ADVERTISEMENT

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 20 ವರ್ಷ ಕಠಿಣ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2022, 15:53 IST
Last Updated 14 ಡಿಸೆಂಬರ್ 2022, 15:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಆದೇಶ ನೀಡಿದ್ದಾರೆ. ಭಾಸ್ಕರ್ ನಾಯ್ಕ ಶಿಕ್ಷೆಗೆ ಗುರಿಯಾದವ.

ಪ್ರಕರಣದ ವಿವರ

ಶಾಲಾ ಕ್ಯಾಬ್‌ ಚಾಲಕನಾಗಿರುವ ಭಾಸ್ಕರ ನಾಯ್ಕ ಖಾಸಗಿ ಸಮಾರಂಭವೊಂದರಲ್ಲಿ ಬಾಲಕಿಯನ್ನು ಪರಿಚಯಿಸಿಕೊಂಡು ಆಕೆಯಿಂದ ಮೊಬೈಲ್ ನಂಬರ್‌ ಪಡೆದಿದ್ದ. ಬಳಿಕ ಆಕೆಯನ್ನು ಒಂಟಿಯಾಗಿ ಬರುವಂತೆ ಒತ್ತಾಯಿಸಿದ್ದ.

ADVERTISEMENT

ಬಾಲಕಿ ನಿರಾಕರಿಸಿದಾಗ ಮೊಬೈಲ್‌ನಲ್ಲಿ ಮಾತನಾಡುತ್ತಿರುವ ವಿಚಾರವನ್ನು ಪೋಷಕರಿಗೆ ತಿಳಿಸುವುದಾಗಿ ಬೆದರಿಕೆಯೊಡ್ಡಿದ್ದ. ಬಾಲಕಿ ಹೆದರಿ ಬಂದಾಗ ಆಕೆಯ ಮೇಲೆ ರಸ್ತೆಯ ಬದಿ ವಾಹನದೊಳಗೆ ಬಲಾತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ.

ಶಾಲೆಗೆ ಹೋಗುವಾಗಲೂ ದೈಹಿಕ ಸಂಪರ್ಕ ಬೆಳೆಸಿ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ. ಅಂದು ಬಾಲಕಿ ಶಾಲೆಗೆ ಹೋಗದ ಬಗ್ಗೆ ಆಕೆಯ ತಮ್ಮ ಪೋಷಕರಿಗೆ ವಿಷಯ ತಿಳಿಸಿದ್ದ. ಪೋಷಕರು ಬಾಲಕಿಯನ್ನು ವಿಚಾರಿಸಿದಾಗ ಭಾಸ್ಕರ್‌ ನಾಯ್ಕನ ಕೃತ್ಯ ಬಹಿರಂಗವಾಗಿತ್ತು.

ಆರೋಪಿ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕ್ಯಾಬ್‌ ವಶಕ್ಕೆ ಪಡೆದು ಆತನನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಆತ ಬಿಡುಗಡೆಯಾಗಿದ್ದ. ಅಂದಿನ ಇನ್‌ಸ್ಪೆಕ್ಟರ್ ಸಂಪತ್ ಕುಮಾರ್ ‍ಪ್ರಕರಣದ ತನಿಖೆ ನಡೆಸಿದ್ದರು. ಬಳಿಕ ಇನ್‌ಸ್ಪೆಕ್ಟರ್ ಸೀತಾರಾಮ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ 28 ಸಾಕ್ಷಿಗಳ ಪೈಕಿ 17 ಸಾಕ್ಷಿಗಳ ವಿಚಾರಣೆ ನಡೆದಿತ್ತು. ನೊಂದ ಬಾಲಕಿಯ ಸಾಕ್ಷ್ಯ ಹಾಗೂ ಇತರ ಸಾಂದರ್ಭಿಕ ಸಾಕ್ಷ್ಯಗಳು ಭಾಸ್ಕರ್ ನಾಯ್ಕ ದೋಷಿ ಎಂಬುದನ್ನು ಸಾಬೀತು ಪಡಿಸಲು ಅಭಿಯೋಜನೆಗೆ ನೆರವಾಗಿದ್ದರಿಂದ ನ್ಯಾಯಾಲಯ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಪ್ರಾಸಿಕ್ಯೂಷನ್ ಪರವಾಗಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.