ADVERTISEMENT

ಎಸ್.ಡಿ.ಎಂ.ಸಿ ಅಧ್ಯಕ್ಷೆಯೇ ವಿದ್ಯಾರ್ಥಿಗಳ ಚಾಲಕಿ!

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 6:34 IST
Last Updated 25 ಜೂನ್ 2024, 6:34 IST
ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುತ್ತಿರುವ ಜ್ಯೋತಿ 
ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುತ್ತಿರುವ ಜ್ಯೋತಿ    

ಕುಂದಾಪುರ: ಬೈಂದೂರು ಶೈಕ್ಷಣಿಕ ವಲಯದ ಶಿರೂರು ಸರ್ಕಾರಿ ಹಿರಿಯ ಪ್ರಾಥಮಿಕ ಮೇಲ್ಪಂಕ್ತಿ (ಪೇಟೆ) ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ಜ್ಯೋತಿ ಜಯರಾಮ ಶೆಟ್ಟಿ ಎಂಬುವವರು ಪ್ರತಿ ದಿನ ವಿದ್ಯಾರ್ಥಿಗಳನ್ನು ತಾವೇ ಶಾಲೆಗೆ ಕರೆದುಕೊಂಡು ಬರುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಜೋಗೂರು ನಿವಾಸಿ ಜ್ಯೋತಿ ಅವರು ಸ್ವಂತ ಹಣದಿಂದ ಕಾರು ಖರೀದಿಸಿ, ಕಳೆದೆರಡು ಶೈಕ್ಷಣಿಕ ವರ್ಷದಿಂದ ನಿತ್ಯ 40 ಮಕ್ಕಳನ್ನು ಶಾಲೆಗೆ ಕರೆತರುವ ಮತ್ತು ಮರಳಿ ಮನೆಗೆ ಕರೆದೊಯ್ಯುವ ಕಾಯಕದಲ್ಲಿ ನಿರತರಾಗಿದ್ದಾರೆ.

ಮೊದಲು ಶಾಲೆಯ ಮಕ್ಕಳನ್ನು ಕರೆ ತರಲು ರಿಕ್ಷಾ ವ್ಯವಸ್ಥೆ ಮಾಡಲಾಗಿತ್ತು. ಈಗ ಜ್ಯೋತಿ ಅವರು ಇಕೋ ಕಾರು ಖರೀದಿಸಿ, ನಿತ್ಯ ಬೆಳಿಗ್ಗೆ ಮೂರು ಟ್ರಿಪ್, ಸಂಜೆ ಮೂರು ಟ್ರಿಪ್ ಮೂಲಕ ಮಕ್ಕಳನ್ನು ಶಾಲೆಗೆ ಕರೆತಂದು, ವಾಪಾಸ್ ಮನೆಗೆ ಬಿಡುತ್ತಿದ್ದಾರೆ.

ADVERTISEMENT

ಶಾಲೆಯಿಂದ ಅತೀ ದೂರದ ಹಣೆಬೆಟ್ಟು , ಜೋಗೂರು, ಹಣಬರಕೇರಿ, ಮೊಯ್ದಿನ್ ಪುರ, ಕೋಣ್ಮಕ್ಕಿ, ಮಾರ್ಕೆಟ್, ಕೋಣ್ಮಕ್ಕಿ ಕ್ರಾಸ್‌ನಿಂದಲೂ ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಬರುತ್ತಾರೆ.

ಸುತ್ತಮುತ್ತಲಿನ ಮಕ್ಕಳು ಹಿಂದೆ ಖಾಸಗಿ ಶಾಲೆಯನಗನು ನೆಚ್ಚಿಕೊಂಡಿದ್ದರು. ಹತ್ತು ವರ್ಷಗಳಿಂದೀಚೆಗೆ ಶಾಲೆಯಲ್ಲಿ ಅಸ್ತಿತ್ವಕ್ಕೆ ಬಂದ ಶಾಲಾಭಿವೃದ್ಧಿ ಸಮಿತಿ ಪೋಷಕರನ್ನು ಮನವೊಲಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವೊಲಿಸಿತು ಎಂದು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ವಿನೋದ್ ಪೂಜಾರಿ ಸಾತೋಡಿ ತಿಳಿಸಿದರು.

ಕೊರೋನಾ ಸಂದರ್ಭ ಹಳ್ಳಿಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ‘ವಿದ್ಯಾಗಮ’ದಡಿ ಶಿಕ್ಷಕರು ಪಾಠ ಮಾಡಬೇಕಿದ್ದಾಗ ಅವರನ್ನು ನಾನೇ ರಿಕ್ಷಾದಲ್ಲಿ ಕರೆದೊಯ್ಯುತ್ತಿದ್ದೆ. ಇದೀಗ ಕಾರಿನಲ್ಲಿ ಮಕ್ಕಳನ್ನು ಶಾಲೆಗೆ ಕರೆತರುತ್ತಿದ್ದೇನೆ ಎಂದು ಜ್ಯೋತಿ ಜಯರಾಮ ಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.