ಸಾಸ್ತಾನ (ಬ್ರಹ್ಮಾವರ): ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉರಿಯದ ದಾರಿದೀಪ, ಹೊಂಡಗಳಿಂದ ತುಂಬಿರುವ ಪಾದಾಚಾರಿ ಮಾರ್ಗ, ಸರ್ವಿಸ್ ರಸ್ತೆಯ ಅವ್ಯವಸ್ಥೆ, ಸ್ಥಳೀಯ ಸಂಘ ಸಂಸ್ಥೆಗಳ, ಶಾಲಾ ವಾಹನಗಳಿಗೆ ವಿಧಿಸುತ್ತಿರುವ ಸುಂಕ ಮುಂತಾದ ಸಮಸ್ಯೆಗಳನ್ನು ಖಂಡಿಸಿ ಶನಿವಾರ ಸ್ಥಳೀಯರು ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಸಂಸ್ಥೆಯ ಹೆಸರಿನಲ್ಲಿ ನೋಂದಾಯಿತ ವಾಹನಗಳಿಗೆ ಟೋಲ್ ವಿಧಿಸುವ ನೆಪದಲ್ಲಿ ಸ್ಥಳೀಯ ಶಾಲೆಗಳ ವಾಹನ, ಸ್ಥಳೀಯ ಕೆಲವು ಉದ್ಯಮಗಳ ವಾಹನಗಳಿಗೆ ಟೋಲ್ ವಿಧಿಸುವುದನ್ನು ನಿಲ್ಲಿಸಬೇಕು. ಹೆದ್ದಾರಿ ಬದಿಯಲ್ಲಿ ಮಳೆಗಾಲದಲ್ಲಿ ಆಗಿರುವ ಹೊಂಡಗಳನ್ನು ಕೂಡಲೇ ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಬಂದ ಇನ್‌ಸ್ಪೆಕ್ಟರ್ ದಿವಾಕರ್ ಅವರು ಪ್ರತಿಭಟನಾಕಾರರ ಮನವೊಲಿಸಿ, ನ. 11ರಂದು ತಹಶೀಲ್ದಾರ್ ಕಚೇರಿಯಲ್ಲಿ ಟೋಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಸ್ಥಗಿತಗೊಳಿಸಿದರು.
ಹೆದ್ದಾರಿ ಜಾಗೃತಿ ಸಮಿತಿಯ ಶ್ಯಾಮಸುಂದರ ನಾಯರಿ ಮಾತನಾಡಿ, ಸೋಮವಾರ ಟೋಲ್ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದಲ್ಲಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು. ಸಾಸ್ತಾನ ಗುಂಡ್ಮಿಯಲ್ಲಿರುವ ಅನಧಿಕೃತ ಟೋಲ್ ವ್ಯವಸ್ಥೆ ಇರಬಾರದು. ಆ ಮಟ್ಟದ ಹೋರಾಟ ನಡೆಸಲಿದ್ದೇವೆ. ಹಿಂದೆ ಇದ್ದ ವ್ಯವಸ್ಥೆ ಮುಂದುವರಿಸಿಕೊಂಡು ಹೋಗಬೇಕು ಎಂದು ಎಚ್ಚರಿಕೆ ನೀಡಿದರು.
ಹೋರಾಟ ಸಮಿತಿಯ ಪ್ರತಾಪ್‌ಚಂದ್ರ ಶೆಟ್ಟಿ, ಆಲ್ವಿನ್ ಅಂದ್ರಾದೆ, ನಾಗರಾಜ ಗಾಣಿಗ, ಸ್ಥಳೀಯ ವಾಹನ ಮಾಲೀಕರು, ಸಂಘ– ಸಂಸ್ಥೆ, ಶಾಲಾ– ಕಾಲೇಜುಗಳ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.