿಗೆ ಇರುವ ವೈ–ಪ್ಲಸ್ ಭದ್ರತೆಯನ್ನು ಹೊಂದಿರುವ ಅವರು, ಇದನ್ನೆಲ್ಲ ಮರೆತು ಆಯುರ್ವೇದ ಆಶ್ರಮದ ವೈದ್ಯ ಡಾ.ತನ್ಮಯ ಗೋಸ್ವಾಮಿ ಅವರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ಶುಕ್ರವಾರದಿಂದ ಆಶ್ರಮದಲ್ಲಿ ಚಿಕಿತ್ಸೆ ಪಡದುಕೊಳ್ಳುತ್ತಿರುವ ಅವರು, ಬುಧವಾರ ಬೆಳಿಗ್ಗೆ ಮಂಗಳೂರಿನ ವಿಮಾನ ನಿಲ್ದಾಣದಿಂದ ಉತ್ತರ ಪ್ರದೇಶಕ್ಕೆ ಹಿಂದಿರುಗುವರು.
ಸಾಕ್ಷಿ ಮಹಾರಾಜ್ ಅವರಿಗೆ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಆಶ್ರಮದ ಮುಖ್ಯಸ್ಥ ಡಾ.ತನ್ಮಯ್ ಗೋಸ್ವಾಮಿ ಅವರು, ‘ಬೆಳಿಗ್ಗೆ ಯೋಗಾಭ್ಯಾಸದಿಂದ ಚಿಕಿತ್ಸೆ ಪ್ರಾರಂಭವಾಗುತ್ತದೆ. ಮಧ್ಯಾಹ್ಮದವರೆಗೂ ಪಂಚಕರ್ಮದ ಪದ್ಧತಿಯಲ್ಲಿ ಚಿಕಿತ್ಸೆ ನೀಡಿ ದೇಹವನ್ನು ಹದಗೊಳಿಸಲಾಗುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ಲಘು ಆಹಾರ. ಸಂಜೆ ಧ್ಯಾನ ಹಾಗೂ ಸಮುದ್ರ ದಂಡೆಯಲ್ಲಿ ವಾಯುವಿಹಾರ ನೀಡಲಾಗುತ್ತದೆ. 65 ವರ್ಷ ದಾಟಿರುವ ಸಾಕ್ಷಿ ಮಹಾರಾಜ್ ಅವರಿಗೆ ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಲ್ಲ. ವಯೋಸಹಜ ನರ ಹಾಗೂ ದೇಹ ಬಲವರ್ಧನೆಗಾಗಿ ಕೇವಲ 1 ವಾರದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.