ADVERTISEMENT

ದೊಡ್ಡ ಸಾಮಗರು ಉತ್ತಮ ಸಂಸ್ಕಾರದ ಪ್ರತೀಕ

ಪುಸ್ತಕ ಅನಾವರಣಗೊಳಿಸಿ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 16:21 IST
Last Updated 29 ಜೂನ್ 2024, 16:21 IST
‘ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥವನ್ನು  ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಶನಿವಾರ ಲೋಕಾರ್ಪಣೆ ಮಾಡಿದರು
‘ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥವನ್ನು  ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಶನಿವಾರ ಲೋಕಾರ್ಪಣೆ ಮಾಡಿದರು   

ಉಡುಪಿ: ಸ್ವಾತಂತ್ರ್ಯ ಹೋರಾಟಗಾರ, ಯಕ್ಷಗಾನದ ನವಯುಗದ ಪ್ರವರ್ತಕರಾದ ಮಲ್ಪೆ ಶಂಕರನಾರಾಯಣ ಸಾಮಗರು (ದೊಡ್ಡ ಸಾಮಗರು) ಉತ್ತಮ ಸಂಸ್ಕಾರದ ಪ್ರತೀಕವಾಗಿದ್ದಾರೆ ಎಂದು ಕಾಸರಗೋಡಿನ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.

ಮಲ್ಪೆ ಶಂಕರನಾರಾಯಣ ಸಾಮಗರ ಜೀವನ ದರ್ಶನವನ್ನು ಕಟ್ಟಿಕೊಡುವ ದಿನೇಶ ಉಪ್ಪೂರ ರಚಿಸಿರುವ ‘ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥವನ್ನು ಉಡುಪಿಯ ಯಕ್ಷಗಾನ ಕಲಾರಂಗದ ನೂತನ ಐವೈಸಿ ಸಭಾಗ್ರಹದಲ್ಲಿ ಶನಿವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.

ದೊಡ್ಡ ಸಾಮಗರಿಗೂ ಎಡನೀರು ಮಠಕ್ಕೂ ಅವಿನಾಭಾವ ಸಂಬಂಧವಿದೆ. ಅವರು ಕೇಶವಾನಂದ ಭಾರತಿ ಸ್ವಾಮೀಜಿಗೆ ಆಪ್ತರಾಗಿದ್ದರು. ಗಾಂಧಿವಾದಿಯಾಗಿದ್ದ ದೊಡ್ಡ ಸಾಮಗರು ಬದುಕಿನುದ್ದಕ್ಕೂ ಅದನ್ನು ಪಾಲಿಸಿದವರು. ಅವರ ವ್ಯಕ್ತಿತ್ವವು ಅನುಕರಣೀಯವಾಗಿತ್ತು ಎಂದು ಬಣ್ಣಿಸಿದರು.‌

ADVERTISEMENT

ದೊಡ್ಡ ಕಲಾವಿದರಾದರೂ ಸರಳತೆಯಿಂದ ಬದುಕಿದ್ದರು. ಅವರ ಕುರಿತು ಇಂತಹ ಕೃತಿ ಲೋಕಾರ್ಪಣೆಯಾಗಿರುವುದು ನಿಜಕ್ಕೂ ಸಂತಸದ ವಿಷಯ. ಮರೆಯಾದ ಹಲವಾರು ಯಕ್ಷಗಾನ ದಿಗ್ಗಜರ ಕುರಿತು ಇಂತಹ ಕೃತಿಗಳು ರಚನೆಯಾದರೆ ಮುಂದಿನ ಪೀಳಿಗೆಗೂ ಅವರ ಮಹತ್ವ ತಿಳಿಯಲಿದೆ ಎಂದರು.

ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಅವರು ಪುಸ್ತಕ ಪರಿಚಯ ಮಾಡಿದರು.

ಪ್ರಭಾಕರ ಜೋಶಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಹೆ ಸಹಕುಲಾಧಿಪತಿ ಡಾ. ನಾರಾಯಣ ಸಭಾಹಿತ್, ಮಣಿಪಾಲ ಯುನಿವರ್ಸಲ್ ಪ್ರೆಸ್‌ನ ಸಂಪಾದಕಿ ನೀತಾ ಇನಾಂದಾರ್, ಪ್ರದೀಪ ಕುಮಾರ್ ಕಲ್ಕೂರ , ಕಲಾವಿದ ಕೋಳ್ಯೂರು ರಾಮಚಂದ್ರ ರಾವ್, ಸಾಹಿತಿಗಳಾದ ಭಾಮ ಸಾಮಗ, ದಿನೇಶ್ ಉಪ್ಪೂರ ಉಪಸ್ಥಿತರಿದ್ದರು. ಎಂ.ಎಲ್.ಸಾಮಗ ಸ್ವಾಗತಿಸಿದರು.

ಕಾರ್ಯಕ್ರಮದ ಬಳಿಕ ಯಕ್ಷಗಾನ ತಾಳಮದ್ದಳೆ ‘ಶಲ್ಯ ಸಾರಥ್ಯ’ವನ್ನು ಕಲಾವಿದರಾದ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯಕೃಷ್ಣ ಪದ್ಯಾಣ, ಪುತ್ತಿಗೆ ಕೌಶಿಕ್ ರಾವ್, ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್, ಮತ್ತು ಹಿರಣ್ಯ ವೆಂಕಟೇಶ ಭಟ್ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.