ADVERTISEMENT

ಶಿರ್ವ: ಕುಂತಳ‌ನಗರ ಉದ್ಯೋಗ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 8:17 IST
Last Updated 17 ನವೆಂಬರ್ 2024, 8:17 IST
ಮಣಿಪುರ ಕುಂತಳನಗರದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ.*
ಮಣಿಪುರ ಕುಂತಳನಗರದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ.*   

ಶಿರ್ವ: ಮಣಿಪುರ ಕುಂತಳ ನಗರದಲ್ಲಿರುವ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟಬಲ್ ಟ್ರಸ್ಟ್‌ನ ಸ್ಕಿಲ್ ಡೆವಲಪ್‌ಮೆಂಟ್‌ ಸೆಂಟರ್ ವತಿಯಿಂದ ಬೆಂಗಳೂರಿನ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ 2 ದಿನಗಳ ಉದ್ಯೋಗ ಮೇಳವನ್ನು ಶನಿವಾರ ಉದ್ಘಾಟಿಸಲಾಯಿತು.

ಎಂಆರ್‌ಜಿ ಗ್ರೂಪ್ ಮುಖ್ಯಸ್ಥ ಬಂಜಾರಾ ಡಾ.ಕೆ. ಪ್ರಕಾಶ್ ಶೆಟ್ಟಿ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ಉದ್ಯೋಗಾರ್ಥಿಗಳು ಉದ್ಯೋಗ ಸಿಕ್ಕಿಲ್ಲ ಎಂದು ಬೇಸರಿಸದೆ ಪ್ರಯತ್ನ ಮುಂದುವರಿಸಬೇಕು. ಮುಂದೆ ಗೋಲ್ಡ್‌ಫ್ಲಿಂಚ್‌ ಸಿಟಿಯಲ್ಲಿ 50 ಸಾವಿರ ಉದ್ಯೋಗಾವಕಾಶ ಇದೆ. 3ನೇ ಬಾರಿಯ ಉದ್ಯೋಗ ಮೇಳದಲ್ಲಿ ಹೆಚ್ಚು ಕಂಪೆನಿಗಳು, ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು ಉದ್ಯೋಗ ಮೇಳ ಆಯೋಜಿಸಿದ್ದಕ್ಕೆ ಸಾರ್ಥಕವಾಗಿದೆ ಎಂದರು.

ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಮಾತನಾಡಿ, ಖಾಸಗಿ ಸಂಸ್ಥೆಗಳು ಉದ್ಯೋಗ ಮೇಳ ಆಯೋಜನೆ ಮಾಡಿ, ನಿರುದ್ಯೋಗಕ್ಕೆ ಸವಾಲು ಒಡ್ಡಿರುವುದು ಅತ್ಯಂತ ಸಂತಸದ ಸಂಗತಿ. ಇನ್ನೂ ಹತ್ತು ಹಲವು ಸಂಸ್ಥೆಗಳು ಉದ್ಯೋಗ ಮೇಳ ಆಯೋಜಿಸಬೇಕು ಎಂದರು.

ADVERTISEMENT

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸರ್ಕಾರಿ ಉದ್ಯೋಗ ಒಂದು ಪ್ರತಿಷತ ಮಾತ್ರ ಲಭ್ಯವಿದೆ. ಉಳಿದ ಶೇ 99 ಉದ್ಯೋಗವನ್ನು ಖಾಸಗಿ ಸಂಸ್ಥೆಗಳೇ ನೀಡಬೇಕಿದೆ. ಸರ್ಕಾರಿ ಉದ್ಯೋಗಕ್ಕೆ ಆಸೆ ಪಡದೆ ಸಿಕ್ಕ ಉದ್ಯೋಗದಲ್ಲಿ ಸಂತಸ ಪಡಬೇಕು ಎಂದರು.

ಗ್ರಾಮೀಣ ಬಂಟರ ಸಂಘದ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಎ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಡಾ.ಎಚ್.ಬಿ.ಶೆಟ್ಟಿ, ಮುಖಂಡರಾದ ಮಟ್ಟಾರು ರತ್ನಾಕರ್ ಹೆಗ್ಡೆ, ಮಿಥುನ್ ರೈ, ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್, ಉದ್ಯಮಿಗಳಾದ ಮನೋಹರ್ ಎಸ್. ಶೆಟ್ಟಿ, ರಾಘು ಪೂಜಾರಿ ಕಲ್ಮಂಜೆ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಶರತ್ ಆಳ್ವ ಸುಬ್ರಹ್ಮಣ್ಯ, ಚಾರಿಟಬಲ್ ಟ್ರಸ್ಟ್‌ನ ಹೇಮಂತ್ ಶೆಟ್ಟಿ, ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಟ್ರಸ್ಟಿ, ಪ್ರೋಗ್ರಾಂ ಕೊ ಆರ್ಡಿನೇಟರ್ ಪದ್ಮನಾಭ ಹೆಗ್ಡೆ, ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನ ಪ್ರೋಗ್ರಾಂ ಡೈರೆಕ್ಟರ್ ಪ್ರೊ. ದಿವ್ಯಾರಾಣಿ ಪ್ರದೀಪ್, ಇಂಟರ್ವ್ಯೂ ಸಮಿತಿ ಚೇರ್ಮನ್ ಗುರುಪ್ರಶಾಂತ್ ಭಟ್ ಕೆ. ಇದ್ದರು. ಪ್ರೋಗ್ರಾಂ ಕೊ ಆರ್ಡಿನೇಟರ್ ವಿಜಿತ್ ಶೆಟ್ಟಿ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.