ಶಿರ್ವ: ಇಲ್ಲಿಂದ ಕಟಪಾಡಿ, ಉಡುಪಿಗೆ ಸಾಗುವ ಪ್ರಮುಖ ಹೆದ್ದಾರಿ ಪಂಜಿಮಾರು ರಸ್ತೆಯ ಇಕ್ಕೆಲಗಳಲ್ಲಿ ಮೋರಿ ನಿರ್ಮಾಣ ಮಾಡಿ, ರಸ್ತೆಗೆ ಮಣ್ಣು ಹಾಕಿ ಸಮತಟ್ಟು ಮಾಡುವ ಕಾಮಗಾರಿ ಎಂಟು ತಿಂಗಳಿಂದ ನಡೆಯುತ್ತಿದ್ದು ಈ ಮೂಲಕ ಸಾಗುವವರು ತೀರಾ ತೊಂದರೆಗೆ ಒಳಗಾಗಿದ್ದಾರೆ.
ಹೆದ್ದಾರಿ ಅಗೆದು ಮೋರಿ ಹಾಕಿ ಹೊಸ ರಸ್ತೆ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದೆ ಮಳೆ ಆರಂಭಗೊಂಡ ನಂತರ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿದ್ದು 200ಮೀ ಉದ್ದದಲ್ಲಿ ಹೊಂಡಗಳೇ ಕಾಣಿಸುತ್ತಿವೆ. ಮಣ್ಣಿನ ರಸ್ತೆ ಮೇಲೆ ಹಾಕಿರುವ ಜಲ್ಲಿಯ ಪುಡಿ ಮಳೆನೀರಿನಲ್ಲಿ ಕೊಚ್ಚಿ ಹೋಗಿ ಚರಂಡಿ ಸೇರಿದೆ. ಹೊಂಡಗಳನ್ನು ತಪ್ಪಿಸಿಕೊಂಡು ಹೋಗಲು ವಾಹನ ಸವಾರರು ಸರ್ಕಸ್ ಮಾಡಬೇಕಾಗಿದೆ.
‘ಹಲವು ಬಾರಿ ಅಧಿಕಾರಿಗಳಿಗೆ ಮೌಖಿಕ ದೂರು ನೀಡಲಾಗಿದೆ. ಆದರೆ ಪ್ರಯೋಜನವಾಗಲಿಲ್ಲ. ಮಳೆಗಾಲಕ್ಕೆ ಮೊದಲು ಗುತ್ತಿಗೆದಾರರು ಕಾಮಗಾರಿಗೆ ವೇಗ ನೀಡದ್ದರಿಂದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸ್ಥಳೀಯರು ದೂರಿದ್ದಾರೆ.
‘ಇಲ್ಲಿ ಕೆಲವೊಮ್ಮೆ ವಾಹನಗಳು ಕೆಸರಿನಲ್ಲಿ ಹೂತುಹೋಗಿ ಸಮಸ್ಯೆ ಉಂಟಾಗಿದೆ. ರಾತ್ರಿ ವೇಳೆಯಂತೂ ಮಳೆ ಸುರಿಯುತ್ತಿದ್ದರೆ ಹೊಂಡ ಎಲ್ಲಿದೆ, ನೀರು ಎಲ್ಲಿ ನಿಂತಿದೆ ಎಂದು ತಿಳಿಯದೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಈಚೆಗೆ ರಸ್ತೆಗೆ ಜಲ್ಲಿ ಹಾಕಿ ಸಮತಟ್ಟು ಮಾಡಿದರೂ ನಿರಂತರ ಮಳೆಗೆ ಮತ್ತೆ ಸಮಸ್ಯೆ ಆಗಿದೆ’ ಎಂದು ಅವರು ದೂರುತ್ತಾರೆ.
ಹೊಂಡವನ್ನು ಮುಚ್ಚಲು ಆಗಾಗ ಜಲ್ಲಿಕಲ್ಲು ಹಾಕಿ ಸಮತಟ್ಟು ಮಾಡಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಮತ್ತಷ್ಟು ಸಮಸ್ಯೆ ಆಗುತ್ತಿದೆ. ಈ ದಾರಿಯಲ್ಲಿ ಹೊರ ಜಿಲ್ಲೆ ಹಾಗೂ ಹೊರರಾಜ್ಯದ ಪ್ರವಾಸಿಗಳ ವಾಹನಗಳು ಹೆಚ್ಚು ಓಡಾಡುತ್ತವೆ. ಅವರಿಗೆ ಹೆಚ್ಚು ಪ್ರಯಾಸ ಆಗುತ್ತದೆ. ವೇಗವಾಗಿ ಬಂದು ದಿಢೀರ್ ಬ್ರೇಕ್ ಹಾಕುವುದರಿಂದ ಅಪಘಾತಗಳು ಸಂಭವಿಸುತ್ತವೆ. ಕಾಮಗಾರಿ ನಡೆಯುವ ಬಗ್ಗೆ ಹಾಗೂ ರಸ್ತೆ ಹದಗೆಟ್ಟಿರುವ ಬಗ್ಗೆ ಫಲಕಗಳನ್ನು ಅಳವಡಿಸಿದರೆ ಸ್ವಲ್ಪ ಎಚ್ಚರ ವಹಿಸಲು ಸಾಧ್ಯ ಎಂದು ಸವಾರರು ಹೇಳುತ್ತಾರೆ.
ಎಂಟು ತಿಂಗಳು ಕಳೆದರೂ ಗುತ್ತಿಗೆದಾರರು ಪಂಜಿಮಾರು ಸಮೀಪ ರಸ್ತೆಯ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂಬುದು ಬೇಸರದ ವಿಷಯ. ಮಳೆಗಾಲದಲ್ಲಿ ಇಲ್ಲಿ ಸಮಸ್ಯೆ ಆಗಬಹುದು ಎಂದು ತಿಳಿದಿದ್ದರೂ ಕಾಳಜಿ ವಹಿಸಲಿಲ್ಲ. ಹೀಗಾಗಿ ಈ ರಸ್ತೆ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.ರಮೇಶ್ ಪೂಜಾರಿ ಗ್ರಾಮಸ್ಥ
ಮಳೆ ಆರಂಭಗೊಂಡ ನಂತರ ಈ ರಸ್ತೆಯಲ್ಲಿ ಸಂಚಾರಿಸಲು ಆಗುತ್ತಿಲ್ಲ. ಅಧಿಕಾರಿಗಳ ಬಳಿ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಮಳೆಗಾಲ ಮುಗಿಯುವವರೆಗೂ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ.ಕೆ.ಆರ್. ಪಾಟ್ಕರ್ ಶಿರ್ವ ಗ್ರಾಮ ಪಂಚಾಯಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.