ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣ ಸಮಾಜಕ್ಕೆ ಮಂತ್ರಿ ಸ್ಥಾನದ ಅಗತ್ಯವಿದೆ. ಆದರೆ ಇದಕ್ಕೆ ಧ್ವನಿ ಕೊಡುವವರು ಯಾರು ಇಲ್ಲ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಅವಶ್ಯಕವಾಗಿದೆ. ಶಾಸಕ ರಘುಪತಿ ಭಟ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದರೆ, ತುಳು ಶಿವಳ್ಳಿ ಬ್ರಾಹ್ಮಣ ವಿಶ್ವ ಸಮ್ಮೇಳನ ಸಾರ್ಥಕ ಆಗುತ್ತದೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ನಡೆದ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿವಳ್ಳಿ ಸಮಾಜದವರು ತಮ್ಮ ಮಕ್ಕಳನ್ನು ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಪರೀಕ್ಷೆಗಳಿಗೆ ಅಣಿಗೊಳಿಸಬೇಕು. ಡಾಕ್ಟರ್, ಎಂಜಿನಿಯರಿಂಗ್ ಕಲಿಸುವಂತೆ ಒಂದು ಮಗುವನ್ನು ಐಪಿಎಸ್, ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕು. ಇದು ಸಮಾಜದ ಬೆಳವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ ಎಂದರು.
ಸಮ್ಮೇಳನಕ್ಕೆ ಆರಂಭದಲ್ಲಿ ಸಮಾಜದ ರಾಜಕೀಯ ನಾಯಕರು ಗೈರಾಗಿದ್ದು ನನಗೆ ಸ್ವಲ್ಪ ಬೇಸರ ಆಗಿತ್ತು. ಆದರೆ ಸಮಾರೋಪ ಸಮಾರಂಭಕ್ಕೆ ಶಾಸಕ ರಘಪತಿ ಭಟ್ ಬಂದಿರುವುದು ತುಂಬಾ ಖುಷಿ ತಂದಿದೆ. ಉಡುಪಿ ಬೆಳವಣಿಗೆಯಲ್ಲಿ ವಿ.ಎಸ್. ಆಚಾರ್ಯ ಹಾಗೂ ರಘುಪತಿ ಭಟ್ ಅವರ ಪಾತ್ರ ದೊಡ್ಡದಿದೆ ಎಂದರು.
ಉಡುಪಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಬ್ರಾಹ್ಮಣರು ಬುದ್ಧಿವಂತಿಕೆಯಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಆದರೆ ಐಎಎಸ್, ಕೆಎಎಸ್‌ನಂತಹ ನಾಗರಿಕ ಸೇವಾ ಹುದ್ದೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅದರಿಂದ ಏನು ಪ್ರಯೋಜವಿಲ್ಲ ಎಂಬ ತಪ್ಪು ಕಲ್ಪನೆ ನಮ್ಮ ಸಮಾಜದ ಜನರಲ್ಲಿದೆ. ಆಡಳಿತಾತ್ಮಕ ಹಾಗೂ ರಾಜಕೀಯವಾಗಿ ನಾವು ಚಿಂತನೆ ಮಾಡುತ್ತಿಲ್ಲ. ಇದನ್ನು ನಾವು ದೂರಾಗಿಸಬೇಕು ಎಂದರು.
ಪ್ರಸ್ತುತ ಐಎಎಸ್, ಕೆಎಎಸ್ ಹುದ್ದೆಗಳಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಎಡಪಂಕ್ತಿಯ ವಿಚಾರಧಾರೆಗಳುಳ್ಳ ವ್ಯಕ್ತಿಗಳೇ ಬಹುಸಂಖ್ಯೆಯಲ್ಲಿ ಇದ್ದಾರೆ. ಇದರಿಂದ ನಮಗೆ ಯಾವುದೇ ಪ್ರಯೋಜ ಆಗಲ್ಲ. ನಮ್ಮ ಸಮಾಜದ ಜನರು ರಾಜಕೀಯ ಹಾಗೂ ನಾಗರಿಕ ಸೇವಾ ಹುದ್ದೆಯಲ್ಲಿದ್ದರೆ, ಸಮಾಜದ ಬೆಳವಣಿಗೆಗೆ ಹೆಚ್ಚು ಅನುಕೂಲ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಣ್ಣ ಸಣ್ಣ ಅನ್ಯ ಸಮುದಾಯದವರು ತಳಮಟ್ಟದಿಂದ ಸಂಘಟನೆ ಮಾಡುತ್ತಿದ್ದಾರೆ. ಗ್ರಾಮಕ್ಕೊಂದು ಸಮುದಾಯವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದರಂತೆ ತುಳು ಶಿವಳ್ಳಿ ಬ್ರಾಹ್ಮಣ ಸಮಾಜ ಇನ್ನಷ್ಟು ಬಲವರ್ಧನೆ ಆಗಬೇಕು. ಸಂಘಟನೆ ಇದ್ದಲ್ಲಿ ಮಾತ್ರ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಲೆ ಬಾಗುತ್ತಾರೆ. ಸಮಾಜದ ಜಾಗೃತಿಗೆ ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ. ಇದು ಅನ್ಯ ಸಮಾಜದ ವಿರುದ್ಧ ಅಲ್ಲ ಎಂದು ಹೇಳಿದರು.
ಪಲಿಮಾರು ಕಿರಿಯ ವಿದ್ಯಾರಾಜೇಶ್ವರ ಸ್ವಾಮೀಜಿ, ಡಾ. ಕೆ.ಪಿ. ಪುತ್ತೂರಾಯ, ಎಂ.ಬಿ. ಪುರಾಣಿಕ್, ಮಂಜುನಾಥ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.