ಕಾರ್ಕಳ: ತಾಲ್ಲೂಕಿನ ಸಾಣೂರು ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ, ತಾಲ್ಲೂಕು ಇಕೊ ಕ್ಲಬ್ ಸಹಯೋಗದಲ್ಲಿ ಸಾಣೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾರತೀಯ ಕಿಸಾನ್ ಸಂಘದ ಕೃಷಿ ಪ್ರಯೋಗ ಪರಿವಾರದ ಸಹಯೋಗದಲ್ಲಿ ಶುದ್ಧ ನೈವೇದ್ಯ ಸಮರ್ಪಣಂ ಅಭಿಯಾನದ ಅಂಗವಾಗಿ ಭತ್ತ ಬೆಳೆ ಕ್ಷೇತ್ರೋತ್ಸವ ನಡೆಯಿತು.
ದೇಶೀ ಭತ್ತದ ತಳಿಗಳ ಸಂರಕ್ಷಕಿ, ಅಧ್ಯಯನಕಾರಿ ಆಸ್ಮಾ ಬಾನು ಅವರು ತಮ್ಮ ಕುಟುಂಬ ನಡೆಸುತ್ತಿರುವ ಭತ್ತದ ತಳಿ ಸಂರಕ್ಷಣೆ ಕಾರ್ಯದ ಒಳ ಹೊರಗುಗಳ ವಿವರಗಳನ್ನು ತಿಳಿಸಿದರು.
ಕೃಷಿ ಪ್ರಯೋಗ ಪರಿವಾರದ ವಿಶ್ವಸ್ಥ ಶ್ರೀವತ್ಸ ಚಕ್ಕೊಡಬೈಲು ಅವರು ಭತ್ತದ ಬೆಳೆಯ ವಿಸ್ತಾರ, ತಳಿ ವಿಶೇಷತೆ, ವೈವಿಧ್ಯ, ಗುಣ ಧರ್ಮಗಳ ಕುರಿತು ಹಾಗೂ ಈ ಬಗ್ಗೆ ಈಗ ನಡೆಯುತ್ತಿರುವ ಅಧ್ಯಯನ, ಮೂಲ ಉದ್ದೇಶಗಳ ಮಾಹಿತಿ ನೀಡಿದರು.
ಸಂರಕ್ಷಿಸಲಾದ ನೂರಾರು ಭತ್ತದ ತಳಿಗಳ ಪ್ರದರ್ಶನ, ಸಾಣೂರು ಪದವಿಪೂರ್ವ, ಪ್ರೌಢಶಾಲೆ ವಿದ್ಯಾರ್ಥಿಗಳು, ಇಕೊ ಕ್ಲಬ್ ವಿದ್ಯಾರ್ಥಿಗಳು ಈ ಅಭಿಯಾನದ ಮೂಲಕ ತಮ್ಮ ಕೃಷಿ ಕ್ಷೇತ್ರಗಳಲ್ಲಿ ಬೆಳೆಸಿದ ವಿವಿಧ ತಳಿಗಳ ಪ್ರದರ್ಶನ ನಡೆಯಿತು. ಕೃಷಿ ಪ್ರಯೋಗ ಪರಿವಾರದ ನಿರ್ವಾಹಕ ವಿಶ್ವಸ್ಥ ದಿನೇಶ್ ಬಿ.ಎಸ್. ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ಭಟ್ ಇರ್ವತ್ತೂರು, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಶೋಕ್ ಶೆಟ್ಟಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯಧ್ಯಕ್ಷ ಮಾಧವ ಭಂಡಾರ್ಕರ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಸುಚೇತಾ ಕಾಮತ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಲವೀನಾ ಇದ್ದರು. ತೀರ್ಥಹಳ್ಳಿ ಪುರುಷೋತ್ತಮ ರಾವ್ ಪ್ರತಿಷ್ಠಾನದ ವಿಶ್ವಸ್ಥ ಅರುಣ್ ಕುಮಾರ್ ನಿರೂಪಿಸಿದರು. ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಇನ್ನಾ ಚಂದ್ರಹಾಸ್ ಶೆಟ್ಟಿ ವಂದಿಸಿದರು. ಭತ್ತದ ತಳಿ ಸಂರಕ್ಷಕಿ ವಿದ್ಯಾ ಮತ್ತು ತಂಡದ ಸದಸ್ಯರು ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.