ADVERTISEMENT

ಉಡುಪಿ | ಕಡಲ್ಕೊರೆತ; ಬರೀ ಆಶ್ವಾಸನೆಗಳ ಮೊರೆತ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 6:31 IST
Last Updated 17 ಜುಲೈ 2023, 6:31 IST
ಕಾಪು ತಾಲ್ಲೂಕಿನಲ್ಲಿ ಕಡಲ್ಕೊರೆತ ಉಂಟಾಗಿರುವ ದೃಶ್ಯ
ಕಾಪು ತಾಲ್ಲೂಕಿನಲ್ಲಿ ಕಡಲ್ಕೊರೆತ ಉಂಟಾಗಿರುವ ದೃಶ್ಯ   

ಬಾಲಚಂದ್ರ ಎಚ್‌./ ಅಬ್ದುಲ್ ಹಮೀದ್‌ ಪಡುಬಿದ್ರಿ

ಉಡುಪಿ: ಕರಾವಳಿಗರ ಪಾಲಿಗೆ ಕಡಲು ವರವೂ ಹೌದು, ಶಾಪವೂ ಹೌದು. ಮತ್ಸ್ಯೋದ್ಯಮ ಹಾಗೂ ಪ್ರವಾಸೋದ್ಯಮದ ಮೂಲಕ ಲಕ್ಷಾಂತರ ಮಂದಿಯ ಬದುಕಿಗೆ ಆಧಾರವಾಗಿರುವ ಕಡಲು ಮಳೆಗಾಲದಲ್ಲಿ ಅನಾಹುತಗಳನ್ನು ಸೃಷ್ಟಿಸುತ್ತದೆ. ಪ್ರತಿವರ್ಷ ಕರಾವಳಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಡಲ್ಕೊರೆತ ತೀರದ ನಿವಾಸಿಗಳ ಬದುಕು ಕಸಿಯುತ್ತಿದೆ. ನೂರಾರು ಮನೆಗಳಿಗೆ ಹಾನಿಯಾಗುತ್ತಿದೆ. ಮೀನುಗಾರಿಕಾ ರಸ್ತೆಗಳು, ಸಾರ್ವಜನಿಕ ಆಸ್ತಿಯನ್ನು ಅಪೋಶನ ತೆಗದುಕೊಳ್ಳುತ್ತಿದೆ. ದಶಕಗಳಿಂದ ಕಡಲ ತೀರದ ನಿವಾಸಿಗಳಿಗೆ ಕಂಟಕವಾಗಿರುವ ಕಡಲ್ಕೊರೆತ ಸಮಸ್ಯೆಗೆ ಇಂದಿಗೂ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ.

ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡು ರಾಜ್ಯದಲ್ಲಿ 300 ಕಿ.ಮೀ ಉದ್ದದ ಕರಾವಳಿ ತೀರವಿದೆ. ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಿಂದ ಉಡುಪಿ ಜಿಲ್ಲೆಯ ಶಿರೂರುವರೆಗೂ 138 ಕಿ.ಮೀ ಕರಾವಳಿ ತೀರವಿದ್ದು, ದಕ್ಷಿಣ ಕನ್ನಡ 40 ಕಿ.ಮೀ ಹಂಚಿಕೊಂಡಿದ್ದರೆ ಉಡುಪಿ ಜಿಲ್ಲೆ 98 ಕಿ.ಮೀ ಕರಾವಳಿ ತೀರ ಹೊಂದಿದ್ದು ಸುಮಾರು 20ಕ್ಕೂ ಹೆಚ್ಚು ಭಾಗಗಳಲ್ಲಿ ಪ್ರತಿವರ್ಷ ಕಡಲ್ಕೊರೆತ ಭೀತಿ ಎದುರಾಗುತ್ತದೆ.

ADVERTISEMENT

ಎಲ್ಲೆಲ್ಲಿ ಕಡಲ್ಕೊರೆತ

ಜೂನ್‌ನಲ್ಲಿ ಬಿಪೊರ್‌ಜಾಯ್‌ ಚಂಡಮಾರುತ ಅಬ್ಬರಿಸಿದ ಪರಿಣಾಮ ಜಿಲ್ಲೆಯಲ್ಲಿ 1.6 ಕಿಮೀ ಕಡಲ್ಕೊರೆತ ಸಂಭವಿಸಿದೆ. ಬೈಂದೂರು ತಾಲ್ಲೂಕಿನ ಮರವಂತೆ ಕಡಲ ತೀರ, ನಾಗಬನ, ಬ್ರಹ್ಮಾವರ ತಾಲ್ಲೂಕಿನ ಕೋಡಿಕನ್ಯಾನ, ಮಣೂರು, ಕೋಡಿಬೆಂಗ್ರೆ, ಉಡುಪಿ ತಾಲ್ಲೂಕಿನ ಮಲ್ಪೆ ಪಡುಕೆರೆ, ಕುತ್ಪಾಡಿ, ಕಾಪು ತಾಲ್ಲೂಕಿನ ಕೈಪುಂಜಾಲು, ಮೂಳೂರಿನಲ್ಲಿ ಕಡಲ್ಕೊರೆತ ಉಂಟಾಗಿದ್ದು ಸಾರ್ವಜನಿಕರ ಆಸ್ತಿಗೆ ಹಾನಿಯಾಗಿದೆ.

ಕಡಲ್ಕೊರೆತ ಸಂಭವಿಸಿರುವ ಪ್ರದೇಶಗಳಲ್ಲಿ ತುರ್ತು ತಡೆಗೋಡೆ ನಿರ್ಮಾಣಕ್ಕೆ ₹11.75 ಕೋಟಿ ಅಥವಾ ದೀರ್ಘಕಾಲಿಕ ತಡೆಗೋಡೆ ನಿರ್ಮಾಣಕ್ಕೆ ₹17.70 ಕೋಟಿ ಅನುದಾನ ಕೋರಿ ಬಂದರು ಮತ್ತು ಮೀನುಗಾರಿಕೆ ವಿಭಾಗದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದ್ದು, ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಪ್ರತಿಬಾರಿ ಕಡಲ್ಕೊರೆತ ಸಂಭವಿಸಿದಾಗ ತಾತ್ಕಾಲಿಕ ಪರಿಹಾರ ಘೋಷಣೆ ಹೊರತಾಗಿ ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ಅನುಷ್ಠಾನಗೊಳ್ಳುತ್ತಿಲ್ಲ ಎಂಬುದು ಕಡಲ ತೀರದ ನಿವಾಸಿಗಳ ಅಳಲು.

ಪ್ರತಿವರ್ಷ ಮಳೆಗಾಲದಲ್ಲಿ ಕಲಡ್ಕೊರೆತ ಸಂಭವಿಸಬಹುದಾದ ಪ್ರದೇಶಗಳ ಪಟ್ಟಿಯನ್ನು ಮಾರಿ ತಾತ್ಕಾಲಿಕ ಹಾಗೂ ಶಾಶ್ವತ ತಡೆಗೋಡೆ ಕಾಮಗಾರಿ ಕೋರಿ ಬಂದರು ಮತ್ತು ಮೀನುಗಾರಿಕೆ ವಿಭಾಗದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗುತ್ತಿದ್ದರೂ ಸರ್ಕಾರದಿಂದ ಸಮರ್ಪಕ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. 

ಕಡಲ್ಕೊರೆತ ಸಂಭವಿಸಿದಾಗ ತಾತ್ಕಾಲಿಕ ಪರಿಹಾರ ನೀಡಿ ಸರ್ಕಾರ ಕೈತೊಳೆದುಕೊಳ್ಳುತ್ತಿದೆಯೇ ಹೊರತು ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಪ್ರತಿ ವರ್ಷ ಕಡಲ್ಕೊರೆತ ಸಂಭವಿಸಿದಾಗ ಶಾಶ್ವತ ಪರಿಹಾರ ನೀಡುವುದಾಗಿ ಸಚಿವರು, ಮುಖ್ಯಮಂತ್ರಿಗಳು ನೀಡುವ ಹೇಳಿಕೆ ಇದುವರೆಗೂ ಅನುಷ್ಠಾನಕ್ಕೆ ಬಂದಿಲ್ಲ. ವಿದೇಶಿ ತಂತ್ರಜ್ಞಾನ ಬಳಕೆ ಪ್ರಾಯೋಗಿಕ ಹಂತದಲ್ಲಿಯೇ ಇದೆ ಎನ್ನುತ್ತಾರೆ ತೀರದ ನಿವಾಸಿಗಳು.

ಜಿಲ್ಲೆಯಲ್ಲಿ ಕಡಲ್ಕೊರೆತಕ್ಕೆ ಅತಿ ಹೆಚ್ಚು ಬಾಧಿತವಾಗುವ ತಾಲ್ಲೂಕು ಕಾಪು. ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಜಮಾಡಿಯಿಂದ ಉದ್ಯಾವರದವರೆಗೆ 24 ಕಿಮೀ ಸಮುದ್ರ ಕಿನಾರೆಯಲ್ಲಿ ಪ್ರತಿವರ್ಷ ಕಡಲ್ಕೊರೆತ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಮೂಳೂರು, ಕಾಪು, ಕೈಪುಂಜಾಲು ತೀರದಲ್ಲಿ ಸಮುದ್ರ ಕೊರತೆ ಹೆಚ್ಚಾಗಿರುತ್ತದೆ.

ಎರ್ಮಾಳಿನಲ್ಲಿ ಹತ್ತು ವರ್ಷಗಳ ಹಿಂದೆ ಕಡಲ್ಕೊರೆತ ತೀವ್ರಗೊಂಡು ರಸ್ತೆ ಸಂಪರ್ಕವೇ ಕಡಿತಗೊಂಡಿತ್ತು. ಪಡುಬಿದ್ರಿಯಲ್ಲಿ ನಾಲ್ಕು ವರ್ಷಗಳ ಹಿಂದೆ ನಡಿಪಟ್ಣ ಭಾಗದಲ್ಲಿ ಬೀಚ್ ಅಭಿವೃದ್ಧಿಗೆ ಅಳವಡಿಸಿದ ನೆಲಹಾಸು ಕಿತ್ತುಬಂದಿತ್ತು. ಈಗ ಪಡುಬಿದ್ರಿ-ಕಡಿಪಟ್ಣದಲ್ಲಿ ಮೀನುಗಾರಿಕಾ ಪರಿಕರಗಳನ್ನು ಶೇಖರಿಸಿಡುವ ಕಾಡಿಪಟ್ಣ ಕೈರಂಪಣಿ ಫಂಡಿನ ಗೋದಾಮಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಬೀಚ್‌ ಪ್ರದೇಶವೂ ಹಾಳಾಗಿದೆ.

ಬೀಚ್‌ನಿಂದ ಸ್ವಲ್ಪ ದೂರದಲ್ಲಿರುವ ರಸ್ತೆ ಅಪಾಯದಲ್ಲಿದೆ. ಐದು ಲಕ್ಷ ವೆಚ್ಚದಲ್ಲಿ 5 ವರ್ಷಗಳ ಹಿಂದೆ ಪಡುಬಿದ್ರಿ ಬೀಚ್‌ನಲ್ಲಿ ಹಾಕಲಾಗಿದ್ದ ಇಂಟರ್‌ಲಾಕ್, ಕಾಂಕ್ರೀಟ್ ತಡೆಗೋಡೆ ಬಹುತೇಕ ಸಮುದ್ರ ಪಾಲಾಗಿದೆ. ಸಮೀಪದಲ್ಲಿರುವ ವಾಚ್‌ಟವರ್ ಹಾಗೂ ಹಟ್ ಕೂಡ ಸಮುದ್ರ ಪಾಲಾಗುವ ಭೀತಿಯಲ್ಲಿದೆ.

ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ

ಪ್ರತಿವರ್ಷ ಮಳೆಗಾಲಕ್ಕೆ ಮುನ್ನ ಕಡಲ್ಕೊರೆತ ಸಂಭವಿಸುವ ಸಂಭಾವ್ಯ ಪ್ರದೇಶಗಳನ್ನು ಪಟ್ಟಿಮಾಡಿ ತುರ್ತು ಹಾಗೂ ದೀರ್ಘಕಾಲಿಕ ಕಾಮಗಾರಿಗೆ ಅನುದಾನ ಬಿಡುಗಡೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ. 2023ರಲ್ಲಿ ಜಿಲ್ಲೆಯ 6 ಕಡೆಗಳಲ್ಲಿ ಕಡಲ್ಕೊರೆತ ಉಂಟಾಗಿದ್ದು ತುರ್ತು ಕಾಮಗಾರಿಗೆ ₹11.75 ಕೋಟಿ ದೀರ್ಘಕಾಲಿನ ಕಾಮಗಾರಿಗೆ ₹17.70 ಕೋಟಿ ಅನುದಾನ ಬಿಡುಗಡೆ ಕೋರಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಅನುದಾನ ಬಿಡುಗಡೆಯಾಗಿಲ್ಲ. ಕಡಲ್ಕೊರೆತ ತಡೆ ಕಾಮಗಾರಿಗೆ ಅನುದಾನದ ಕೊರತೆಯಿಂದ ಉದ್ದೇಶಿತ ಕಾಮಗಾರಿಗಳ ಅನುಷ್ಠಾನ ಸಾಧ್ಯವಾಗುತ್ತಿಲ್ಲ ಎಂದು ಬಂದರು ಇಲಾಖೆ ಎಂಜಿನಿಯರ್‌ ಶ್ರೀನಿವಾಸ ಮೂರ್ತಿ ತಿಳಿಸಿದರು.

ಕಡಲ್ಕೊರೆತ ಮಾನವ ನಿರ್ಮಿತ

ಸಿಆರ್‌ಝಡ್ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ, ನದಿ ಹಾಗೂ ಸಮುದ್ರ ತೀರದ ಅತಿಕ್ರಮಣ ಅಕ್ರಮ ಮರಳುಗಾರಿಕೆ ಕಡಲ್ಕೊರೆತಕ್ಕೆ ಕಾರಣವಾಗಿದ್ದು ಮಾನವನ ದುರಾಸೆಯು ಹಾನಿಯ ಪ್ರಮಾಣ ಹೆಚ್ಚಾಗುವಂತೆ ಮಾಡಿದೆ ಎನ್ನುತ್ತಾರೆ ಪರಿಸರ ತಜ್ಞರು.

ತುರ್ತಾಗಿ ಕಡಲ್ಕೊರೆತ ಪ್ರದೇಶಗಳಲ್ಲಿ ಕಲ್ಲುಗಳನ್ನು ಹಾಕಲು ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಕಳೆದ ಮೂರು ವರ್ಷಗಳಿಂದ ಸಮುದ್ರಕ್ಕೆ ಕಲ್ಲು ಹಾಕುವ ಕಾಮಗಾರಿ ನಡೆದಿದ್ದರೂ ಗುತ್ತಿಗೆದಾರರಿಗೆ ₹54 ಕೋಟಿಯಷ್ಟು ಬಾಕಿ ಇರುವ ಕಾರಣ ಕಲ್ಲು ಹಾಕುವ ಕಾಮಗಾರಿಗೆ ಗುತ್ತಿಗೆದಾರರೇ ಮುಂದೆ ಬರುತಿಲ್ಲ ಎನ್ನುತ್ತಾರೆ ಸ್ಥಳೀಯರು.

ಸಮುದ್ರ ಕೊರೆತ ತಡೆಗೆ ತುರ್ತು ಕಾಮಗಾರಿಯ ಬದಲು ಶಾಶ್ವತ ಪರಿಹಾರ ನೀಡಬೇಕು. ಕಡಲ್ಕೊರೆತ ತಡೆಗೆ ಕೆಲವು ಕಡೆ ನಡೆದಿರುವ ತಡೆಗೋಡೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಹತ್ತು ಅಡಿ ಆಳದಲ್ಲಿ ಹೊಂಡ ತೆಗೆದು ಕಲ್ಲುಗಳನ್ನು ಸಮರ್ಪಕವಾಗಿ ಜೋಡಿಸಿ ಬಳಿಕ ತಡೆಗೋಡೆ ನಿರ್ಮಾಣ ಮಾಡಬೇಕು. ಆದರೆ ಕಾಮಗಾರಿ ಬೇಕಾಬಿಟ್ಟಿ ನಡೆಯುತ್ತಿದೆ ಎನ್ನುತ್ತಾರೆ ಸ್ಥಳೀಯರಾದ ಅಶೋಕ್ ಸಾಲ್ಯಾನ್ ಪಡುಬಿದ್ರಿ.

ಸಮುದ್ರಕ್ಕೆ ಕಲ್ಲು ಹಾಕುವುದರಿಂದ ಕಡಲ್ಕೊರೆತ ತಡೆಯಲು ಸಾಧ್ಯವಿಲ್ಲ. ಸಮುದ್ರದ ಅಲೆಗಳ ಅಧ್ಯಯನ ಆಧಾರಿತ ಆಧುನಿಕ ತಂತ್ರಜ್ಞಾನದ ಕಾಮಗಾರಿಗಳು ಸಮಸ್ಯೆಗೆ ಪರಿಹಾರವಾಗಬಲ್ಲದು ಎನ್ನುತ್ತಾರೆ ಅವರು.

ಸಂಭಾವ್ಯ ಕಡಲ್ಕೊರೆತ ಪ್ರದೇಶಗಳು

ಬೈಂದೂರಿನ ಪಡುವರಿ ಜೆಟ್ಟಿಕೇಶ್ವರ ತೀರ, ಬೈಂದೂರಿನ ಕಿರಿಮಂಜೇಶ್ವರ ಆದ್ರಗೋಳಿ ದಕ್ಷಿಣ ತೀರ, ಬೈಂದೂರಿನ ಕಿರಿಮಂಜೇಶ್ವರ ಆದ್ರಗೋಳಿ ಉತ್ತರ ತೀರ, ಬೈಂದೂರಿನ ಕಿರಿಮಂಜೇಶ್ವರ ಆಕಳಬೈಲು ತೀರ, ಬೈಂದೂರಿನ ಮರವಂತೆ ನಾಗಬನ ಹಾಗೂ ಉತ್ತರ ತೀರ, ಬೈಂದೂರಿನ ಮರವಂತೆ ಬ್ಯಾಲೆ ಬದಿ ಕುಂದಾಪುರದ ತ್ರಾಸಿ ಕಡಲ ತೀರ, ಕುಂದಾಪುರದ ಗುಜ್ಜಾಡಿ ಕಂಚಗೋಡು ರಾಣೇರ ಕೇರಿ, ಬ್ರಹ್ಮಾವರದ ಕೋಡಿ ಕನ್ಯಾನ ಲಿಲ್ಲಿ ಬೀಚ್‌, ಬ್ರಹ್ಮಾವರದ ಕೋಡಿ ಕನ್ಯಾನ ಹೊಸಬೇಂಗ್ರೆ ತೀರ, ಬ್ರಹ್ಮಾವರದ ಶಿವರಾಜ್ ಸ್ಟ್ರೋರ್ಸ್‌ ತೀರ, ಉಡುಪಿಯ ಉದ್ಯಾವರ ಪಡುಕೆರೆ ತೀರ, ಕಾಪು ತಾಲ್ಲೂಕಿನ ಕೈಪುಂಜಾಲ್‌ ತೀರ, ಕಾಪುವಿನ ಮೂಳೂರು ತೊಟ್ಟಂ ತೀರ, ಪಡುಬಿದ್ರೆ ತೀರ, ಪಡುಬಿದ್ರೆಯ ನಡಿಪಟ್ಣ ಹಾಗೂ ನಡಿಪಟ್ಣ ಕಾಂಕ್ರೀಟ್ ರಸ್ತೆ.

ರಾಜ್ಯದ ಕರಾವಳಿ ತೀರದ ವಿಸ್ತೀರ್ಣ ; 300 ಕಿ.ಮೀ

ಉಡುಪಿ ಜಿಲ್ಲೆಯ ಕರಾವಳಿ ವಿಸ್ತೀರ್ಣ ; 98 ಕಿ.ಮೀ‌

ಕಾಪು ತಾಲ್ಲೂಕು ಕರಾವಳಿ ತೀರ ; 26 ಕಿ.ಮೀ

ಉಡುಪಿ ತಾಲ್ಲೂಕು ಕರಾವಳಿ ತೀರ ; 16 ಕಿ.ಮೀ

ಕುಂದಾಪುರ ತಾಲ್ಲೂಕು ಕರಾವಳಿ ತೀರ ; 21 ಕಿ.ಮೀ

ಬೈಂದೂರು ತಾಲ್ಲೂಕು ಕರಾವಳಿ ತೀರ ; 35 ಕಿ.ಮೀ

2023ನೇ ಸಾಲಿನ ಕಡಲ್ಕೊರೆತ ಹಾನಿ

ಕಡಲ್ಕೊರೆತ;ಹಾನಿ ಪ್ರದೇಶ;ಹಾನಿ ಅಂದಾಜು (ಕೋಟಿಗಳಲ್ಲಿ)

ಮರವಂತೆ ಕಡಲ;150 ಮೀ;₹1.20

ಮರವಂತೆ ನಾಗಬನ;300 ಮೀ;₹2.4

ಕೋಡಿ ಕನ್ಯಾನ ಹೊಸ ಬೆಂಗ್ರೆ ಲೈಟ್‌ ಹೌಸ್‌;250 ಮೀ;₹2

ಮಣೂರು ಪಡುಕೆರೆ ಲಿಲ್ಲಿ ಬೀಚ್‌;200 ಮೀ;₹1.75

ಮಲ್ಪೆ ಪಡುಕೆರೆ ಕುತ್ಪಾಡಿ ಬೀಚ್‌;400 ಮೀ;₹2

ಕಾಪು ಕೈಪುಂಜಾಲು ಮೂಳೂರು;300 ಮೀ;₹2.40

ಕಡಲ್ಕೊರೆತ ಪ್ರಸ್ತಾಪಿತ ಕಾಮಗಾರಿಗಳು

ವರ್ಷ; ಕಾಮಗಾರಿಗಳ ಸಂಖ್ಯೆ ; ಅಂದಾಜು ವೆಚ್ಚ (ಕೋಟಿಗಳಲ್ಲಿ)

2018 ; 19 ; 8 ; ₹7.60

2019 ; 20 ; 14 ; ₹7.82

2020 ; 21 ; 13 ; ₹18.95

2021 ; 22 ; 28 ; ₹100

ಕಡಲ್ಕೊರೆತದಿಂದ ತೀರ ಪ್ರದೇಶ ಹಾಗೂ ತೆಂಗಿನ ಮರಗಳು ಕಡಲ ಪಾಲಾಗುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.