ಬ್ರಹ್ಮಾವರ: ಇಂದಿನ ಮಕ್ಕಳನ್ನು ಮುಂದಿನ ಜವಾಬ್ದಾರಿಯುತ ಪ್ರಜೆಗಳಂತೆ ಕಾಣಬೇಕು. ಉತ್ತಮ ಶಿಕ್ಷಣ ನೀಡುವ ಭರಾಟೆಯಲ್ಲಿ ಮಕ್ಕಳಿಗೆ ಒತ್ತಡವನ್ನು ಹೇರಬಾರದು. ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡುವತ್ತ ಪೋಷಕರು ಗಮನಹರಿಸಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಐ.ಪಿ. ಗಡದ್ ಹೇಳಿದರು.
ಬ್ರಹ್ಮಾವರದ ಜಿ.ಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನ 20ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ಉಡುಪಿ ಕಾಣಿಯೂರು ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, ಶಾಲಾ ಮಕ್ಕಳಿಗೆ ವಿಷಯಗಳ ಬೋಧನೆಯ ಜೊತೆಗೆ, ಆಸಕ್ತಿಯ ವಿಷಯಗಳನ್ನು ಪ್ರೋತ್ಸಾಹಿಸಿ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಬೇಕು. ಜತೆಗೆ ಭಾರತೀಯ ಸಂಸ್ಕೃತಿಯ ಕುರಿತು ತಿಳಿಸಬೇಕು ಎಂದರು.
ಮುಂಬೈಯ ಎಸ್.ಎಂ. ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಅಧ್ಯಕ್ಷ ರತ್ನಾಕರ ಶೆಟ್ಟಿ, ಪ್ರಾಂಶುಪಾಲ ಜಾರ್ಜ್ ಕುರಿಯನ್, ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಜಿ.ಎಂ. ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲ ಪ್ರಣವ ಶೆಟ್ಟಿ, ಶ್ರೀಮಾ ಪ್ರಣವ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಅನುಷಾ ಸುಬ್ರಹ್ಮಣ್ಯಂ, ಉಪಾಧ್ಯಕ್ಷೆ ರೇವತಿ ಕೆ, ಶಶಿಧರ ಶೆಟ್ಟಿ ಇದ್ದರು.
ಸಂಸ್ಥೆಯಲ್ಲಿ ಹಲವಾರು ವರ್ಷ ಕಾರ್ಯನಿರ್ವಹಿಸಿದ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ಕಳೆದ ಸಾಲಿನ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ತರಗತಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ, ಶಾಲಾ ಪಠ್ಯ ಪಠ್ಯೇತರ ಸ್ಪರ್ಧೆಗಳಲ್ಲಿ ಸಮಗ್ರ ತಂಡ ಪ್ರಶಸ್ತಿ ಪಡೆದ ಮೇಧಾ ತಂಡಕ್ಕೆ ಸ್ಮರಣಿಕೆ ನೀಡಲಾಯಿತು.
ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮ, ಚೆಂಡೆ ತಂಡದ ನಾದ ವೈವಿಧ್ಯ, ಹುಲಿವೇಷ ಕುಣಿತ, ಯಕ್ಷಗಾನ, ವಿದ್ಯಾರ್ಥಿಗಳ ನೃತ್ಯ ಗಾಯನ, ಶಿಕ್ಷಕರ ನೃತ್ಯ ಸಾಂಸ್ಕೃತಿಕ ವೈಭವವನ್ನು ಸೃಷ್ಟಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.