ADVERTISEMENT

ಸರ್ವ ಭಾಷೆಗಳಿಗೆ ಸಂಸ್ಕೃತ ಮೂಲ: ಸುಗುಣೇಂದ್ರತೀರ್ಥ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 4:20 IST
Last Updated 27 ಅಕ್ಟೋಬರ್ 2024, 4:20 IST
ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಸನ್ಮಾನಿಸಲಾಯಿತು
ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಸನ್ಮಾನಿಸಲಾಯಿತು   

ಉಡುಪಿ: ಆಂಗ್ಲ ಭಾಷೆ ಸೇರಿದಂತೆ ಸರ್ವ ಭಾಷೆಗಳಿಗೂ ಸಂಸ್ಕೃತವೇ ಮೂಲ ಭಾಷೆಯಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರಿಪಾದರು ಹೇಳಿದರು.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಸಂಸ್ಕೃತವು ವಿಶ್ವಮಾನ್ಯ ಭಾಷೆಯಾಗಿದ್ದು, ಭಗವದ್ಗೀತೆಯು ವಿಶ್ವದಲ್ಲೇ ಶ್ರೇಷ್ಠ ಗ್ರಂಥವಾಗಿದೆ. ಶ್ರೀಕೃಷ್ಣನು ಗೀತೆಯಲ್ಲಿ ಶಾಂತಿಯ ಸಂದೇಶ ಸಾರಿದ್ದಾನೆ ಎಂದರು.

ಭಾರತವು ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ. ಸರ್ವ ಧರ್ಮಗಳ ಸಾಮರಸ್ಯ, ಸಹಬಾಳ್ವೆ ಮೂಲಕ ನಮ್ಮ ದೇಶ ಉದಾತ್ತವಾಗಿದೆ. ವಿದೇಶಗಳಲ್ಲಿ ಏಕ ಧರ್ಮವಿದ್ದರೂ ಅಲ್ಲಿ ವೈಚಾರಿಕ ಸ್ವಾತಂತ್ರ್ಯವಿಲ್ಲ. ಆದರೆ ನಮ್ಮ ದೇಶಗಳಲ್ಲಿ ಹಲವು ಧರ್ಮಗಳ ಜನರು ಶಾಂತಿ, ಸಹಬಾಳ್ವೆಯಿಂದ ಬದುಕುತ್ತಿದ್ದಾರೆ ಎಂದದು ಪ್ರತಿಪಾದಿಸಿದರು.

ADVERTISEMENT

ದುಷ್ಟರಿಗೆ ಶಿಕ್ಷೆ ನೀಡುವ ಮತ್ತು ಶಿಷ್ಟರನ್ನು ಪರಿಪಾಲಿಸುವ ಸಂದೇಶವನ್ನು ನಮ್ಮ ಗ್ರಂಥಗಳಲ್ಲಿ ಪ್ರತಿಪಾದಿಸಲಾಗಿದೆ. ಭಾರತೀಯ ತತ್ವ ಶಾಸ್ತ್ರಗಳು ವಿಷಯ ವೈಶಾಲ್ಯತೆಯಿಂದಾಗಿ ಜಗತ್ತಿನ ಎಲ್ಲೆಡೆಗಳಿಂದ ಪ್ರಶಂಸಗೆ ಪಾತ್ರವಾಗಿವೆ ಎಂದರು.

ಸಂಸ್ಕೃತ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ದಿನೇಶ್‌ ಕಾಮತ್‌ ಮಾತನಾಡಿ, ಹಲವು ದಾಳಿಗಳನ್ನು ಸಹಿಸಿಕೊಂಡು, ವಸಾಹತು ಮನಃಸ್ಥಿತಿಯನ್ನು ಕಿತ್ತೊಗೆದು ನಮ್ಮ ಪ್ರಾಚ್ಯ ವಿದ್ಯೆಯು ಇಂದಿಗೂ ಸದೃಢವಾಗಿ ನೆಲೆ ನಿಂತಿದೆ ಎಂದು ಹೇಳಿದರು.

ಇಂಡಿಯನ್ ಕೌನ್ಸಿಲ್ ಆಫ್ ಫಿಲಾಸಫಿಕಲ್ ರಿಸರ್ಚ್‌ನ ಸದಸ್ಯ ಕಾರ್ಯದರ್ಶಿ ಪ್ರೊ. ಸಚ್ಚಿದಾನಂದ ಮಿಶ್ರಾ ಅವರು ಗೋಷ್ಠಿಯಲ್ಲಿ ಮಾತನಾಡಿದರು

ಸಾತ್ವಿಕ ಆಹಾರಕ್ಕೂ ಸಾತ್ವಿಕ ಗುಣಕ್ಕೂ ನೇರವಾದ ಸಂಬಂಧವಿದೆ. ಇಂತಹ ವಿಚಾರಗಳ ಬಗ್ಗೆಯೂ ಅಧ್ಯಯನ ನಡೆಯಬೇಕು ಎಂದು ಆಶಿಸಿದ ಅವರು, ಭಗವದ್ಗೀತೆಯಲ್ಲಿ ಹೇಳಿರುವ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಆದ್ದರಿಂದ ಅದು ಸಾರ್ವಕಾಲಿಕವಾಗಿದೆ ಎಂದರು.

ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಸನ್ಮಾನಿಸಲಾಯಿತು. ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರತೀರ್ಥ ಸ್ವಾಮೀಜಿ, ಸರೋಜಾ ಭಾಟೆ, ಶ್ರೀನಿವಾಸ ವರಖೇಡಿ, ಆಚಾರ್ಯ ವೀರನಾರಾಯಣ ಪಾಂಡುರಂಗಿ, ಕೊರಡ ಸುಬ್ರಹ್ಮಣ್ಯಂ, ಸಚ್ಚಿದಾನಂದ ಮಿಶ್ರಾ, ಆರ್‌.ಜೆ. ಮುರಳಿಕೃಷ್ಣ, ಅರುಣ್‌ರಂಜನ್‌ ಮಿಶ್ರಾ, ಕವಿತಾ ಹೊಳೆ, ಶಿವಾನಿ ವಿ. ಇದ್ದರು. ಶ್ರೀನಿವಾಸ ಆಚಾರ್ಯ, ಶ್ರುತಿ ನಿರೂಪಿಸಿದರು.

ಸಂಸ್ಕೃತ ಕಾಲೇಜಿನಲ್ಲಿ ಅಷ್ಟಾವಧಾನ ಕಾರ್ಯಕ್ರಮ ಜರುಗಿತು
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರತೀರ್ಥ ಸ್ವಾಮೀಜಿ ಪುಸ್ತಕ ಮಳಿಗೆಗೆ ಭೇಟಿ ನೀಡಿದರು

‘ಪಶ್ಚಿಮಕ್ಕಿಂತ ನಮ್ಮ ಜ್ಞಾನ ವ್ಯವಸ್ಥೆ ಉದಾತ್ತ’

ಪಶ್ಚಿಮದ ದೇಶಗಳು ಒಂದೇ ಸಂಸ್ಕೃತಿ ಹೊಂದಿದ್ದರೆ ನಮ್ಮ ದೇಶ ವಿಭಿನ್ನ ಸಂಸ್ಕೃತಿಯ ಮೂಲಕ ಸಂಪನ್ನ ಜ್ಞಾನ ವ್ಯವಸ್ಥೆ ಹೊಂದಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಫಿಲಾಸಫಿಕಲ್ ರಿಸರ್ಚ್‌ ಸದಸ್ಯ ಕಾರ್ಯದರ್ಶಿ ಪ್ರೊ. ಸಚ್ಚಿದಾನಂದ ಮಿಶ್ರಾ ಹೇಳಿದರು.

‘ಭಾರತೀಯ ಜ್ಞಾನ ವ್ಯವಸ್ಥೆ’ ವಿಷಯದ ಕುರಿತು ಹಮ್ಮಿಕೊಂಡಿದ್ದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ವಿಭಿನ್ನ ಸಂಸ್ಕೃತಿಗಳಿರುವುದರಿಂದ ಆಲೋಚನೆಗಳೂ ವಿಭಿನ್ನವಾಗಿವೆ. ಪಾಶ್ಚಾತ್ಯ ದೇಶಗಳ ಶಿಕ್ಷಣ ಪರಂಪರೆಯಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ ಎಂದರು. ನಮ್ಮ ಜ್ಞಾನ ವ್ಯವಸ್ಥೆಯು ಉದಾತ್ತ ಇತಿಹಾಸವ ಹೊಂದಿದೆ.‌ ದ್ವೈತ ಅದ್ವೈತ ಸಂಪ್ರದಾಯ ನಮ್ಮಲ್ಲಿದ್ದು ವಿಭಿನ್ನವಾದ ತರ್ಕಶಾಸ್ತ್ರ ನಮ್ಮ ಜ್ಞಾನಕ್ಞೇತ್ರದ ಸಂಪನ್ನತೆಗೆ ಸಾಕ್ಷಿಯಾಗಿವೆ ಎಂದರು.

ಭಾರತವು ತರ್ಕಶಾಸ್ತ್ರದ ನೆಲೆವೀಡಾಗಿದೆ. ನಮ್ಮಲ್ಲಿ ಮುಕ್ತ ಆಲೋಚನೆಗೆ ಅವಕಾಶಗಳಿವೆ ಎಂದು ಪ್ರತಿಪಾದಿಸಿದರು. ನ್ಯಾಯಮಂಜರಿ ಕೃತಿಯಲ್ಲಿ ಆರು ತರ್ಕ ಪ್ರಸ್ಥಾನಗಳ ಬಗ್ಗೆ ಉಲ್ಲೇಖಿಸಲಾಗಿದೆ. ತರ್ಕಶಾಸ್ತ್ರವನ್ನು ಆರು ವಿಧಗಳಲ್ಲಿ ಪ್ರಸ್ತುತ ಪಡಿಸುವ ಸಾಧ್ಯತೆಗಳನ್ನು ಈ ಕೃತಿಯಲ್ಲಿ ಹೇಳಲಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ನಾಲ್ಕು ವಿದ್ಯೆಗಳ ಕುರಿತು ಹೇಳಲಾಗಿದೆ. ಅದ್ವೈತ ವೇದಾಂತ ಪರಂಪರೆಯ ಮಧುಸೂದನ ಸರಸ್ವತಿ ಅವರು 18 ವಿದ್ಯೆಗಳ ಬಗ್ಗೆ ಹೇಳಿದ್ದಾರೆ. ಇಂತಹ ಮಹತ್ವದ ಪರಂಪರೆ ಭಾರತೀಯ ಶಿಕ್ಷಣ ವ್ಯವಸ್ಥೆಗಿದೆ. ನಮ್ಮ ಪುರಾತನ ಪರಂಪರೆ ಉದಾತ್ತವಾಗಿತ್ತು. ವಿದೇಶಿಯರೂ ನಮ್ಮವರ ಜ್ಞಾನ ಸಂಪನ್ನತೆಗೆ ಮಾರು ಹೋಗಿದ್ದರು ಎಂದರು.

ಯಾವುದೇ ದೇಶದ ಇತಿಹಾಸ ತಿಳಿದುಕೊಳ್ಳಬೇಕಾದರೆ ಆ ದೇಶದ ತತ್ವಶಾಸ್ತ್ರ ಅರ್ಥೈಸಿಕೊಳ್ಳಬೇಕು. ನಮ್ಮಲ್ಲಿನ ತತ್ವಶಾಸ್ತ್ರಗಳ ಕುರಿತು ಇನ್ನಷ್ಟು ಅಧ್ಯಯನ ನಡೆಯುವ ಅಗತ್ಯವಿದೆ. ಇಂದು ನಮ್ಮ ಆಧುನಿಕ ಜ್ಞಾನ ವ್ಯವಸ್ಥೆ ಯಾವ ದಿಸೆಯಲ್ಲಿ ಸಾಗುತ್ತದೆ ಎಂಬುದರ ಬಗ್ಗೆಯೂ ಚಿಂತನೆ ನಡೆಸುವ ಅಗತ್ಯವಿದೆ. ಈಗ ಕೃತಕ ಬುದ್ಧಿಮತ್ತೆ (ಎಐ) ಬಂದಿರುದರಿಂದ ನಮ್ಮ ಸಂಪ್ರದಾಯ ಇದನ್ನು ಒಳಗೊಳ್ಳುತ್ತದೊ ಎಂಬುದರ ಬಗ್ಗೆಯೂ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ ಎಂದರು.

ಭಾಷಾ ಸಲಹೆಗಾರ ಬೇಲೂರು ಸದರ್ಶನ ಅವರು ಮಿಥಿಕ್ ಸೊಸೈಟಿಯ ಅಧೀನದಲ್ಲಿ ನಡೆದ ಅಮೂಲ್ಯ ಶಿಲಾ ಶಾಸನಗಳ 3ಡಿ ಇಮೇಜಿಂಗ್ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಹೈದರಾಬಾದ್‌ ಐಐಟಿಯ ಕೃತಕ ಬುದ್ಧಿಮತ್ತೆ ವಿಭಾಗದ ಪ್ರಾಧ್ಯಾಪಕ ಮೋಹನ್‌ ರಾಘವನ್‌ ವಿದ್ವಾಂಸರಾದ ಆರ್.ಎನ್. ಐಯ್ಯಂಗಾರ್ ಗಂಟಿ ಎಸ್.ಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.