ಕುಂದಾಪುರ: ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಮುನ್ನೆಡೆಯುತ್ತಿರುವ ಜಗತ್ತು ವ್ಯಾವಹಾರಿಕವಾಗಿಯೂ ಮುನ್ನಡೆಯುತ್ತಿದೆ. ಬದಲಾವಣೆಯ ಪ್ರಸ್ತುತ ಕಾಲಘಟ್ಟದಲ್ಲಿ ಭದ್ರ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ವ್ಯವಹಾರ ಜ್ಞಾನ ಹೊಂದುವುದು ಮುಖ್ಯವಾಗಿದೆ ಎಂದು ಮುಳುಗುತಜ್ಞ ಈಶ್ವರ ಮಲ್ಪೆ ಹೇಳಿದರು.
ಜನತಾ ಆವಿಷ್ಕಾರ್ -2ಕೆ24 ಕಾರ್ಯಕ್ರಮದ ಭಾಗವಾಗಿ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ವಿಜ್ಞಾನ, ವ್ಯವಹಾರ ಮೇಳ, ಸಾಂಸ್ಕೃತಿಕ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾಜ ಸೇವಕ ರವಿ ಕಟಪಾಡಿ ಮಾತನಾಡಿ, ಕೆಟ್ಟ ಯೋಚನೆಗಳಿಗಿಂತ ಭಿನ್ನವಾದ, ವಿವೇಕಯುತವಾದ ಮನೋಭಾವ ಹಾಗೂ ಚಿಂತನೆಯನ್ನು ರೂಢಿಸಿಕೊಂಡು, ಕಷ್ಟಪಟ್ಟು ಬದುಕನ್ನು ಕಟ್ಟಿಕೊಂಡಾಗ ಮಾತ್ರ ಜೀವನ ಭದ್ರ ಚೌಕಟ್ಟಿನಲ್ಲಿ ಸಾಗುತ್ತದೆ ಎಂದರು.
ಗೋವಾದ ಉದ್ಯಮಿ ಸತೀಶ್ ಪೂಜಾರಿ ಮರವಂತೆ ಅವರು, ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಬೆಳೆಸಬೇಕಾಗಿದೆ ಎಂದರು.
ಕುಂದಾಪುರದ ಕಿಯೋನಿಕ್ಸ್ ಸಂಸ್ಥೆಯ ಹರ್ಷವರ್ಧನ್ ಶೆಟ್ಟಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ, ಪ್ರಾಂಶುಪಾಲ ಗಣೇಶ್ ಮೊಗವೀರ ಮಾತನಾಡಿ, ಪಠ್ಯ ಚಟುವಟಿಕೆಗಳ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಲಾಗುತ್ತಿದೆ ಎಂದರು.
ವಿಜ್ಞಾನ ಮೇಳವನ್ನು ಚೆನ್ನಯ್ಯ ಯು, ಜನತಾ ಚಿತ್ರ ಸಿರಿಯನ್ನು ಚಿತ್ರಕಲಾ ಶಿಕ್ಷಕ ರಾಜೇಶ್ ತಾಳಿಕೋಟೆ, ಸಾಂಸ್ಕೃತಿಕ ಮೇಳವನ್ನು ಡ್ರಾಮಾ ಸೀಸನ್– 2 ವಿನ್ನರ್ ಸಮೃದ್ಧಿ ಮೊಗವೀರ ಉದ್ಘಾಟಿಸಿದರು.
ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಜೇಸಿಐ ಸಿಟಿ ಕುಂದಾಪುರದ ಅಧ್ಯಕ್ಷ ರಾಘವೇಂದ್ರ ಕುಲಾಲ್, ವಿಶ್ರಾಂತ ಪ್ರಾಚಾರ್ಯೆ ಚಿತ್ರಾ ಕಾರಂತ, ಹೆಮ್ಮಾಡಿ ಜನತಾ ಹೈಸ್ಕೂಲ್ ಮುಖ್ಯ ಶಿಕ್ಷಕ ಮಂಜು ಕಾಳವಾರ, ಧಾರ್ಮಿಕ ಚಿಂತಕ ರಾಜಾರಾಮ ಯಡಮೊಗೆ, ಜನತಾ ಕಾಲೇಜಿನ ಉಪ ಪ್ರಾಂಶುಪಾಲ ರಮೇಶ್ ಪೂಜಾರಿ, ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಿರಿ ಮಂಜೇಶ್ವರದ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಇದ್ದರು.
ಗಣೇಶ್ ಮೊಗವೀರ ಸ್ವಾಗತಿಸಿದರು. ಉಪನ್ಯಾಸಕ ಉದಯ್ ನಾಯ್ಕ್ ನಿರೂಪಿಸಿದರು. ಹರ್ಷ ವಂದಿಸಿದರು. ಕುಂದಾಪುರ ಮತ್ತು ಬೈಂದೂರು ಶಿಕ್ಷಣ ವಲಯದ 25ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.