ADVERTISEMENT

ಉಡುಪಿ | ಕಡಲ್ಕೊರೆತ: ಬೇಕಿದೆ ಶಾಶ್ವತ ಪರಿಹಾರ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 7:14 IST
Last Updated 1 ಜುಲೈ 2024, 7:14 IST
ಪಡುಬಿದ್ರಿ ಬೀಚ್‌ನಲ್ಲಿ ಕಲ್ಲುಗಳು ಕೊಚ್ಚಿ ಹೋಗಿರುವುದು
ಪಡುಬಿದ್ರಿ ಬೀಚ್‌ನಲ್ಲಿ ಕಲ್ಲುಗಳು ಕೊಚ್ಚಿ ಹೋಗಿರುವುದು   

ಉಡುಪಿ: ಮಳೆಗಾಲ ಶುರುವಾಯಿತೆಂದರೆ ಜಿಲ್ಲೆಯ ಕಡಲತಡಿಯ ನಿವಾಸಿಗಳಿಗೆ ನಿದ್ದೆ ಇಲ್ಲದ ರಾತ್ರಿಗಳು ಆರಂಭವಾಗುತ್ತವೆ. ಇದಕ್ಕೆ ಕಾರಣ ಕಡಲ್ಕೊರೆತ. ಎಲ್ಲಿ, ಯಾವಾಗ ಹೆದ್ದೆರೆಗಳು ಅಪ್ಪಳಿಸಲಿವೆಯೋ ಎಂಬ ಆತಂಕ ಅವರನ್ನು ಸದಾ ಕಾಡುತ್ತಿರುತ್ತದೆ.

ಪ್ರತಿವರ್ಷ ಕಡಲ್ಕೊರೆತದಿಂದ ಮನೆ, ತೆಂಗಿನ ಮರಗಳು ಕೊಚ್ಚಿ ಹೋಗಿ, ರಸ್ತೆಗಳಿಗೆ ಹಾನಿಯಾದರೂ ಇದರ ತಡೆಗೆ ಶಾಶ್ವತ ಪರಿಹಾರ ಯೋಜನೆ ಎಂಬುದು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಉಡುಪಿ, ಕಾಪು, ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಪ್ರತಿ ಮಳೆಗಾಲದಲ್ಲೂ ಕಡಲ್ಕೊರೆತ ಸಂಭವಿಸುತ್ತದೆ. ಇದರ ತಡೆಗೆ ಈಗಾಗಲೇ ಕೋಟ್ಯಂತರ ರೂಪಾಯಿ ವಿನಿಯೋಗಿಸಿದ್ದರೂ ಅದೆಲ್ಲವೂ ಸಮುದ್ರದ ಪಾಲಾಗಿದೆ ಎಂಬುದು ಮೀನುಗಾರರ ಆರೋಪ. ಕಡಲ್ಕೊರೆತ ತಡೆಗಾಗಿ ತಡೆಗೋಡೆ ನಿರ್ಮಿಸಬೇಕು, ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಪರಿಣಾಮಕಾರಿಯಾಗಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಬಂಧಪಟ್ವರು ಮುಂದಾಗಬೇಕು ಎಂಬುದು ಕಡಲ್ಕೊರೆತದಿಂದ ತೊಂದರೆಗೀಡಾಗಿರುವವರ ಪ್ರಮುಖ ಬೇಡಿಕೆಗಳು.

ADVERTISEMENT

ತೆರೆಗಳ ಅಬ್ಬರ ತಡೆಯಲು ತ್ರಿಕೋನ ಆಕೃತಿಯ ಕಾಂಕ್ರಿಟ್‌ ಬ್ಲಾಕ್‌ಗಳನ್ನು (ಟೆಟ್ರಾಪಾಡ್‌) ಹಾಕಿದರೆ ಹೆಚ್ಚು ಪರಿಣಾಮಕಾರಿಯಾಗಬಹುದು ಎಂಬ ವಾದವೂ ಕೇಳಿ ಬರುತ್ತದೆ. ಇದು ಅನುಷ್ಠಾನವಾಗಬೇಕಾದರೆ ಸಾಕಷ್ಟು ಅನುದಾನವೂ ಬಿಡುಗಡೆಯಾಬೇಕಿದೆ. ಶಾಶ್ವತ ಪರಿಹಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಯೋಜನೆಗಳನ್ನು ರೂಪಿಸಿದರೆ ಸಮಸ್ಯೆ ಪರಿಹರಿಸಲು ಸಾಧ್ಯ ಎಂಬುದು ಸ್ಥಳೀಯರ ವಿಶ್ವಾಸ.

ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿಯ ಎಂಡ್ ಪಾಯಿಂಟ್‌ನಲ್ಲಿರುವ ಬ್ಲೂಫ್ಲ್ಯಾಗ್ ಬೀಚ್‌ನಲ್ಲೂ ಕಳೆದ ವರ್ಷ ಕಡಲ್ಕೊರೆತ ಉಂಟಾಗಿದ್ದು, ಬೀಚ್ ಅಭಿವೃದ್ಧಿ ಕಾಮಗಾರಿಗಳು ಸಮುದ್ರ ಪಾಲಾಗಿತ್ತು.

ಉಡುಪಿ ಜಿಲ್ಲೆ 98 ಕಿ.ಮೀ ಕರಾವಳಿ ತೀರ ಹೊಂದಿದ್ದು, 18ಕ್ಕೂ ಅಧಿಕ ಸ್ಥಳಗಳಲ್ಲಿ ಪ್ರತಿವರ್ಷ ಕಡಲ್ಕೊರೆತದ ಭೀತಿ ಎದುರಾಗುತ್ತದೆ. ಎಲ್ಲೆಲ್ಲಿ ಕಡಲ್ಕೊರೆತ ಸಂಭವಿಸುತ್ತದೆ, ಅದಕ್ಕೆ ಕೈಗೊಳ್ಳಬೇಕಾದ ಯೋಜನೆಗಳ ಕುರಿತು ಬಂದರು ಮತ್ತು ಮೀನುಗಾರಿಕಾ ಇಲಾಖೆ ಪ್ರಸ್ತಾವನೆ ಸಲ್ಲಿಸಿದರೂ ಅದು ಅನುಷ್ಠಾನಕ್ಕೆ ಬರುತ್ತಿಲ್ಲ.

ಕಡಲ್ಕೊರೆತ ಸಂಭವಿಸಿರುವ ಪ್ರತಿ ಜಿಲ್ಲೆಗೆ ತಾತ್ಕಾಲಿಕ ಪರಿಹಾರವಾಗಿ ₹5 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರು ಭರವಸೆ ನೀಡಿದ್ದರು.

ವೈಜ್ಞಾನಿಕ ಕಾಮಗಾರಿ ಅಗತ್ಯ: ಕಡಲ್ಕೊರೆತ ತಡೆಯಲು ಸಮುದ್ರಕ್ಕೆ ಕಲ್ಲುಗಳನ್ನು ಹಾಕುವಾಗ ವೈಜ್ಞಾನಿಕವಾಗಿ ಹಾಕಿದರೆ ಹೆಚ್ಚು ಪರಿಣಾಮಕಾರಿಯಾಗಬಹುದು. ಇಲ್ಲದಿದ್ದರೆ ಆ ಕಲ್ಲುಗಳು ಕೊಚ್ಚಿ ಹೋಗಬಹುದು. ಕಲ್ಲುಗಳನ್ನು ಪದರಗಳಾಗಿ ಹಾಕಬೇಕು ಮತ್ತು ಅದಕ್ಕೆ ಕಬ್ಬಿಣದ ಬಲೆಯನ್ನೂ ಹಾಕಬೇಕು. ಕಲ್ಲುಗಳು ಕೊಚ್ಚಿ ಹೋದ ಹಾಗೆ ಮತ್ತೆ ಕಲ್ಲುಗಳನ್ನು ಹಾಕಬೇಕು ಎನ್ನುತ್ತಾರೆ ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ.

ಹವಾಮಾನ ಬದಾಲಾವಣೆಯಿಂದಾಗಿ ಸಮುದ್ರದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇದರಿಂದ ಕಡಲ್ಕೊರೆತವೂ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅವರು.

ತಡೆಗೋಡೆ ಕಲ್ಲು ಸಮುದ್ರಪಾಲು: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉದ್ಯಾವರ ಗ್ರಾಮದ ಪಡುಕರೆ ಕಡಲತೀರದಲ್ಲಿ ಕಡಲ್ಕೊರೆತದ ಭೀತಿ ಪ್ರತಿನಿತ್ಯ ತೀರವಾಸಿಗಳನ್ನು ಆತಂಕಕ್ಕೀಡು ಮಾಡುತ್ತಿದೆ. ಈ ಭಾಗದಲ್ಲಿ ಸುಮಾರು ಐದಾರು ಕಿ.ಮೀ ಪ್ರದೇಶದಲ್ಲಿ ಕಡಲ ಕಿನಾರೆಗೆ ಕಲ್ಲು ಹಾಕಿ ತಡೆಗೋಡೆ ನಿರ್ಮಿಸಿದ್ದರೂ ಕೂಡ, ಕಡಲ ತೆರೆಗಳ ಅಬ್ಬರಕ್ಕೆ ತಡೆಗೋಡೆ ಜಾರಿ ಸಮುದ್ರ ಪಾಲಾಗುತ್ತಿದೆ. ಕಡಲಿಗೆ ಕಲ್ಲು ಹಾಕಿದರೂ ಕಡಲ ತೀರದ ಮೀನುಗಾರಿಕಾ ಕಾಂಕ್ರೀಟ್ ರಸ್ತೆ ಮಳೆಗಾಲದಲ್ಲಿ ಅಲ್ಲಲ್ಲಿ ಕಡಲ್ಕೊರೆತಕ್ಕೆ ಹಾನಿಗೊಳಗಾಗಿದೆ.

ಕಡಲ್ಕೊರೆತದಿಂದ ಮಲ್ಪೆ ಪಡುಕರೆ ಉದ್ಯಾವರ ತೀರಪ್ರದೇಶವನ್ನು ರಕ್ಷಿಸಲು ಪಡುಕರೆ ಭಾಗದ ಪ್ರದೇಶದಲ್ಲಿ ಎ.ಡಿ.ಬಿ. ಯೋಜನೆಯಡಿ ರಾಜ್ಯ ಸರ್ಕಾರದ ಬಂದರು, ಒಳನಾಡು ಸಾರಿಗೆ ಇಲಾಖೆ ಕರಾವಳಿ ತೀರದ ಸುರಕ್ಷತೆಗೆ ₹91.09 ಕೋಟಿಯ ಪೈಲಟ್ ಯೋಜನೆಯನ್ನು ಅನುಷ್ಠಾನಗೊಳಿಸಿದೆ.

ಸುಮಾರು 35 ಕಡೆ ಗ್ರೋಯಾನ್ ಮಾದರಿಯಲ್ಲಿ ಕಲ್ಲು ಅಳವಡಿಸಲಾಗಿದೆ. ಪರಸ್ಪರ 125ರಿಂದ 130 ಮೀ. ಅಂತರಗಳಲ್ಲಿ ನಿರ್ಮಿಸಲಾಗಿದೆ. ಕಲ್ಲುಗಳನ್ನು ಹಾಕುವ ಮೊದಲು ತಳಭಾಗದಲ್ಲಿ ಜಿಯೊ ಟೆಕ್ಸ್‌ಟೈಲ್ಸ್ ಫೈಬರ್ ಹೊದಿಕೆ ಬಳಸಿಕೊಂಡು ಅದರ ಮೇಲ್ಭಾಗದಲ್ಲಿ 10ರಿಂದ 100 ಕೆ.ಜಿ. ಭಾರದ ಕಲ್ಲುಗಳು, ಅನಂತರದಲ್ಲಿ 100ರಿಂದ 200 ಕೆ.ಜಿ. ಭಾರದ ಕಲ್ಲುಗಳನ್ನು ಹಾಕಲಾಗುತ್ತದೆ. ಅದರ ಮೇಲ್ಬಾಗದಲ್ಲಿ 1ರಿಂದ 3 ಟನ್‌ ಭಾರದ ಕಲ್ಲುಗಳನ್ನು ಹಂದರವಾಗಿ ಪೇರಿಸಿಡಲಾಗಿದೆ. ಮತ್ತೆ 2ರಿಂದ 4 ಟನ್ ಭಾರದ ಕಲ್ಲುಗಳ ಪದರ ನಿರ್ಮಿಸಲಾಗಿದೆ. ಬೀಚ್‌ಗಾಗಿ ಈ ಯೋಜನೆಯು ಅನುಷ್ಠಾನಗೊಂಡಿದ್ದು, ಇದೀಗ ಅದುವೇ ಕಡಲ್ಕೊರೆತಕ್ಕೆ ತಡೆಗೋಡೆಯಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಆತಂಕದ ದಿನ: ಮಳೆಗಾಲ ಬಂತೆಂದರೆ ಪ್ರತಿವರ್ಷ ಬೈಂದೂರು ತಾಲ್ಲೂಕಿನ ಕಡಲತೀರದ ನಿವಾಸಿಗಳು ಆತಂಕದಲ್ಲೇ ದಿನದೂಡಬೇಕಾಗಿದೆ. ಶಿರೂರು ಕಳಿಹಿತ್ಲು, ಉಪ್ಪುಂದ ಅಳಿವೆಕೋಡಿ–ತಾರಾಪತಿ, ಕಿರಿಮಂಜೇಶ್ವರ ಹೊಸಹಿತ್ಲು, ಆದ್ರಗೋಳಿ, ನಾಗೂರು, ಮರವಂತೆ, ಕಡಲತೀರದ ಪ್ರದೇಶಗಳ ಭಾಗದಲ್ಲಿ ಕಡಲ್ಕೊರೆತದಿಂದ ದಡದಲ್ಲಿ ನಿರ್ಮಿಸಿದ ಕಲ್ಲು ಬಂಡೆಗಳ ತಡೆಗೋಡೆ, ಮನೆ, ದೋಣಿ, ಬಲೆ, ಸಲಕರಣೆಗಳು ಸಮುದ್ರ ಪಾಲಾಗುತ್ತಿವೆ. ತೀರದುದ್ದಕ್ಕೂ ಹಲವು ತೆಂಗಿನಮರಗಳು ಸಮುದ್ರ ಪಾಲಾಗುತ್ತಿವೆ. ಕಡಲ್ಕೊರೆತ ತಡೆಗಾಗಿ ಹಾಕಲಾದ ಕಲ್ಲುಗಳು ಜಾರಿದ್ದು, ಕಡಲು ಸೇರುವ ಭೀತಿ ಎದುರಾಗಿವೆ.

ಈಗಾಗಲೇ ಮರವಂತೆ ಬ್ರೇಕ್ ವಾಟರ್ ಬಳಿ 120 ಮೀ ಉದ್ದದ ಶಾಶ್ವತ ತಡೆಗೋಡೆ ರಚಿಸಲು ₹1.90 ಕೋಟಿ, ಮರವಂತೆಯ ನಾಗಬನದ ಹತ್ತಿರ 250ಮೀ ಉದ್ದದ ಶಾಶ್ವತ ತಡೆಗೋಡೆ ರಚಿಸಲು ₹3.10 ಕೋಟಿಯ ಪ್ರಸ್ತಾವ ಕಳುಹಿಸಲಾಗಿದೆ.

ಪೂರಕ ಮಾಹಿತಿ: ಅಬ್ದುಲ್‌ ಹಮೀದ್‌, ಪ್ರಕಾಶ್‌ ಸುವರ್ಣ ಕಟಪಾಡಿ, ವಿಶ್ವನಾಥ ಆಚಾರ್ಯ

ಕಾಪು ವ್ಯಾಪ್ತಿಯ ಉದ್ಯಾವರ ಪಡುಕರೆ ಕಡಲ ತೀರದಲ್ಲಿ ಗ್ರೋಯಾನ್ ಮಾದರಿಯಲ್ಲಿ ಕಲ್ಲುಗಳನ್ನು ಅಳವಡಿಸಿರುವುದು
ಪುಣೆಯ ಸೆಂಟ್ರಲ್‌ ವಾಟರ್‌ ಆ್ಯಂಡ್‌ ಪವರ್‌ ರಿಸರ್ಚ್‌ ಸ್ಟೇಷನ್‌ನವರು ನೀಡುವ ವಿನ್ಯಾಸಕ್ಕೆ ಅನುಗುಣವಾಗಿ ನಾವು ಕಡಲ್ಕೊರೆತ ತಡೆ ಕಾಮಗಾರಿ ನಡೆಸುತ್ತೇವೆ. ಮೂರು ವರ್ಷಗಳಿಂದ ಕಡಲ್ಕೊರೆತ ತಡೆ ಕಾಮಗಾರಿಗೆ ಯಾವುದೇ ಅನುದಾನ ಬಂದಿಲ್ಲ. ಆದ್ದರಿಂದ ಕಾಮಗಾರಿ ನಡೆದಿಲ್ಲ. ಶಾಶ್ವತ ಪರಿಹಾರ ಯೋಜನೆಯ ಅಡಿಯಲ್ಲೇ ನಾವು ಕಾಮಗಾರಿ ನಡೆಸುತ್ತಿದ್ದೇವೆ. ಕಡಲ್ಕೊರೆತದ ಬಗ್ಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈಚೆಗೆ ಸಭೆ ನಡೆದಿದೆ. ಅದರಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ₹5 ಕೋಟಿ ಬಿಡುಗಡೆ ಮಾಡಲು ಅದರಲ್ಲಿ ನಿರ್ಧಾರವಾಗಿದೆ ಶೋಭಾ ಕೆ. ಎ.ಇ.ಇ ಬಂದರು ಮತ್ತು ಮೀನುಗಾರಿಕಾ ಇಲಾಖೆ ........... ಕಡಲ್ಕೊರೆತದಿಂದ ಈ ಭಾಗದ ಮೀನುಗಾರರಿಗೆ ಬಹಳಷ್ಟು ಸಮಸ್ಯೆ ಆಗುತ್ತದೆ. ಅದರ ತಡೆಗೆ ಈಗ ನಡೆಯುತ್ತಿರುವ ಕಾಮಗಾರಿಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ತ್ರಿಕೋನ ಆಕೃತಿಯ ಕಾಂಕ್ರೀಟ್ ಕಲ್ಲುಗಳನ್ನು ವೈಜ್ಞಾನಿಕ ರೀತಿಯಲ್ಲಿ ಹಾಕುವುದರಿಂದ ಕಡಲ್ಕೊರೆತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಯತ್ನ ನಡೆಸಬೇಕು. ಕೇವಲ ಕಡಲ್ಕೊರೆತ ಉಂಟಾದ ಸಂದರ್ಭಗಳಲ್ಲಿ ಶಾಶ್ವತ ಪರಿಹಾರ ಭರವಸೆ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದಕ್ಕೆ ಮೊದಲೇ ಅನುದಾನ ಕ್ರೋಢೀಕರಿಸಿ ಸಮಸ್ಯೆ ಪರಿಹರಿಸುವ ಮೂಲಕ ಸಮುದ್ರ ತೀರದ ಜನರ ಸುರಕ್ಷತೆಗೆ ಆದ್ಯತೆ ನೀಡಬೇಕು ಕಿರಣ್ ರಾಜ್ ಕರ್ಕೇರ ಮೀನುಗಾರ ನಡಿಪಟ್ಣ ........... ಉದ್ಯಾವರ ಪಡುಕರೆ ಕಡಲ ತೀರದಲ್ಲಿ ಗ್ರೋಯಾನ್ ಮಾದರಿಯಲ್ಲಿ ಕಲ್ಲುಗಳನ್ನು ಅಳವಡಿಸುವ ಮೂಲಕ ಮಳೆಗಾಲದ ರಕ್ಕಸ ಗಾತ್ರದ ಅಲೆಗಳು ಉಂಟುಮಾಡುತ್ತಿದ್ದ ಆತಂಕಕ್ಕೆ ಮುಕ್ತಿ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ಮಳೆಗಾಲ ಬಂದರೆ ಕಡಲ ಅಬ್ಬರ ಹೆಚ್ಚಾಗಿ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ –ಸರೋಜಿನಿ ಮೈಂದನ್ ಉದ್ಯಾವರ ಪಡುಕರೆ ನಿವಾಸಿ  .............. ಮಳೆಗಾಲದಲ್ಲಿ ಸಮುದ್ರದ ಅಲೆಗಳು ‌ರಸ್ತೆವರೆಗೆ ಬರುತ್ತದೆ. ಪ್ರಸ್ತುತ ಕಡಲ ನೀರು ನದಿಯನ್ನು ಸೇರುತ್ತಿಲ್ಲ. ಪೈಲಟ್ ಯೋಜನೆಯಿಂದಾಗಿ ಕಡಲತಡಿಯ ನಿವಾಸಿಗಳಿಗೆ ಕೊಂಚ ಸಮಾಧಾನವಾಗಿದೆ. ಈ ಭಾಗದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಮಾತ್ರವಲ್ಲದೆ ನದಿ ಕೊರೆತದಿಂದ ತೀರ ನಿವಾಸಿಗಳಿಗೆ ರಕ್ಷಣೆ ಬೇಕಿದೆ
–ಯೋಗೀಶ್ ಬಿ. ಕೋಟ್ಯಾನ್ ಉದ್ಯಾವರ ಪಡುಕರೆ
ಪ್ರತಿ ಮಳೆಗಾಲ ಇಲ್ಲಿ ಕಡಲ್ಕೊರೆತ ಉಂಟಾಗುತ್ತದೆ. ತೀರದ ನಿವಾಸಿಗಳು ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಿಂದಾಗಿ ಅಲೆಗಳ ಅಬ್ಬರ ಜೋರಾಗಿದ್ದು ಕಡಲ್ಕೊರೆತ ಬಿರುಸಾಗಿದೆ. ಮೀನುಗಾರರ ಶೆಡ್‌ಗಳು ಕಡಲು ಪಾಲಾಗುವ ಅಪಾಯದಲ್ಲಿದೆ. ಕಡಲ್ಕೊರೆತ ಹೆಚ್ಚಾದಷ್ಟು ಇಲ್ಲಿನ ಮನೆಗಳಿಗೆ ಅಪಾಯ ತಪ್ಪಿದ್ದಲ್ಲ
–ದಿನೇಶ ಖಾರ್ವಿ ಉಪ್ಪುಂದ

ಹಣ ವ್ಯಯವಾದರೂ ಸಮಸ್ಯೆಗೆ ಸಿಕ್ಕಿಲ್ಲ ಪರಿಹಾರ

ಪಡುಬಿದ್ರಿ: ಕಾಪು ತಾಲ್ಲೂಕಿನ ಕರಾವಳಿ ತೀರದ ಹೆಜಮಾಡಿಯಿಂದ ಕೈಪುಂಜಾಲು ಮಟ್ಟುವರೆಗಿನ ಕಡಲತೀರದ ಜನರು ನಾಲ್ಕು ದಶಕಗಳಿಂದಲೂ ಕಡಲ್ಕೊರೆತದ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಇದುವರೆಗೂ ಶಾಶ್ವತ ತಡೆಗೋಡೆಯಾಗದೆ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಕಡಲ್ಗೊರೆತ ತಡೆಗೆ ಕೇರಳ ಮಾದರಿಯ ತಡೆಗೋಡೆ ಸೂಕ್ತ ಎಂಬ ಸಲಹೆ ಇದೆ. ಆದರೆ ಅನುದಾನವಿಲ್ಲದೆ ಅನುಷ್ಠಾನ ಆಗದೆ ಬಾಕಿಯಾಗಿದೆ. ತಾತ್ಕಾಲಿಕ ಕಾಮಗಾರಿಗಳಿಗಾಗಿ ಜಿಲ್ಲಾಧಿಕಾರಿಗಳ ಹಂತದಲ್ಲೇ ಈ ಹಿಂದೆ ನೀಡಲಾಗುತ್ತಿದ್ದ ಪ್ರಾಕೃತಿಕ ವಿಕೋಪ ನಿಧಿಯ ಅನುದಾನವನ್ನು ಸರ್ಕಾರದ ಮಾರ್ಗಸೂಚಿಯ ಪ್ರಕಾರ ನಿಲ್ಲಿಸಲಾಗಿದೆ ಎಂದು ಮೀನುಗಾರರು ದೂರುತ್ತಾರೆ. ಈ ಭಾಗದಲ್ಲಿ ಕಡಲ್ಕೊರೆತ ತಡೆಗೆ ನಾಲ್ಕು ದಶಕಗಳಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡಲಾಗಿದೆ. ಲೋಡ್‌ಗಟ್ಟಲೆ ಕಲ್ಲುಗಳು ಕಡಲ ಒಡಲು ಸೇರಿದೆ. ಸುಮಾರು 40–50 ವರ್ಷಗಳ ಹಿಂದೆಯೂ ಕಡಲ್ಕೊರೆತದ ಭೀತಿ ಎದುರಾಗಿದ್ದಾಗ ಎಲ್ಲೆಲ್ಲಿ ತಡೆದಂಡೆಗಳನ್ನು ನಿರ್ಮಿಸಲಾಗಿತ್ತೋ ಅಲ್ಲಿಯ ಬಹುತೇಕ ಜಮೀನು ಮರಮುಟ್ಟು ಸೊತ್ತುಗಳು ಈವರೆಗೂ ಸುರಕ್ಷಿತವಾಗಿವೆ. ಆದರೆ ಕಳೆದ 25-30 ವರ್ಷಗಳಿಂದ ಎಲ್ಲೆಲ್ಲಿ ಕಲ್ಲುಗಳನ್ನು ಹಾಕಿ ತಡೆಗೋಡೆ ನಿರ್ಮಿಸಿದ್ದಾರೋ ಅಲ್ಲಿಗೆ ಹಾಕಿದ ಬಹುತೇಕ ಕಲ್ಲುಗಳೆಲ್ಲವೂ ಸಮುದ್ರದ ಒಡಲು ಸೇರಿದೆ. ಪ್ರವಾಸಿ ತಾಣಗಳಲ್ಲೂ ಕೊರೆತ: ಕಾಪು ತಾಲ್ಲೂಕಿನ ಸಮುದ್ರ ಕಿನಾರೆಯ ಪ್ರವಾಸಿ ತಾಣಗಳಾದ ಪಡುಬಿದ್ರಿ ಬೀಚ್ ಕಾಪು ಬೀಚ್‌ಗಳಲ್ಲೂ ಸಮುದ್ರ ಕೊರೆತೆ ಉಂಟಾಗಿ ಪ್ರವಾಸಿ ತಾಣಗಳ ಅಂದಗೆಡಿಸುವಂತಾಗಿದೆ. ಪಡುಬಿದ್ರಿ ಬೀಚ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಕಡಲ್ಕೊರೆತ ತೀವ್ರಗೊಂಡು ಸುಮಾರು ಐದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಂಕ್ರೀಟ್ ಸಿಮೆಂಟ್ ವಿಶ್ರಾಂತಿ ತಾಣ ತಡೆಗೋಡೆ ವಿದ್ಯುತ್ ಕಂಬಗಳು ಕಡಲ್ಕೊರೆತಕ್ಕೆ ಕೊಚ್ಚಿ ಹೋಗಿದೆ. ಕಡಲು–ನದಿಯ ಸಂಗಮ: ಪಡುಬಿದ್ರಿಯ ನಡಿಪಟ್ಣ ಭಾಗದ ಜನರಿಗೆ ಪಶ್ಚಿಮದಲ್ಲಿ ಸಮುದ್ರ ಪೂರ್ವದಲ್ಲಿ ಕಾಮಿನಿ ನದಿ ಇದ್ದು ಮಧ್ಯದಲ್ಲಿ ವಾಸದ ಮನೆಗಳಿವೆ. ಇಲ್ಲಿನ ಜನರು ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಭೀತಿಯಿಂದ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇದೆ. ಬಂದು ಹೋಗುವ ಜನಪ್ರತಿನಿಧಿಗಳು: ಪ್ರತೀ ಭಾರಿ ಕಡಲ್ಕೊರೆತ ಉಂಟಾದಾಗಲೂ ಕೇಂದ್ರ ರಾಜ್ಯ ಸರ್ಕಾರದ ಸಚಿವರಿಂದ ಹಿಡಿದು ಎಲ್ಲಾ ಜನಪ್ರತಿನಿಧಿಗಳು ಬಂದು ಇಲ್ಲಿನ ಜನರಿಗೆ ಸಾಂತ್ವನ ಹೇಳಿ ಶಾಶ್ವತ ತಡೆಗೋಡೆಯ ಭರವಸೆ ನೀಡುತ್ತಾರೆ. ಆದರೆ ಇದುವರೆಗೂ ಯಾವುದೇ ರೀತಿಯ ಭರವಸೆಯೂ ಈಡೇರುವ ಲಕ್ಷಣಗಳು ಕಾಣುತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಕಡಲ್ಕೊರೆತ ಉಂಟಾಗುವ ಪ್ರಮುಖ ಪ್ರದೇಶಗಳು

ಕಿರಿ ಮಂಜೇಶ್ವರ ಆಕಳಬೈಲು ತೀರ ತ್ರಾಸಿ ಗುಜ್ಜಾಡಿ ಉದ್ಯಾವರದ ಪಡುಕೆರೆ ತೀರ ಬ್ರಹ್ಮಾವರದ ಕೋಡಿ ಹೊಸಬೆಂಗ್ರೆ ಹೆಜಮಾಡಿಯ ಅಮಾಸಕರಿಯ ಉಲ್ಲಾಸ ನಗರ ಕೋಡಿಯ ಜೆಟ್ಟಿ ಪ್ರದೇಶ ಪಡುಬಿದ್ರಿಯ ನಡಿಪಟ್ಣ ಪಡುಬಿದ್ರಿ ಬೀಚ್ ಎರ್ಮಾಳು ತೆಂಕ ಉಚ್ಚಿಲ ಬಡಾ ಮೂಳೂರಿನ ತೊಟ್ಟಂ ಕಾಪು ಲೈಟ್ ಹೌಸ್ ಬೀಚ್ ಪೊಲಿಪು ಸರ್ಕಲ್ ಬಳಿ ಕೈಪುಂಜಾಲು - ಮಟ್ಟು ಪ್ರದೇಶ

‘ರಾಜ್ಯ ಸರ್ಕಾರ ತುರ್ತಾಗಿ ಸ್ಪಂದಿಸಲಿ’

ಕೇಂದ್ರ ಸಹಭಾಗಿತ್ವದಲ್ಲಿ ನಬಾರ್ಡ್‌ ಯೋಜನೆಯಡಿ ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ರೂಪಿಸುವ ಪ್ರಸ್ತಾವ ರಾಜ್ಯ ಸರ್ಕಾರದ ಮುಂದಿದ್ದು ಈಗಿನ ಪರಿಸ್ಥಿತಿಯಲ್ಲಿ ಕಡೆಲ್ಕೊರೆತ ಉಂಟಾಗಲಿರುವ ಸ್ಥಳಗಳಿಗೆ ತುರ್ತಾಗಿ ಕಲ್ಲು ಹಾಕುವ ಕೆಲಸ ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ಅನುಷ್ಠಾನಕ್ಕೆ ತರಬೇಕು. ಇಲ್ಲದಿದ್ದರೆ ಮೀನುಗಾರರ ಮನೆಗಳು ಸಮುದ್ರ ದಂಡೆಯ ಸಮೀಪದ ರಸ್ತೆಗಳು ತೆಂಗಿನ ಮರಗಳು ಉಳಿಯಲಿಕ್ಕಿಲ್ಲ. ಕಲ್ಲುಗಳು ಸಮುದ್ರ ಸೇರಿದರೂ ಕಡಲ್ಕೊರೆತದ ತೀವ್ರತೆ ಅಲ್ಪಮಟ್ಟಿಗಾದರೂ ತಡೆಯು ಶಕ್ತಿ ಅದಕ್ಕಿದೆ. ಎಲ್ಲಿ ಕಡಲ್ಕೊರೆತ ಉಂಟಾಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಶಾಶ್ವತ ಕಾಮಗಾರಿ ಆಗುವವರೆಗೂ ಅದು ನಿಲ್ಲುವುದೂ ಇಲ್ಲ. ಕಲ್ಲು ಹಾಕುವ ಕಾಮಗಾರಿಯ ಬಿಲ್‌ ಮಾಡುವಾಗ ಅದನ್ನು ಶಾಶ್ವತ ಪರಿಹಾರ ಯೋಜನೆಯ ಅಡಿಯಲ್ಲೇ ಮಾಡಬೇಕು. ಸರ್ಕಾರ ಕಡಲ್ಕೊರೆತ ಪ್ರದೇಶದಲ್ಲಿ ತುರ್ತು ಕಾಮಗಾರಿ ನಡೆಸಲು ಅನುದಾನ ಘೋಷಿಸಿದರೆ ಸಾಲದು. ಅದನ್ನು ಬಿಡುಗಡೆಯೂ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

‘ಮುಂಜಾಗ್ರತೆ ಅಗತ್ಯ’
ಕಡಲ್ಕೊರೆತದಿಂದ ಭೂಮಿ ಮನೆ ಮರಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇದರಿಂದ ಸರ್ಕಾರ ಜನರಿಗೆ ಪರಿಹಾರವನ್ನೂ ಕೊಡಬೇಕಾಗುತ್ತದೆ. ಅದಕ್ಕಿಂತ ಮುಂಜಾಗ್ರತೆ ವಹಿಸಿ ಕಡಲ್ಕೊರೆತ ಸಂಭವಿಸಬಹುದಾದ ಪ್ರದೇಶಗಳಲ್ಲಿ ಅದರ ತಡೆಗೆ ಅಗತ್ಯ ಕಾಮಗಾರಿ ಕೈಗೊಳ್ಳಬೇಕು. ಕಡಲ್ಕೊರೆತಕ್ಕೆ ಟೆಟ್ರಾಪಾಡ್‌ಗಳನ್ನು ಹಾಕುವುದು ಹೆಚ್ಚು ಪರಿಣಾಮಕಾರಿ ಕ್ರಮ. ತೆರೆಗಳು ಬಡಿದು ಹಿಂದಕ್ಕೆ ಹೋಗುವಾಗ ಟೆಟ್ರಾಪಾಡ್‌ಗಳನ್ನು ಎಳೆದುಕೊಂಡು ಹೋಗುವುದಿಲ್ಲ. ಆದರೆ ಅದನ್ನು ಹಾಕುವುದು ದುಬಾರಿ. ಕೇಂದ್ರ ರಾಜ್ಯ ಸರ್ಕಾರ ಜಂಟಿಯಾಗಿ ಇಂತಹ ಯೋಜನೆಗಳನ್ನು ರೂಪಿಸಬಹುದು. ಮರವಂತೆಯ ಕೆಲವು ಕಡೆ ಇದನ್ನು ಹಾಕಿದ್ದಾರೆ. ಇದೊಂದು ಶಾಶ್ವತ ಕಾಮಗಾರಿ ಎನ್ನಬಹುದು. ಮುಂಬೈನ ಹಲವು ಬೀಚ್‌ಗಳಲ್ಲಿ ಟೆಟ್ರಾಪಾಡ್‌ಗಳನ್ನು ಹಾಕಲಾಗಿದೆ. ಪುಣೆಯಲ್ಲಿರುವ ಸೆಂಟ್ರಲ್‌ ವಾಟರ್‌ ಆ್ಯಂಡ್‌ ಪವರ್‌ ರಿಸರ್ಚ್‌ ಸ್ಟೇಷನ್‌ನಲ್ಲಿ ಕಡಲ್ಕೊರೆತ ಪರಿಹಾರ ಮಾರ್ಗಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ ಮತ್ತು ಅವರು ಸರ್ಕಾರಕ್ಕೆ ಸಲಹೆ ನೀಡುತ್ತಾರೆ. ನಾನು ಸಚಿವನಾಗಿದ್ದಾಗ ಅಲ್ಲಿಗೆ ಭೇಟಿ ನೀಡಿದ್ದೆ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ ತಿಳಿಸಿದರು.
ತುರ್ತು ಕಾಮಗಾರಿಗೆ ಹಣ ಬಿಡುಗಡೆ
ಮುಖ್ಯವಾಗಿ ಜುಲೈ ತಿಂಗಳಲ್ಲಿ ಭಾರಿ ಮಳೆ ಬಂದಾಗ ಕಡಲ್ಕೊರೆತವೂ ಜಾಸ್ತಿಯಾಗುತ್ತದೆ. ಈ ಬಾರಿ ಪಡುಬಿದ್ರಿಯಲ್ಲಿ ಸ್ವಲ್ಪಮಟ್ಟಿಗೆ ಕಡಲ್ಕೊರೆತ ಆಗಿದೆ ಬೇರೆಲ್ಲೂ ಆದ ಬಗ್ಗೆ ವರದಿಯಾಗಿಲ್ಲ. ಕಡಲ್ಕೊರೆತ ತೀವ್ರವಾದರೆ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳಲಾಗುವುದು. ಕಡಲ್ಕೊರೆತದ ಕುರಿತು ಸಂಶೋಧನೆ ಮಾಡಿರುವ ತಂಡವೊಂದು ಅಧ್ಯಯನ ವರದಿ ನೀಡಿದೆ. ಆದರೆ ಅದರಲ್ಲಿ ಹೇಳಿರುವ ಯೋಜನೆಯನ್ನುಅನುಷ್ಠಾನಗೊಳಿಸಿದರೆ ಅದು ಇಲ್ಲಿ ಯಶಸ್ವಿಯಾಗುವ ಸಾಧ್ಯತೆ ಕಡಿಮೆ. ತುರ್ತು ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಕುರಿತು ನಿರ್ಧಾರವಾಗಿದೆ. ಇನ್ನೂ ಆದೇಶ ಬಂದಿಲ್ಲ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಯೋಜನೆ ರೂಪಿಸಬೇಕಾದರೆ ಬೇರೆ ಕಡೆ ಯಾವ ರೀತಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲೂ ವಿಚಾರ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.