ಉಡುಪಿ: ಹಿಡಿಯಡಕದಲ್ಲಿರುವ ಶಿರೂರು ಮೂಲಮಠವನ್ನು ಸೋಮವಾರ ಪೊಲೀಸರು ಸೋದೆ ಮಠದ ಸುಪರ್ದಿಗೆ ಒಪ್ಪಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯೆ ನೀಡಿದ್ದು, ಶಿರೂರು ಲಕ್ಷ್ಮೀವರ ತೀರ್ಥರ ಸಾವಿನ ಪ್ರಕರಣದಲ್ಲಿ ತನಿಖೆ ಮುಂದುವರಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮೂಲಮಠವನ್ನು ಬಿಟ್ಟುಕೊಡಲಾಗಿದೆ’ ಎಂದು ತಿಳಿಸಿದ್ದಾರೆ.
ಸ್ವಾಮೀಜಿ ಅವರು ತಂಗುತ್ತಿದ್ದ ಖಾಸಗಿ ಕೋಣೆ, ಸ್ಟೋರ್ ರೂಂ, ಅಡುಗೆ ಕೋಣೆ, ಮಠದ ಕಚೇರಿ ಸೇರಿದಂತೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ 5 ರೂಂಗಳ ಕೀಲಿಕೈ ಅನ್ನು ಮಠದ ಉಸ್ತುವಾರಿ ಸುಬ್ರಹ್ಮಣ್ಯ ಭಟ್ ಅವರಿಗೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ.
ಶಿರೂರು ಮಠದಲ್ಲಿ ಹಿಂದಿನಂತೆಯೇ ಪೂಜೆಗಳು ನಡೆಯಲಿವೆ. ಭಕ್ತರ ಪ್ರವೇಶಕ್ಕೆ ಮಠವು ಮುಕ್ತವಾಗಿದೆ ಎಂದು ಸೋದೆ ಮಠದ ಮೂಲಗಳು ತಿಳಿಸಿವೆ.
ಪೊಲೀಸರು ಈಚೆಗಷ್ಟೇ ರಥಬೀದಿಯಲ್ಲಿರುವ ಶಿರೂರು ಮಠವನ್ನು ಹಾಗೂ ಮಠದ ಚರಾಸ್ತಿಯನ್ನು ದ್ವಂದ್ವಮಠವಾದ ಸೋದೆ ಮಠಕ್ಕೆ ಒಪ್ಪಿಸಿದ್ದರು. ಎರಡೂ ಮಠಗಳು ಸೋದೆ ಮಠದ ವಶಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಶೀಘ್ರವೇ ಶಿರೂರು ಶ್ರೀಗಳ ಆರಾಧನೋತ್ಸವ ನಡೆಯಲಿದೆ.
ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ:ಶಿರೂರು ಶ್ರೀಗಳ ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್‌ಎಸ್‌ಎಲ್ ವರದಿ ಪೊಲೀಸರ ಕೈಸೇರಿದ್ದರೂ ಇದುವರೆಗೆ ಸಾವಿನ ಹಿಂದಿರುವ ಸತ್ಯವನ್ನು ಪೊಲೀಸರು ಅಧಿಕೃತವಾಗಿ ಬಯಲು ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.