ಉಡುಪಿ: ಶಿರೂರು ಸ್ವಾಮೀಜಿ ಅನುಮಾನಾಸ್ಪದ ಸಾವಿನ ನಿಗೂಢತೆ ಬಯಲಾಗಬೇಕು ಎಂಬುದು ಅವರ ಆಪ್ತರ, ಅಭಿಮಾನಿಗಳ ಉದ್ದೇಶ. ಇದರ ಹಿಂದೆ ಯಾರ ತೇಜೋವಧೆ ಮಾಡುವ ಉದ್ದೇಶವಿಲ್ಲ ಎಂದು ಕೇಮಾರು ಮಠದ ಈಶವಿಠಲ ದಾಸ ಸ್ವಾಮೀಜಿ ಹೇಳಿದರು.
ಶಿರೂರು ಶ್ರೀ ಅಭಿಮಾನಿ ಬಳಗದಿಂದ ಶನಿವಾರ ಮಥುರಾ ಛತ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
‘ಶಿರೂರು ಸ್ವಾಮೀಜಿ ಜತೆ 500ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಎಲ್ಲಿಯೂ ಅವರ ಬಾಯಿಂದ ಮದ್ಯದ ವಾಸನೆ ಬಂದಿಲ್ಲ. ಆದರೆ, ಶ್ರೀಗಳ ಮರಣಾನಂತರ ಅವರ ತೇಜೋವಧೆ ಮಾಡುತ್ತಿರುವುದು ಎಷ್ಟು ಸರಿ’ ಎಂದು ಕೇಮಾರು ಸ್ವಾಮೀಜಿ ಪ್ರಶ್ನಿಸಿದರು.
‘ಮರಣದ ನಂತರ ಯಾರ ವಿರುದ್ಧವೂ ವೈರತ್ವ ಇಟ್ಟುಕೊಳ್ಳಬಾರದು. ಆರೋಪಗಳಿಗೆ ಉತ್ತರ ಕೊಡುವ ವ್ಯಕ್ತಿಯೇ ಇಲ್ಲವಾದಾಗ ವ್ಯಕ್ತಿತ್ವವನ್ನು ಪ್ರಶ್ನೆ ಮಾಡುವುದು ಎಷ್ಟು ಸರಿ. ಶ್ರೀಗಳು ಬದುಕಿದ್ದಾಗ ಕಷ್ಟದಲ್ಲಿದ್ದವರಿಗೆ ನೆರವಾಗಿದ್ದರು. ಹಾಗಾಗಿ, ಅವರ ಅನುಮಾನಾಸ್ಪದ ಸಾವಿನಲ್ಲಿ ನಿಷ್ಪಕ್ಷಪಾತವಾದ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.
‘ಶ್ರೀಗಳ ಸಾವಿನ ವಿಚಾರದಲ್ಲಿ ಯಾರನ್ನೂ ದೂರುವುದಿಲ್ಲ; ದೂಷಿಸುವುದಿಲ್ಲ. ಆದರೆ, ಮಣಿಪಾಲ ವೈದ್ಯರೇ ವಿಷಪ್ರಾಷನ ಸಂಶಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕು ಎಂಬುದಷ್ಟೇ ನನ್ನ ಹಾಗೂ ಶ್ರೀಗಳ ಅಭಿಮಾನಿಗಳ ಕಳಕಳಿ’ ಎಂದರು.
‘ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ. ಬ್ರಾಹ್ಮಣೇತರ ಸ್ವಾಮೀಜಿ ಎಂಬ ಒಂದೇ ಕಾರಣಕ್ಕೆ ಕೆಲವರು ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ. ಧೈರ್ಯವಿದ್ದರೆ ಪ್ರತ್ಯಕ್ಷವಾಗಿ ಬೆದರಿಕೆ ಹಾಕಲಿ’ ಎಂದು ಕೇಮಾರು ಸ್ವಾಮೀಜಿ ಸವಾಲು ಹಾಕಿದರು.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಸತ್ತಾಗ ರಾಜ್ಯದ ಗಣ್ಯರೆಲ್ಲರೂ ಸಂತಾಪ ಸೂಚಿಸಿದರು. ಆದರೆ, ನಾಲ್ಕು ದಶಕಗಳ ಕಾಲ ಶ್ರೀಕೃಷ್ಣನ ಪೂಜೆ ಮಾಡಿರುವ ಹಾಗೂ ಮೂರು ಪರ್ಯಾಯಗಳನ್ನು ನೆರವೇರಿಸಿರುವ ಶಿರೂರು ಶ್ರೀಗಳು ಮೃತಪಟ್ಟಾಗ ಗಣ್ಯರೆನಿಸಿಕೊಂಡವರು ಸಂತಾಪ ಸೂಚಿಸದಿರುವುದು ನೋವು ತಂದಿದೆ ಎಂದರು.
ಶಿರೂರು ಶ್ರೀಗಳು ಬದುಕಿದ್ದಾಗ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಅವರಿಂದ ಉಪಕಾರ ಪಡೆದವರೂ ಮೌನ ವಹಿಸಿರುವುದು ಸರಿಯಲ್ಲ ಎಂದರು.
ವಕೀಲ ರವಿಕಿರಣ್ ಮುರ್ಡೇಶ್ವರ ಮಾತನಾಡಿ, ‘ಯಾವುದೇ ವಿಚಾರದಲ್ಲಿ ಸಂದೇಹಗಳು ಒಳ್ಳೆಯದಲ್ಲ. ಶಿರೂರು ಸ್ವಾಮೀಜಿ ಅವರ ಸಾವಿನಲ್ಲೂ ಅನುಮಾನಗಳಿವೆ. ಶಿರೂರು ಶ್ರೀಗಳಿಗೆ ಅನಾರೋಗ್ಯವಿತ್ತಾದರೂ, ದಿಢೀರ್ ಸಾವು ತರುವ ಕಾಯಿಲೆಗಳಾಗಿರಲಿಲ್ಲ. ಆದರೂ ಶ್ರೀಗಳು ಹಠಾತ್ ನಿಧನರಾಗಿದ್ದು ಹೇಗೆ’ ಎಂಬ ಸಂಶಯ ಎಲ್ಲರನ್ನೂ ಕಾಡುತ್ತಿದೆ ಎಂದರು.
‘ವೈಜ್ಞಾನಿಕ ವಿಧಿವಿಜ್ಞಾನದ ಪ್ರಕಾರ ಬಹು ಅಂಗಾಂಗ ವೈಫಲ್ಯವಾದರೂ ಹಠಾತ್ ಸಾವು ಸಂಭವಿಸುವುದಿಲ್ಲ. ಸಾವಿಗೆ ಸಮಯ ಹಿಡಿಯುತ್ತದೆ. ಭಾನುವಾರ ಆರೋಗ್ಯವಾಗಿದ್ದ ಶ್ರೀಗಳು ಮಂಗಳವಾರ ಅನಾರೋಗ್ಯಕ್ಕೀಡಾಗಿ ಗುರುವಾರ ಮೃತಪಡುತ್ತಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಮುರ್ಡೇಶ್ವರ್ ಹೇಳಿದರು.
ಆ. 18ಕ್ಕೆ ಶಿರೂರು ಶ್ರೀಗಳು ನಿಧನರಾಗಿ ಒಂದು ತಿಂಗಳಾಗಲಿದ್ದು, ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜತೆಗೆ, ಶ್ರೀಗಳ ಸ್ಮರಣಾರ್ಥ ಶ್ರೀಕೃಷ್ಭ ಜನ್ಮಾಷ್ಠಮಿ ಹಾಗೂ ವಿಟ್ಲಪಿಂಡಿ ಉತ್ಸವದಂದು ಹುಲಿವೇಷ ಸ್ಪರ್ಧೆ ನಡೆಸುವ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಶಿರೂರು ಶ್ರೀಗಳ ಅಭಿಮಾನಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ, ಕಾರ್ಯದರ್ಶಿ ನವೀನ್ ರಾವ್, ಉಪಾಧ್ಯಕ್ಷ ಜಯರಾಮ್ ಅಂಬೆಕಲ್ಲು, ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.