ADVERTISEMENT

ಶಿರ್ವ: ಕೀಟಬಾಧೆಯಿಂದ ಕೃಷಿಕರು ಕಂಗಾಲು

ಪ್ರಕಾಶ ಸುವರ್ಣ ಕಟಪಾಡಿ
Published 10 ಆಗಸ್ಟ್ 2024, 7:10 IST
Last Updated 10 ಆಗಸ್ಟ್ 2024, 7:10 IST
ಬೇಸಿಗೆಯಲ್ಲಿನ ಆರೋಗ್ಯಪೂರ್ಣ ಮಲ್ಲಿಗೆ ಗಿಡ
ಬೇಸಿಗೆಯಲ್ಲಿನ ಆರೋಗ್ಯಪೂರ್ಣ ಮಲ್ಲಿಗೆ ಗಿಡ   

ಶಿರ್ವ: ಜಿಐ ಮಾನ್ಯತೆ ಪಡೆದಿರುವ ಉಡುಪಿ ಮಲ್ಲಿಗೆ ಗಿಡಗಳಲ್ಲಿ ಅಧಿಕ ಮಳೆಯಿಂದಾಗಿ ದಿಢೀರನೆ ಕೀಟಬಾಧೆ ಕಾಣಿಸಿಕೊಂಡಿದೆ.

ಮೃಗಶಿರ, ಪುಷ್ಯ ಮಳೆ ನಕ್ಷತ್ರದಲ್ಲಿ ಈ ಬಾರಿಯ ವರ್ಷಧಾರೆಗೆ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಶಂಕರಪುರ, ಕಟಪಾಡಿ, ಶಿರ್ವ, ಮೂಡುಬೆಳ್ಳೆ, ಮುದರಂಗಡಿ, ಬೆಳ್ಮಣ್ ಪರಿಸರದ ಮಲ್ಲಿಗೆ ಕೃಷಿಕರು ಕಂಗಾಲಾಗಿದ್ದಾರೆ.

ಈ ಭಾಗದಲ್ಲಿ ಸಾವಿರಾರು ಮಲ್ಲಿಗೆ ಗಿಡಗಳ ಬೇರುಗಳು ಕೊಳೆತು ಹೋಗಿವೆ. ಮಲ್ಲಿಗೆ ಗಿಡಗಳ ಎಲೆಗಳು ಉದುರುತ್ತಿದ್ದು, ಚಿಗುರುಗಳು ಕೀಟಬಾಧೆಯಿಂದಾಗಿ ಮುರುಟಿ ಹೋಗಿವೆ. ಮಳೆ ಕಡಿಮೆಯಾಗಿ ಬಿಸಿಲು ಬೀಳದಿದ್ದರೆ ಗಿಡಗಳು ಸಂಪೂರ್ಣ ನಾಶವಾಗುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಮಲ್ಲಿಗೆ ಕೃಷಿಕರು ಆತಂಕಗೊಂಡಿದ್ದಾರೆ.

ADVERTISEMENT

ಈ ಭಾಗದಲ್ಲಿ ಕೇವಲ ಮಲ್ಲಿಗೆ ಕೃಷಿಯಿಂದಲೇ ಜೀವನ ನಡೆಸುವ ನೂರಾರು ಕುಟುಂಬಗಳಿವೆ. ಮಳೆಗಾಲ ಸಮೀಪಿಸುತ್ತಿದ್ದಂತೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿದ್ದರೂ, ನಿರೀಕ್ಷೆಗೂ ಮೀರಿ ಮಳೆ ಬಂದುದರಿಂದ ಈ ಸಂಕಷ್ಟ ಎದುರಾಗಿದೆ. ಮಲ್ಲಿಗೆ ತೋಟದಲ್ಲಿ ಹುಲ್ಲು ಬೆಳೆಯದಂತೆ ನೆಲಕ್ಕೆ ಪ್ಲಾಸ್ಟಿಕ್ ಹಾಸು ಅಳವಡಿಸಿದ್ದು, ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರೂ ನಿರಂತರ ಮಳೆಗೆ ಗಿಡಗಳು ಸೊರಗಿವೆ ಹೋಗಿರುವುದರಿಂದ ಮಲ್ಲಿಗೆ ಇಳುವರಿಯೂ ನೆಲಕಚ್ಚಿದೆ.

ಮಲ್ಲಿಗೆ ಇಳುವರಿ ಹಠಾತ್ ಕುಸಿತ: ಜುಲೈ ತಿಂಗಳಲ್ಲಿ ಮಳೆ ಜಾಸ್ತಿಯಾಗಿ ಬಿಸಿಲು ಕಡಿಮೆಯಾಗಿ ಗಿಡಗಳು ಸಂಪೂರ್ಣವಾಗಿ ಹಾಳಾಗಿ ಹೋದುದರಿಂದ ಇಳುವರಿ ತೀರಾ ಕಡಿಮೆಯಾಗಿ ಶ್ರಾವಣ ಮಾಸದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿಯಾದ್ದರಿಂದ ಒಂದು ಅಟ್ಟಿ (ನಾಲ್ಕು ಚೆಂಡು) ಮಲ್ಲಿಗೆಗೆ ₹2,100 ದರ ಇದೆ. ಜುಲೈ ತಿಂಗಳಲ್ಲಿ ₹280 ಇದ್ದದ್ದು ಇಳುವರಿ ಕಡಿಮೆಯಾಗುತ್ತಾ ಶುಕ್ರವಾರ ₹2,100ರಿಂದ ₹2,500ರವರೆಗೆ ಮಾರುಕಟ್ಟೆ ದರ ಏರಿಕೆ ಕಂಡಿದೆ.

ಪೂಜೆ ಪುನಸ್ಕಾರಗಳು, ಶ್ರದ್ಧಾಕೇಂದ್ರಗಳಲ್ಲಿ ವಿಶೇಷ ಸೇವೆಗಳು, ನಾಗರಪಂಚಮಿ ಹಬ್ಬದ ಜೊತೆಗೆ ಇದೀಗ ಸರಣಿ ಹಬ್ಬಗಳು ಪ್ರಾರಂಭವಾಗುತ್ತಿದ್ದು, ಸಿಂಹ ಮಾಸದಲ್ಲಿ (ಸೋಣ ತಿಂಗಳು) ದೇವಿ ದೇವಸ್ಥಾನಗಳಲ್ಲಿ ಆರಾಧನೆಗಳು, ಭಾದ್ರಪದ ಮಾಸದಲ್ಲಿ ಗಣೇಶ ಹಬ್ಬ ಬರುವುದರಿಂದ ಮಲ್ಲಿಗೆ ಹೂವಿಗೆ ವಿಶೇಷ ಬೇಡಿಕೆ ಇರುತ್ತದೆ. ಈ ಹಂತದಲ್ಲಿಯೇ ಗಿಡಗಳು ಹಾಳಾಗಿದ್ದು, ಸರಿಯಾಗಿ ಬಿಸಿಲು ಬಿದ್ದರೆ ಒಂದು ತಿಂಗಳ ನಂತರ ಗಿಡಗಳು ಚಿಗುರಲು ಆರಂಭಿಸಿ ಮೊಗ್ಗು ಉಂಟಾಗಿ ಹೂ ಬಿಡಲು ಪ್ರಾರಂಭಿಸುತ್ತವೆ. ಆಗ ಪಿತೃಪಕ್ಷ ಪ್ರಾರಂಭವಾಗುತ್ತದೆ. ನವರಾತ್ರಿ ಪ್ರಾರಂಭವಾಗುವ ಹಂತದಲ್ಲಿ ಇಳುವರಿ ಕಡಿಮೆಯಾಗಿ ಮಾರುಕಟ್ಟೆ ಧಾರಣೆ ಮತ್ತೆ ಏರುತ್ತದೆ.

ಈ ವರ್ಷದ ಮಳೆಗೆ ಸೊರಗಿದ ಕೀಟ ಬಾಧಿತ ಗಿಡಗಳು
ಉಡುಪಿ ಮಲ್ಲಿಗೆ

ಮಲ್ಲಿಗೆ ಕೃಷಿಕರಿಗೂ ಪರಿಹಾರ ನೀಡಬೇಕು!

ಮಲ್ಲಿಗೆ ಕೃಷಿಯೂ ಒಂದು ಆರ್ಥಿಕ ಬೆಳೆಯಾಗಿದ್ದು ಅವಿಭಜಿತ ದಕ್ಷಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಕುಟುಂಬಗಳು ಜೀವನಕ್ಕಾಗಿ ಮಲ್ಲಿಗೆ ಕೃಷಿಯನ್ನೇ ಅವಲಂಭಿಸಿವೆ. ಹವಾಮಾನ ವೈಪರಿತ್ಯ ಪ್ರಕೃತಿ ವಿಕೋಪಕ್ಕೆ ಬೆಳೆ ನಾಶವಾದಲ್ಲಿ ಸರ್ಕಾರದಿಂದ ಸ್ಪಲ್ಪ ಮಟ್ಟಿನ ಪರಿಹಾರ ನೀಡಿ ಪ್ರೋತ್ಸಾಹಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಮಲ್ಲಿಗೆ ಕೃಷಿಕರ ಸಂಘಟನೆಯನ್ನು ಬಲಗೊಳಿಸುವ ಅಗತ್ಯವಿದೆ. ಮಲ್ಲಿಗೆ ಕೃಷಿಕರಿಗೂ ಸರ್ಕಾರ ಗ್ಯಾರಂಟಿ ಕೊಡಬೇಕು ಎಂದು ಪಾಲಮೆಯ ಮಲ್ಲಿಗೆ ಕೃಷಿಕ ನಿತ್ಯಾನಂದ ನಾಯಕ್ ಹೇಳಿದರು.

ಗಿಡಗಳಿಗೆ ಶಿಲೀಂದ್ರ ನಾಶಕ ಸಿಂಪಡಿಸಿ!

ಮಲ್ಲಿಗೆ ಕೃಷಿಕರು ಯಾವುದೇ ಕಾರಣಕ್ಕೂ ಮಲ್ಲಿಗೆ ಗಿಡದ ಸುತ್ತಮುತ್ತ ಇರುವ ಹುಲ್ಲನ್ನು ಕೀಳಬಾರದು. ಮಣ್ಣನ್ನು ಅಗೆಯಬಾರದು. ಹವಾಮಾನ ವೈಪರಿತ್ಯ ವಿಪರೀತ ಮಳೆಯಿಂದ ಎಲೆಗಳು ಉದುರಿದ ಗಿಡಗಳಿಗೆ ಒಂದೆರಡು ಗಂಟೆ ಬಿಸಿಲು ಬಿದ್ದ ಸಂದರ್ಭದಲ್ಲಿ ಶಿಲೀಂದ್ರ ನಾಶಕ ಸಿಂಪಡಿಸಬೇಕು. ಅತ್ಯಂತ ಉತ್ತಮ ಶಿಲೀಂದ್ರ ನಾಶಕ ಅಂದರೆ ಬೋರ್ಡೋ ದ್ರಾವಣ. ಒಂದೆರಡು ದಿನ ಮಳೆ ಬಾರದಿದ್ದಲ್ಲಿ ಪ್ರತೀ ಗಿಡಗಳಿಗೂ ಅತ್ಯಂತ ದ್ರವರೂಪದಲ್ಲಿ ಗೊಬ್ಬರ ನೀರು ಅಥವಾ ನೆಲಗಡಲೆ ಹಿಂಡಿ ನೀರು ಅಲ್ಪ ಪ್ರಮಾಣದಲ್ಲಿ ಕೊಡಬೇಕು. ಇದರಿಂದ ಗಿಡಗಳು ಚೇತರಿಸಿಕೊಳ್ಳುತ್ತವೆ ಎನ್ನುತ್ತಾರೆ ಮಲ್ಲಿಗೆ ಕೃಷಿ ಸಂಪನ್ಮೂಲ ವ್ಯಕ್ತಿ ಬಂಟಕಲ್ಲು ರಾಮಕೃಷ್ಣ ಶರ್ಮಾ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.