ADVERTISEMENT

ಮೇ 4ರಂದು ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲ

ತುಳುನಾಡಿನ ವಿಶಿಷ್ಟ ಜಾನಪದ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ಮೇ 2024, 5:32 IST
Last Updated 1 ಮೇ 2024, 5:32 IST
ಪಿಲಿಕೋಲ
ಪಿಲಿಕೋಲ   

ಶಿರ್ವ: ತುಳುನಾಡಿನ 7 ವಿಶಿಷ್ಟ ಜಾನಪದ ಆಚರಣೆಗಳಲ್ಲಿ ಒಂದಾಗಿರುವ ಹಾಗೂ ಭೂತಾರಾಧನೆಯಲ್ಲಿ ಗಮನೀಯ ಎನಿಸಿರುವ ಪಿಲಿಕೋಲ (ಹುಲಿಕೋಲ) ಮೇ 4ರಂದು ನಡೆಯಲಿದ್ದು ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ.

ಅಂದು ಮಧ್ಯಾಹ್ನ 1 ಗಂಟೆಗೆ ಕಾಪುವಿನ ಹಳೆ ಮಾರಿಯಮ್ಮ ದೇವಸ್ಥಾನದ ಸಮೀಪದ ಬ್ರಹ್ಮ ಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ಸಂಪ್ರದಾಯ ಬದ್ಧವಾಗಿ ಪಿಲಿಕೋಲ ನಡೆಯಲಿದೆ. ಅನಾದಿ ಕಾಲದಿಂದಲೂ ವಾಡಿಕೆಯಂತೆ ಎರಡು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ಕಾಪು ಪಿಲಿಕೋಲ ನಡೆಯುತ್ತಿದ್ದು ಈ ವಿಶಿಷ್ಟ ಆಚರಣೆ ವೀಕ್ಷಣೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ನೆಲೆಸಿರುವ ಸಾವಿರಾರು ತುಳುವರು ಬರುತ್ತಾರೆ. ಅಪಾರ ಜನಾಕರ್ಷಣೆಗೆ ಒಳಗಾಗಿರುವ ವೈವಿಧ್ಯಮಯ ಪಿಲಿಕೋಲ ಈ ಭಾಗದಲ್ಲಿ ಅತ್ಯಂತ ಪ್ರಸಿದ್ಧ.

ಪರಶುರಾಮ ಸೃಷ್ಟಿಯ ತುಳುನಾಡು ದೈವಾರಾಧನೆಯ ನೆಲವಾಗಿದ್ದು ಇಲ್ಲಿ ದೇವರಿಗಿಂತ ದೈವಗಳ ಆರಾಧನೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಪ್ರಕೃತಿ ಆರಾಧಕರಾಗಿರುವ ತುಳುವರು ಪ್ರಕೃತಿಯ ಶಕ್ತಿಗಳನ್ನೇ ದೈವಗಳಾಗಿ ನಂಬಿ ಆರಾಧಿಸುತ್ತಾ ಬಂದಿದ್ದು ಅಂತಹ ಆರಾಧನೆಗಳಲ್ಲಿ ಪಿಲಿಕೋಲವೂ ಒಂದಾಗಿದೆ.

ADVERTISEMENT

ಕಾರಣಿಕ ಹಾಗೂ ದೈವಿಕ ಹಿನ್ನೆಲೆ ಹೊಂದಿರುವ ಪಿಲಿಭೂತ ಕೋಲದಲ್ಲಿ ಹುಲಿ ಮುಟ್ಟಿದರೆ ಮರಣ ಭೀತಿಯ ನಂಬಿಕೆ ಇರುವುದರಿಂದ ಪಿಲಿಕೋಲವನ್ನು ಸಾಕಷ್ಟು ದೂರದಲ್ಲಿ ನಿಂತು ಜನರು ವೀಕ್ಷಿಸುತ್ತಾರೆ. ಇತರ ದೈವಗಳ ಕೋಲಗಳಂತೆ ಹತ್ತಿರದಿಂದ ಹುಲಿಕೋಲವನ್ನು ವೀಕ್ಷಿಸಲಾಗುವುದಿಲ್ಲ. ಪಿಲಿಕೋಲದ ದೈವಾರ್ಷಿಕ ನಡಾವಳಿಯು ಒಂದು ರೀತಿಯಲ್ಲಿ ಯುವಜನಾಂಗಕ್ಕೆ ಪುಳಕ ಹುಟ್ಟಿಸುವುದು ಮಾತ್ರವಲ್ಲದೆ, ಅಚ್ಚುಮೆಚ್ಚಿನ ನೇಮೋತ್ಸವವೂ ಆಗಿದೆ.

ಕಾಪು ಬ್ರಹ್ಮ ಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ಈ ಅವಧಿಯಲ್ಲಿ ಪಿಲಿಕೋಲ ಮಾತ್ರವಲ್ಲದೆ ಮುಗ್ಗೇರ್ಕಳ, ತನ್ನಿಮಾನಿಗ, ಬಬ್ಬರ್ಯ, ಗುಳಿಗ ಹಾಗೂ ಪರಿವಾರ ದೈವಗಳ ನೇಮೋತ್ಸವವೂ ನಡೆಯುತ್ತದೆ. ಆದರೆ, ಕೊನೆಯಲ್ಲಿ ನಡೆಯುವ ಪಿಲಿಕೋಲವನ್ನು ನೋಡಲು ಜನಸಾಗರವೇ ಹರಿದು ಬರುವುದು ವಿಶೇಷ.

ಕಾರ್ಕಳದ ಭೈರವಸೂಡ ಅರಸನಿಂದ ಪ್ರಾರಂಭಗೊಂಡು ಕಾಪುವಿನ ಮರ್ದ ಹೆಗ್ಗಡೆ ಎಂಬ ಅರಸನಿಂದ ಮುಂದುವರಿಯಲ್ಪಟ್ಟಿರುವ ಐತಿಹಾಸಿಕ ಪಿಲಿಕೋಲ ಇಂದಿಗೂ ವಿಜೃಂಭಣೆಯಿಂದ ಕಾಪು ತಾಲ್ಲೂಕಿನ ಪಡುಗ್ರಾಮದಲ್ಲಿ ನಡೆಯುತ್ತದೆ. ಹಗಲು ಹೊತ್ತಿನಲ್ಲಿ ನಡೆಯುವ ಪಿಲಿಕೋಲ ವಿಶೇಷ ಜನಾಕರ್ಷಣೆ ಪಡೆದಿದೆ.

ದೈವಸ್ಥಾನದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಹುಲಿಚಂಡಿ ನೇಮೋತ್ಸವ ನಡೆಯಲಿದ್ದು ಪೂರ್ವಭಾವಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗುವುದು. ಹಗಲು ಹೊತ್ತಿನಲ್ಲಿ ದೈವಸ್ಥಾನದ ಮುಂಭಾಗದಲ್ಲಿ ತೆಂಗಿನ ಗರಿಗಳಿಂದ ತಯಾರಿಸಲಾದ ಒಳಿಗುಂಡದೊಳಗೆ ಹುಲಿವೇಷದ ಬಣ್ಣಗಾರಿಕೆ ನಡೆಯುತ್ತದೆ.

ವೇಷ ಹಾಕುವ ಸಂದರ್ಭದಲ್ಲಿ ಒಳಿಗುಂಡದೊಳಗೆ ದೈವೀಶಕ್ತಿಯ ಆಕರ್ಷಣೆಯೊಂದಿಗೆ ಹುಲಿಯನ್ನು ಆವಾಹನೆ ಮಾಡಿಕೊಂಡಂತೆ ಭಾಸವಾಗುತ್ತದೆ. ಈ ವೇಳೆ ಒಳಿಗುಂಡದೊಳಗೆ ಹಾಗೂ ಸುತ್ತಮುತ್ತ ಯಾರೂ ಪ್ರವೇಶ ಮಾಡುವಂತಿಲ್ಲ. ಹುಲಿವೇಷದ ಬಣ್ಣಗಾರಿಕೆಯೊಂದಿಗೆ ವಿಚಿತ್ರವಾಗಿ ಹುಲಿಯಂತೆ ಆರ್ಭಟಿಸುತ್ತ ಒಳಿಗುಂಡದಿಂದ ವೇಷಧಾರಿ ವೈಭವದಿಂದ ಹೊರಬರುವ ಮೂಲಕ ಪಿಲಿಕೋಲಕ್ಕೆ ಚಾಲನೆ ದೊರೆಯುತ್ತದೆ.

ಹುಲಿ ಬೇಟೆಗೆ ಹೊರಡುವ ಪರಿಯಲ್ಲಿ ವೇಷಧಾರಿ ಊರು ಸಂಚಾರಕ್ಕೆ ಇಳಿಯುತ್ತಾರೆ. ಗ್ರಾಮ ಸಂಚಾರಕ್ಕೆ ಹೊರಟು ಹಳೆ ಮಾರಿಗುಡಿ ಮುಂಭಾಗದ ಬಾಳೆಯ ಗರುಡಗಂಬವನ್ನು ಮುರಿಯುವ ಹುಲಿ ವೇಷಧಾರಿ ಜೀವಂತ ಕೋಳಿಯ ರಕ್ತ ಹೀರುವ ಸನ್ನಿವೇಶ ಮೈ ಜುಮ್ಮೆನಿಸುತ್ತದೆ. ಗ್ರಾಮ ಸಂಚಾರದ ಪ್ರಕ್ರಿಯೆಗೆ ಮತ್ತಷ್ಟು ಮೆರುಗು ಬರುತ್ತದೆ. ಈ ಸಮಯದಲ್ಲಿ ಹುಲಿಯ ಅರ್ಭಟ, ಹಾರಾಟವನ್ನು ನೋಡುವುದೇ ವಿಭಿನ್ನ ಅನುಭವ.

ಹುಲಿ ವೇಷಧಾರಿಯನ್ನು ಹಗ್ಗಹಾಕಿ ನಿಯಂತ್ರಿಸಿದರೂ ಜನನಿಬಿಡ ಪ್ರದೇಶಕ್ಕೆ ಚಂಗನೆ ಹಾರುವ, ಅಟ್ಟಿಸಿಕೊಂಡು ಹೋಗುವಾಗ ಸಾರ್ವಜನಿಕರು ಚೆಲ್ಲಾಪಿಲ್ಲಿಯಾಗಿ ಓಡುವ ದೃಶ್ಯ ಮೈನವಿರೇಳುತ್ತದೆ. ಸಂಜೆ ವೇಳೆಗೆ ಹುಲಿ ದೈವಸ್ಥಾನಕ್ಕೆ ವಾಪಸ್ಸಾಗುವ ಮೂಲಕ ಪಿಲಿಕೋಲಕ್ಕೆ ತೆರಬೀಳುತ್ತದೆ.

ಪಿಲಿಕೋಲ

ಕಾಪು ಪಿಲಿಭೂತದ ಪೌರಾಣಿಕ ಹಿನ್ನೆಲೆ

ಕಾಪು ಸೀಮೆ ಆಳುತ್ತಿದ್ದ ಭೈರರಸು ಅರಮನೆಯ ಪಂಜರದಲ್ಲಿ ಹುಲಿ ಸಾಕುತ್ತಿದ್ದರು ಎಂಬ ಪ್ರತೀತಿ ಇದೆ. ಕಾಲಕ್ರಮೇಣ ಹುಲಿ ಸಾಕಲು ಕಷ್ಟವಾದಾಗ ಸೀಮೆ ಪೊರೆಯುವ ಮಾರಿಯಮ್ಮನ ಅನುಮತಿ ಕೇಳಿ ಹುಲಿಯನ್ನು ಕಾಡಿಗೆ ಬಿಡುವ ಆಲೋಚನೆ ಮಾಡಿದರು. ನಂತರ ರಾತ್ರಿ ರಾಜನ ಕನಸಲ್ಲಿ ಬಂದ ಮಾರಿಯಮ್ಮ ಹುಲಿ ದೈವಾಂಶ ಸಂಭೂತವಾಗಿದ್ದು ದೇವಸ್ಥಾನದ ಬಲಭಾಗದಲ್ಲಿರುವ ಸ್ಥಳದಲ್ಲಿ ಹುಲಿಗಳಿಗೊಂದು ಆಲಯ ಕಟ್ಟಿಸಿ ಆರಾಧಿಸಲು ಸೂಚಿಸುತ್ತಾಳೆ. ಅದರಂತೆ ಪಿಲಿಭೂತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂಬುದು ಪೌರಾಣಿಕ ಹಿನ್ನಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.