ADVERTISEMENT

ಸಂಕ್ರಮಣಕ್ಕೆ ಕಾಯುತ್ತಿರುವ ಹೆಮ್ಮಾಡಿಯ ಸೇವಂತಿಗೆ

ಹಳದಿ ಬಣ್ಣದ ಮನಸೂರೆಗೊಳ್ಳುವ ಹೂವಿಗೆ ಭಾರಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 7:04 IST
Last Updated 13 ಜನವರಿ 2024, 7:04 IST
ಕುಂದಾಪುರ ತಾಲ್ಲೂಕಿನ ಹೆಮ್ಮಾಡಿಯ ಪರಿಸರದ ಕೃಷಿ ಗದ್ದೆಯಲ್ಲಿ ಬೆಳೆಯುವ ಸೇವಂತಿಗೆ ಹೂ.
ಕುಂದಾಪುರ ತಾಲ್ಲೂಕಿನ ಹೆಮ್ಮಾಡಿಯ ಪರಿಸರದ ಕೃಷಿ ಗದ್ದೆಯಲ್ಲಿ ಬೆಳೆಯುವ ಸೇವಂತಿಗೆ ಹೂ.   

ಕುಂದಾಪುರ: ಸಂಕ್ರಾಂತಿಯ ಪರ್ವ ಕಾಲದಲ್ಲಿ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೆ ಹಾಗೂ ಕೆಂಡ ಮಹೋತ್ಸವದಲ್ಲಿ ಬ್ರಹ್ಮ ಲಿಂಗೇಶ್ವರನಿಗೆ ಸೇವಂತಿಗೆ ಹೂ ಸಮರ್ಪಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.

ಬ್ರಹ್ಮಲಿಂಗೇಶ್ವರನ ಜಾತ್ರೆಯಲ್ಲಿ ಹಳದಿ ಬಣ್ಣದ ಕಣ್ಮನ ಸೆಳೆಯುವ ಸುವಾಸನೆ ಬೀರುವ ಸೇವಂತಿಗೆ ಎಲ್ಲಿಲ್ಲದ ಬೇಡಿಕೆ. ತಲೆ ಮೇಲೆ ಹಣ್ಣು ಕಾಯಿ ಹಾಗೂ ಹರಕೆ ಹೊತ್ತು ಸಾಗುವ ಭಕ್ತರ ಹರಿವಾಣ ಅಥವಾ ಬುಟ್ಟಿಯಲ್ಲಿ ಸೇವಂತಿಗೂ ವಿಶೇಷ ಸ್ಥಾನ-ಮಾನ ಇರುವುದು ಸೇವಂತಿಗೆಯ ಮಹತ್ವವನ್ನು ಸಾರುತ್ತದೆ.

ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರನಿಗೆ ಅತ್ಯಂತ ಪ್ರಿಯವಾದ ಹೂ ಎನಿಸಿಕೊಂಡಿರುವ ಸೇವಂತಿಗೆಯನ್ನು ಪ್ರತಿ ವರ್ಷ ಮಾರಣಕಟ್ಟೆ ಜಾತ್ರೆಗೆಂದೇ ಬೆಳೆಯುವ ಕೃಷಿಕ ವರ್ಗ ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚಾಗಿರುವುದು ವಿಶೇಷ. ಸೇವಂತಿಗೆ ಹೂವಿನ ಕೃಷಿ ಮಾಡುವ ಆಸಕ್ತಿ ಒಂದೆಡೆಯಾದರೆ, ಹೂವಿನೊಂದಿಗೆ ಇರುವ ಧಾರ್ಮಿಕ ನಂಬಿಕೆ ಸೇವಂತಿಗೆ ಬೆಳೆಯಲು ಪ್ರೇರಣೆಯಾಗಿದೆ.

ADVERTISEMENT

ಚಳಿಗಾಲದ ಋತು ಬದಲಾವಣೆಯನ್ನು ಈ ಭಾಗದಲ್ಲಿ ಸೇವಂತಿಗೆ ಹೂವಿನೊಂದಿಗೆ ಗುರುತಿಸುವುದು ವಿಶೇಷ. ಸೇವಂತಿಗೆ ಅರಳಿದರೆ ಚಳಿ ಹೆಚ್ಚಾಗಿದೆ ಎಂದರ್ಥ.

ಹೆಮ್ಮಾಡಿ ಸೇವಂತಿ: ತಾಲ್ಲೂಕಿನ ಹೆಮ್ಮಾಡಿ, ಕಟ್ಟು, ಭಟ್ರ ಬೆಟ್ಟು, ಹೊಸ್ಕಳಿ, ಹರೆಗೋಡು, ಸುಳ್ಸೆ, ಗುಡ್ಡೆಮನೆ, ದೇವಸ್ಥಾನ ಬೆಟ್ಟು ಸೇರಿದಂತೆ ಹಲವು ಕಡೆಗಳಲ್ಲಿ ಸೇವಂತಿಗೆ ಹೂವಿನ ಕೃಷಿ ಹೆಚ್ಚಾಗಿದೆ. ಗಾತ್ರದಲ್ಲಿ ಚಿಕ್ಕದಾದರೂ ನೋಡಲು ಆಕರ್ಷಕವಾಗಿರುವ ಹೆಮ್ಮಾಡಿ ಸೇವಂತಿಗೆಯನ್ನು ಆಡು ಭಾಷೆಯಲ್ಲಿ 'ಹೆಮ್ಮಾಡಿ ಶ್ಯಾಮಂತಿ' ಎಂದೂ ಕರೆಯಲಾಗುತ್ತದೆ.

ಆಗಸ್ಟ್‌ನಲ್ಲಿ ಭತ್ತದ ಕಟಾವು ಮುಗಿಸುವ ಕೃಷಿಕರು ಬಳಿಕ ಗದ್ದೆಗಳನ್ನು ಹಸನು ಮಾಡಿಕೊಂಡು ಸೇವಂತಿಗೆ ಗಿಡಗಳನ್ನು ನಾಟಿ ಮಾಡುತ್ತಾರೆ. ನೆಟ್ಟ ಗಿಡಗಳನ್ನು ಮೂರು ತಿಂಗಳು ಪೋಷಣೆ ಮಾಡಿ ಜನವರಿ ಎರಡನೇ ವಾರದಲ್ಲಿ ಹೂ ಕಟಾವು ಆರಂಭಿಸುತ್ತಾರೆ.

ಪ್ರತಿ ವರ್ಷ ಕೃಷಿಕರು ಸಂಕ್ರಾಂತಿ ಹಬ್ಬದ ಮೊದಲ ದಿನ ಸೇವಂತಿಗೆ ಹೂ ಕೊಯ್ದು ಬುಟ್ಟಿಯಲ್ಲಿ ತುಂಬಿಕೊಂಡು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸನ್ನಿಧಾನಕ್ಕೆ ಮೊದಲ ಹೂ ಕೊಯ್ಲಿನ ಅರ್ಪಣೆ ಸಲ್ಲಿಸಿದ ಬಳಿಕವೇ ಉಳಿಕೆ ಹೂವನ್ನು ಮಾರಾಟ ಮಾಡುವ ಸಂಪ್ರದಾಯ ಇದೆ. ಮಾರಣಕಟ್ಟೆಯ ಜಾತ್ರೆಯ ಬಳಿಕ ನಡೆಯುವ ಎಲ್ಲ ದೈವ-ದೇವಸ್ಥಾನಗಳ ಕೆಂಡ ಮಹೋತ್ಸವ, ಜಾತ್ರೆ, ಉತ್ಸವಗಳಲ್ಲಿಯೂ ಹೆಮ್ಮಾಡಿ ಸೇವಂತಿಗೆ ಆಗ್ರ ಸ್ಥಾನವಿದೆ.

ಸೇವಂತಿಗೆ ಹರಕೆ: ಇಷ್ಟಾರ್ಥಗಳ ಈಡೇರಿಕೆಗೆ ಬ್ರಹ್ಮಲಿಂಗೇಶ್ವರನಿಗೆ ಭಕ್ತರು ಸೇವಂತಿಗೆ ಹರಕೆ ಸಲ್ಲಿಸುವ ವಾಡಿಕೆಗಳು ಈ ಭಾಗದಲ್ಲಿ ಹೆಚ್ಚಾಗಿದೆ. ವಾರ್ಷಿಕ ಜಾತ್ರೆ, ಹಾಲು ಹಬ್ಬ ಸೇವೆ, ಕೆಂಡ ಮಹೋತ್ಸವದ ವಿಶೇಷ ಸಂದರ್ಭಗಳಲ್ಲಿ ದೇವಸ್ಥಾನ ಹಾಗೂ ದೈವ ಸ್ಥಾನಕ್ಕೆ ಬರುವ ಭಕ್ತರು ದೇವರಿಗೆ ಸೇವಂತಿ ಸಮರ್ಪಣೆ ಮಾಡುತ್ತಾರೆ.

ಮಾರಣಕಟ್ಟೆಯ ಜಾತ್ರೆಯ ಬಳಿಕ ಸೇವಂತಿಗೆ ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುವ ಜಾತ್ರೆ, ವಾರ್ಷಿಕ ಹಬ್ಬ, ಕೋಲ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ರವಾನೆಯಾಗುತ್ತದೆ. ಈಚೆಗೆ ಹೂ ಅರಳುವ ಸಂದರ್ಭ ಸಣ್ಣ ಸೊಳ್ಳೆಗಳ ದಾಳಿಯಿಂದ ಹೂ ಅರಳುವ ಮೊದಲೇ ಸುರುಟುಹೋಗುತ್ತಿದೆ.

ಅಕಾಲಿಕ ಮಳೆ, ಕಾರ್ಮಿಕರ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿರುವ ಸೇವಂತಿಗೆ ಬೆಳೆಗಾರರು ಸೇವಂತಿಗೆ ಬೆಳೆಯಿಂದ ವಿಮುಖರಾಗುತ್ತಿರುವುದು ಕಂಡು ಬರುತ್ತಿದೆ. ಸರ್ಕಾರ  ಸೇವಂತಿಗೆ ಬೆಳೆಗಾರರಗೂ ಪ್ರೋತ್ಸಾಹ ಹಾಗೂ ಬೆಂಬಲ ನೀಡಬೇಕು ಎನ್ನುವುದು ಈ ಭಾಗದ ರೈತಾರ ಒತ್ತಾಸೆ.

ಮ್ಮಾಡಿ ಪರಿಸರದ ಪ್ರಮುಖ ಬೆಳೆ ಹಳದಿ ಬಣ್ಣದ ಹೂ ದೇವರ ಹರಕೆಗೆ ಬಳಕೆ ಸರ್ಕಾರದ ಬೆಂಬಲದ ನಿರೀಕ್ಷೆಯಲ್ಲಿ ಬೆಳೆಗಾರರು

‘ಸಂಕ್ರಮಣಕ್ಕೂ ಹೆಮ್ಮಾಡಿಯ ಸೇವಂತಿಗೆ ಹೂವಿಗೂ ಅವಿನಾಭಾವ ಸಂಬಂಧ’ ಮಾರಣಕಟ್ಟೆಯ ಸಂಕ್ರಮಣ ಜಾತ್ರೆಗೂ ಹೆಮ್ಮಾಡಿಯ ಸೇವಂತಿಗೆ ಹೂವಿಗೂ ಅವಿನಾಭಾವ ಸಂಬಂಧವಿದ್ದು ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕ್ಷೇತ್ರದ ವಾರ್ಷಿಕ ಜಾತ್ರೆಗೆ ಆಗಮಿಸುವ ಪಾರಂಪರಿಕ ಭಕ್ತರು ಬ್ರಹ್ಮಲಿಂಗೇಶ್ವರಿನಿಗೆ ಸೇವಂತಿಗೆ ಒಪ್ಪಿಸುವ ಸಂಪ್ರದಾಯ ಇರಿಸಿಕೊಂಡಿದ್ದಾರೆ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ್ ಶೆಟ್ಟಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.