ADVERTISEMENT

ನುಡಿ ನಮನ | ಯಕ್ಷರಂಗದಿಂದ ಮರೆಯಾದ ಅನರ್ಘ್ಯ ರತ್ನ ಧಾರೇಶ್ವರ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 23:39 IST
Last Updated 25 ಏಪ್ರಿಲ್ 2024, 23:39 IST
ಸುಬ್ರಹ್ಮಣ್ಯ ಧಾರೇಶ್ವರ
ಸುಬ್ರಹ್ಮಣ್ಯ ಧಾರೇಶ್ವರ   

28 ವರ್ಷಗಳ ಕಾಲ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ, ಕೊನೆಯವರೆಗೂ ಯಕ್ಷಗಾನದಲ್ಲಿ ಬೇಡಿಕೆ ಹಾಗೂ ಬಹು ಮನ್ನಣೆ ಉಳಿಸಿಕೊಂಡ ಸ್ಟಾರ್ ಭಾಗವತರು ಸುಬ್ರಹ್ಮಣ್ಯ ಧಾರೇಶ್ವರರು. ಹೊಸ ಪ್ರಸಂಗಗಳನ್ನು ಗೆಲ್ಲಿಸುವಲ್ಲಿ ಧಾರೇಶ್ವರರ ಶ್ರಮ, ಕೊಡುಗೆ ಹಾಗೂ ಸೂತ್ರಧಾರಿಕೆ ಅಪಾರ.

ಯಕ್ಷಗಾನದಲ್ಲಿ ನಾವಡರು ವಿಜೃಂಭಿ ಸುತ್ತಿದ್ದ ಕಾಲದಲ್ಲಿಯೇ ಪ್ರಧಾನ ಭಾಗವತರು, ಯೋಗ್ಯ ಭಾಗವತರು ಎಂದು ಕರೆಸಿಕೊಂಡಿದ್ದರು. ರಂಗದಲ್ಲಿ ಕಲಾವಿದರು ಒಂದು ಶಬ್ದ ತಪ್ಪಿದರೂ ನಿಷ್ಠುರವಾಗಿ ತಿದ್ದಿ ಹೇಳುತ್ತಿದ್ದ ಧಾರೇಶ್ವರರಿಗೆ ನೂರಾರು ಕಲಾವಿದರನ್ನು ಬೆಳೆಸಿದ ಹಿರಿಮೆ-ಗರಿಮೆ ಸಲ್ಲುತ್ತದೆ.

ಹಾಸ್ಯಪ್ರಜ್ಞೆ ಹೆಚ್ಚಾಗಿತ್ತಾದರೂ ಪ್ರಸಂಗಗಳ ಗೆಲ್ಲಿಸುವಲ್ಲಿ ಕಡು ನಿಷ್ಠುರವಾದಿ. ಯಕ್ಷರಂಗದಲ್ಲಿ ಕ್ಯಾಸೆಟ್‌ನ ಹೊಸ ಶಕೆ ಆರಂಭಿಸಿದಾಗ ಕಾಳಿದಾಸ, ಕಾರ್ತವೀರ್ಯದಂತಹ ಪ್ರಸಂಗಗಳ ಕ್ಯಾಸೆಟ್‌ಗಳು ಮಾರುಕಟ್ಟೆಯಲ್ಲಿ ದಾಖಲೆಯ ಮಾರಾಟ ಕಂಡಿದ್ದವು.

ADVERTISEMENT

ಯಕ್ಷಗಾನದ ಬಗ್ಗೆ ಅವರಿಗೆ ಬದ್ಧತೆ ಎಷ್ಟಿತ್ತೆಂದರೆ ಬೇಡಿಕೆಯ ಉತ್ತುಂಗದಲ್ಲಿದ್ದಾಗಲೂ ಹೊರಗಿನ ಕಾರ್ಯಕ್ರಮಗಳಿಗೆ ಹೋಗುತ್ತಿರಲಿಲ್ಲ. ಡೇರೆ ಮೇಳದಲ್ಲಿದ್ದುಕೊಂಡು ಹೊರಗಿನ ಕಾರ್ಯಕ್ರಮಕ್ಕೆ ಕಲಾವಿದರು ಹೋದರೆ ಮೇಳಕ್ಕೆ ಬೆಲೆ ಕಡಿಮೆಯಾಗುತ್ತದೆ ಎಂಬುದು ಅವರ ನಿಲುವಾಗಿತ್ತು. ಮೇಳದ ಬಗ್ಗೆ ಅವರಿಗಿದ್ದ ಬದ್ಧತೆಯ ಕಾರಣಕ್ಕೆ ಬಹಳಷ್ಟು ಕಲಾವಿದರ ನಿಷ್ಠುರತೆ ಕಟ್ಟಿಕೊಂಡಿದ್ದರು.

ಪೆರ್ಡೂರು ಮೇಳ ಸ್ಥಾಪನೆಯಲ್ಲಿ ದುರ್ಗಪ್ಪ ಗುಡಿಗಾರ, ಗಜಾನನ ಭಂಡಾರಿ ಅವರಷ್ಟೇ ಶ್ರಮ ಧಾರೇಶ್ವರರದ್ದೂ ಇದೆ. ಪೆರ್ಡೂರಿನ ಅನಂತ ಪದ್ಮನಾಭನ ಕೃಪೆಯೋ ಏನೋ 28 ವರ್ಷಗಳ ಕಾಲ ನಿರಂತರವಾಗಿ ಪೆರ್ಡೂರು ಮೇಳದಲ್ಲಿ ವಿಜೃಂಭಿಸಿದರು. ಪ್ರತಿವರ್ಷ ಹೊಸ ಪ್ರಸಂಗಗಳಲ್ಲಿ ಹೊಸತನ ತುಂಬಿ, ಹೊಸ ಪದ್ಯಗಳನ್ನು ಸೇರಿಸಿ ಪ್ರಸಂಗವನ್ನು ಗೆಲ್ಲಿಸುತ್ತಿದ್ದರು. ಪ್ರಸಂಗ ಮುಗಿದ ಮೇಲೆ ಪ್ರೇಕ್ಷಕರು ಹಾಡನ್ನು ಗುನುಗುವಂತೆ ಮಾಡುತ್ತಿದ್ದ ಸಾಮರ್ಥ್ಯ, ಕಲಾವಿದನ ನಾಡಿಮಿಡಿತ ಅರಿತು ಪದ್ಯ ಹೇಳುವ ಶಕ್ತಿ ಅವರಲ್ಲಿತ್ತು. 

ರಂಗಭೂಮಿಯ ಪರಿಚಯವೂ ಇದ್ದ ಕಾರಣ ಯಕ್ಷಗಾನದಲ್ಲಿ ಹೊಸ ಪ್ರಸಂಗಗಳು ಬಂದಾಗ ರಾಗಬಳಕೆ, ರಂಗಸ್ಥಳದಲ್ಲಿ ಸಿನಿಮೀಯ ತಂತ್ರಗಾರಿಕೆ ಬಳಕೆ, ಹೊಸ ಹೊಸ ರಂಗ ತಂತ್ರಗಳ ಅನುಷ್ಠಾನದಿಂದ ಪ್ರೇಕ್ಷಕರನ್ನು ಸೆಳೆಯು ತ್ತಿದ್ದರು. ಎಲೆಕ್ಟ್ರಿಷಿಯನ್‌ ವೃತ್ತಿಯಲ್ಲೂ ನೈಪುಣ್ಯ ಇದ್ದಿದ್ದರಿಂದ ರಂಗದ ಮೇಲೆ ಮೈಕ್‌ ಬಳಕೆ, ಎಕೋ ತಂತ್ರಜ್ಞಾನ ಬಳಕೆಯಲ್ಲಿ ನಿಷ್ಣಾತರಾಗಿದ್ದರು.

ಅಧ್ಯಯನಶೀಲತೆ, ಚಿಂತನೆ, ಯೋಚನೆ, ಯೋಜನೆ ಹಾಗೂ ಕೌಶಲವನ್ನು ರಂಗಸ್ಥಳದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿ ಸುತ್ತಿದ್ದ ಶ್ರೇಷ್ಠ ಕಲಾವಿದರಾಗಿದ್ದರು. ಧಾರೇಶ್ವರರ ಅಗಲಿಕೆಯ ನಿರ್ವಾತವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಚಿಟ್ಟಾಣಿ, ಕೆರೆಮನೆ ಶಂಭು ಹೆಗೆಡೆ, ಜಲವಳ್ಳಿ ಅವರಂತಹ ಅನರ್ಘ್ಯ ರತ್ನಗಳ ಜತೆಗೆ ಧಾರೇಶ್ವರ ಎಂಬ ರತ್ನವನ್ನೂ ಕಳೆದುಕೊಂಡಿದ್ದೇವೆ.

ಪೆರ್ಡೂರು ಮೇಳದ ಆಟದ ಓಟವೇ ಬೇರೆ, ಪೆರ್ಡೂರು ಮೇಳಕ್ಕೆ, ಧಾರೇಶ್ವರರ ಭಾಗವತಿಕೆಗೆ, ಅವರ ನಿರ್ದೇಶನಕ್ಕೆ ಹೊಸ ಪ್ರೇಕ್ಷಕರು ಹುಟ್ಟಿ ಕೊಂಡಿದ್ದರು. ಸಾಗರಕ್ಕೆ ಸಾಗರವೇ ಸಾಟಿಯಾದಂತೆ, ಗಗನಕ್ಕೆ ಗಗನವೇ ಉಪಮೆಯಾದಂತೆ ಧಾರೇಶ್ವರರಿಗೆ ಧಾರೇಶ್ವರರೇ ಸಮ ಎಂದು ನಿಶ್ಚಯವಾಗಿ ಹೇಳಬಹುದು.

ಮೇಳವನ್ನು ಹಾಗೂ ಕಲಾವಿದರನ್ನು ಗೆಲ್ಲಿಸುವಲ್ಲಿ ಧಾರೇಶ್ವರರ ಶ್ರಮ ಅಪಾರ. ಭಾಗವತರು ಎಂದು ಕರೆಸಿಕೊಳ್ಳುವ ಕೊನೆಯ ವ್ಯಕ್ತಿ ಬಹುಶಃ ಧಾರೇಶ್ವರರೊಬ್ಬರೇ ಎಂಬುದು ವೈಯಕ್ತಿಕ ಅನಿಸಿಕೆ.

ಲೇಖಕ: ಯಕ್ಷಗಾನ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.