ADVERTISEMENT

ಶಿರೂರು ಶ್ರೀ ಅನುಮಾನಾಸ್ಪದ ಸಾವು ಪ್ರಕರಣ: ಕೈಸೇರಿದ ಮರಣೋತ್ತರ ಪರೀಕ್ಷಾ ವರದಿ ?

ಎಫ್‌ಎಸ್‌ಎಲ್‌ ವರದಿಗೆ ಕಾಯುತ್ತಿರುವ ಪೊಲೀಸರು

​ಪ್ರಜಾವಾಣಿ ವಾರ್ತೆ
Published 26 ಜುಲೈ 2018, 18:25 IST
Last Updated 26 ಜುಲೈ 2018, 18:25 IST
   

ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರ ಅನುಮಾನಾಸ್ಪದ ಸಾವಿನ ಪ್ರಕರಣದ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಪೊಲೀಸರು ವರದಿ ಬಂದಿರುವ ಕುರಿತು ಖಚಿತ ಪಡಿಸಿಲ್ಲ. ಮರಣೋತ್ತರ ಪರೀಕ್ಷಾ ವರದಿಯು ಪ್ರಾಥಮಿಕ ಹಂತದ್ದಾಗಿದ್ದು, ಸಾವಿಗೆ ನಿಖರ ಕಾರಣ ತಿಳಿಯಬೇಕಾದರೆ ಎಸ್‌ಎಫ್‌ಎಲ್‌ ವರದಿ ಬರುವವರೆಗೂ ಕಾಯಬೇಕು. ಕೆಲವೇ ದಿನಗಳಲ್ಲಿ ಎಫ್‌ಎಸ್‌ಎಲ್‌ ವರದಿ ಬರಲಿದ್ದು, ಎರಡೂ ವರದಿಗಳು ತಾಳೆಯಾಗಬೇಕು. ಬಳಿಕ ತನಿಖೆಯ ದಿಕ್ಕನ್ನು ನಿರ್ಧರಿಸಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ ಹಲವರನ್ನು ವಿಚಾರಣೆ ನಡೆಸಲಾಗಿದೆ ಎಂಬ ಖಚಿತ ಮಾಹಿತಿ ಇದ್ದರೂ, ಪೊಲೀಸರು ಮಾತ್ರ ಪ್ರಕರಣದಲ್ಲಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದೇ ಹೇಳುತ್ತಿದ್ದಾರೆ.

ADVERTISEMENT

ಜುಲೈ 19ರಂದು ಶಿರೂರು ಶ್ರೀಗಳು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶ್ರೀಗಳು ವಿಷಪ್ರಾಷನನಿಂದ ಮೃತಪಟ್ಟಿರುವ ಶಂಕೆ ಇದೆ ಎಂದು ಮಣಿಪಾಲ ಆಸ್ಪತ್ರೆಯ ಅಧೀಕ್ಷಕರು ಹೇಳಿಕೆ ನೀಡಿದ ಬೆನ್ನಲ್ಲೇ, ಅವರ ಸಾವಿನ ಬಗ್ಗೆ ಅನುಮಾನಗಳು ಎದ್ದಿದ್ದವು.

ಮೊತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಕೇಮಾರು ಮಠದ ಈಶವಿಠಲ ದಾಸ ಸ್ವಾಮೀಜಿಗೆ ನಿಂದನೆ ಹಾಗೂ ಬೆದರಿಕೆ ಹಾಕಿದ ಆರೋಪದ ಮೇಲೆ ಮೂಡುಬಿದ್ರಿ ಪೊಲೀಸರು ವ್ಯಕ್ತಿಯೊಬ್ಬರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

**

ಮತ್ತೊಂದು ಡಿವಿಆರ್ ವಶಕ್ಕೆ?

ಉಡುಪಿ: ಶಿರೂರು ಮಠಕ್ಕೆ ಸೇರಿದ್ದು ಎನ್ನಲಾದ ಮತ್ತೊಂದು ಸಿಸಿಟಿವಿ ಕ್ಯಾಮೆರಾ ಡಿವಿಆರ್ ಸ್ವರ್ಣ ನದಿಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಈಚೆಗಷ್ಟೆ ಶಿರೂರು ಮೂಲಮಠದಲ್ಲಿ ನಾಪತ್ತೆಯಾಗಿದ್ದ ಡಿವಿಆರ್ ಅನ್ನು ಮುಳುಗುತಜ್ಞರು ಸ್ವರ್ಣ ನದಿಯಲ್ಲಿ ಪತ್ತೆ ಹಚ್ಚಿದ್ದರು. ಇದೀಗ ಮತ್ತೊಂದು ಡಿವಿಆರ್ ಕೂಡ ಅಲ್ಲಿಯೇ ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ತನಿಖೆ ಮತ್ತಷ್ಟು ಚುರುಕುಗೊಂಡಿದೆ.

ವಿಚಾರಣೆ ವೇಳೆ ಸ್ವಾಮೀಜಿ ಆಪ್ತರು ಡಿವಿಆರ್ ಬಗ್ಗೆ ನೀಡಿದ ಸುಳಿವಿನ ಮೇರೆಗೆ ಪೊಲೀಸರು ಕೆಲವು ದಿನಗಳಿಂದ ಮುಳುಗುತಜ್ಞರ ನೆರವಿನೊಂದಿಗೆ ನದಿಯಲ್ಲಿ ಡಿವಿಆರ್‌ಗೆ ಹುಡುಕಾಟ ನಡೆಸಿದ್ದರು.

ಮ‌ತ್ತೊಂದೆಡೆ, ಗುರುವಾರವೂ ಹಿರಿಯಡಕದ ಶಿರೂರು ಮೂಲಮಠಕ್ಕೆ ವಿಧಿವಿಜ್ಞಾನ ತಂಡದ ಸದಸ್ಯರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.