ಬ್ರಹ್ಮಾವರ: ಸಾಲಿಗ್ರಾಮ ಗುರುನರಸಿಂಹ ಮತ್ತು ಆಂಜನೇಯ ದೇವಸ್ಥಾನದ ವಾರ್ಷಿಕ ಜಾತ್ರೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ನಡೆದ ರಥಾರೋಹಣದಲ್ಲಿ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಲಾಯಿತು. ವೇದಘೋಷದೊಂದಿಗೆ ಆಂಜನೇಯ ದೇವಸ್ಥಾನ
ದವರೆಗೆ ಮೆರವಣಿಗೆ ಮಾಡಲಾಯಿತು.
ಭಕ್ತಾದಿಗಳು ಆಂಜನೇಯ ಹಾಗೂ ಗುರುನರಸಿಂಹನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಅನ್ನಸಂತರ್ಪಣೆ ಮತ್ತು ಪಾನಕ, ಪನಿವಾರ ಸೇವೆ ನಡೆಯಿತು.
ಗುರುನರಸಿಂಹ ದೇವಸ್ಥಾನವನ್ನು ದೇಗುಲದ ವತಿಯಿಂದ ಹಾಗೂ ಆಂಜನೇಯ ದೇವಸ್ಥಾನವನ್ನು ಆಂಜನೇಯ ಸೇವಾ ಟ್ರಸ್ಟ್ ವತಿಯಿಂದ ವಿಶೇಷ ಹೂವಿನ ಅಲಂಕಾರದಿಂದ ಶೃಂಗರಿಸಲಾಗಿತ್ತು.
ಕಾರಂತ ಬೀದಿಯ ಎರಡೂ ಬದಿಯಲ್ಲಿ ಸ್ಥಳೀಯ ಭಕ್ತಾದಿಗಳ ವತಿಯಿಂದ ವಿದ್ಯುತ್ ದೀಪದಿಂದ ಅಲಂಕಾರ ಮಾಡಲಾಗಿತ್ತು.
ಸಂಜೆ ರಥಾವರೋಹಣ, ಓಲಗ ಮಂಟಪ ಸೇವೆ, ಅಷ್ಟಾವಧಾನ ಸೇವೆ, ಭಕ್ತಿ ಲಹರಿ ಸಂಗೀತ ಸೇವೆ, ಮಹಾಮಂಗಳಾರತಿ, ಭೂತಬಲಿ, ಶಯನೋತ್ಸವ ನಡೆಯಿತು.
ಮಂಗಳವಾರ ಬೆಳಿಗ್ಗೆ ಪ್ರಭೋದೋತ್ಸವ, ಸಂಜೆ ಓಕುಳಿ ಸೇವೆ, ರಜತ ರಥೋತ್ಸವ, ಅವಭೃತ ಸ್ನಾನ ನಡೆಯಲಿದೆ.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ, ಉಪಾಧ್ಯಕ್ಷ ವೇದಮೂರ್ತಿ ಗಣೇಶಮೂರ್ತಿ ನಾವುಡ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.