ಉಡುಪಿ: ಕಾಶ್ಮೀರದ ತಂಪಿನ ವಾತಾವರಣದಲ್ಲಿ ಬೆಳೆಯುವ ಕೇಸರಿ ಹೂವನ್ನು ಕರಾವಳಿಯ ಉಡುಪಿಯಲ್ಲಿ ಅರಳಿಸುವ ಮೂಲಕ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಬ್ಬರು ಗಮನ ಸೆಳೆದಿದ್ದಾರೆ.
ಐ.ಟಿ. ಕ್ಷೇತ್ರದಲ್ಲಿ ಕೆಲಸ ಮಾಡುವ ಅನಂತಜಿತ್ ತಂತ್ರಿ ಮತ್ತು ಗೆಳೆಯ ಅಕ್ಷತ್ ಬಿ.ಕೆ. ಈ ಹೊಸ ಕೃಷಿ ಪ್ರಯೋಗದಲ್ಲಿ ಯಶ ಕಂಡವರು. ಉಡುಪಿ ನಗರ ವ್ಯಾಪ್ತಿಯ ಬೈಲೂರಿನ ನಂದಗೋಕುಲ ಎಂಬಲ್ಲಿರುವ ಅನಂತಜಿತ್ ಅವರ ಮನೆಯ ತಾರಸಿಯ ಕೋಣೆಯಲ್ಲಿ ಈ ಕೃಷಿ ಚಟುವಟಿಕೆ ಗರಿಗೆದರಿದೆ. ಕೋಣೆಯೊಳಗೆ ಕೃತಕ ವಾತಾವರಣ ಸೃಷ್ಟಿಸಿ ಕೇಸರಿ ಬೆಳೆದಿದ್ದಾರೆ.
‘ಕೋಣೆಯ ಉಷ್ಣಾಂಶ ಕಡಿಮೆ ಮಾಡಲು ಚಿಲ್ಲರ್ ಯಂತ್ರ ಬಳಸಿದ್ದೇವೆ. ಜೊತೆಗೆ ಹವಾನಿಯಂತ್ರಿತ ವ್ಯವಸ್ಥೆಯೂ ಇದೆ. ಬೆಳ್ಳುಳ್ಳಿಯನ್ನು ಹೋಲುವ ಕೇಸರಿ ಹೂವಿನ ಗಡ್ಡೆಯನ್ನು ಬಿತ್ತನೆ ಮಾಡಿ ರ‍್ಯಾಕ್‌ಗಳಲ್ಲಿ ಬೆಳೆಯಲಾಗುತ್ತದೆ. ಇದಕ್ಕೆ ಮಣ್ಣಿನ ಬದಲು ತೆಂಗಿನ ಸಿಪ್ಪೆಯ ನಾರಿನ ಹುಡಿಯನ್ನು ಉಪಯೋಗಿಸಿದ್ದೇವೆ’ ಎನ್ನುತ್ತಾರೆ ಅನಂತಜಿತ್ ತಂತ್ರಿ.
‘ಆರಂಭದಲ್ಲಿ ಮಣ್ಣಿನಲ್ಲಿ ಕೇಸರಿ ಬೆಳೆಯಲು ಪ್ರಯತ್ನಿಸಿದ್ದರೂ ಅದು ಸಫಲವಾಗಲಿಲ್ಲ. ಈಗ ಏರೋಪೋನಿಕ್ ವಿಧಾನದ ಮೂಲಕ ಯಶಸ್ವಿಯಾಗಿದ್ದೇವೆ. ಈ ಬೆಳೆಗೆ ನೀರನ್ನು ಬಳಕೆ ಮಾಡುವುದಿಲ್ಲ, ಬದಲಾಗಿ ನೀರನ್ನು ಮಂಜಾಗಿ ಪರಿವರ್ತಿಸುವ ಯಂತ್ರವನ್ನು ಬಳಸುತ್ತಿದ್ದೇವೆ’ ಎಂದು ಅವರು ವಿವರಿಸಿದರು.
‘ಮೂರು ವರ್ಷಗಳ ಹಿಂದೆ ಕೇಸರಿ ಬೆಳೆಯುವ ಪ್ರಯತ್ನ ಮಾಡಿದ್ದೆ. ಆದರೆ ಇಲ್ಲಿಯ ಮಣ್ಣು, ಹವಾಗುಣದ ಕಾರಣ ಆ ಯತ್ನ ಸಫಲವಾಗಲಿಲ್ಲ. ಬಳಿಕ ಬೆಳಗಾವಿಯ ವ್ಯಕ್ತಿಯೊಬ್ಬರ ಬಳಿ ನಾನು ಮತ್ತು ಅಕ್ಷತ್ ತರಬೇತಿ ಪಡೆದುಕೊಂಡೆವು. ಕೋಣೆಯೊಳಗಿನ ಉಷ್ಣಾಂಶ ನಿಯಂತ್ರಿಸುವ ಬಗ್ಗೆ ಅವರು ತರಬೇತಿ ನೀಡಿದರು. ಬಳಿಕ ಅದೇ ಮಾದರಿಯಲ್ಲಿ ಕೇಸರಿ ಬೆಳೆಸಿದೆವು. ಕಳೆದ ವರ್ಷ 50 ಕೆ.ಜಿ. ಯಷ್ಟು ಕೇಸರಿ ಗಡ್ಡೆಯನ್ನು ಬಿತ್ತನೆ ಮಾಡಿದ್ದೆವು. ಈ ವರ್ಷ 70 ಕೆ.ಜಿ.ಯಷ್ಟು ಬಿತ್ತನೆ ಮಾಡಿದ್ದೇವೆ’ ಎಂದು ಅನಂತಜಿತ್ ಕೃಷಿಯ ಮಾಹಿತಿ ಹಂಚಿಕೊಂಡರು.
ಒಂದು ಕೆ.ಜಿ. ಕೇಸರಿಯ ಬೆಲೆ ₹4 ಲಕ್ಷದಷ್ಟಿದೆ. ಅದಕ್ಕೆ ಬೇಡಿಕೆಯೂ ಅಧಿಕವಿದೆ. ಕೇಸರಿಯನ್ನು ತೆಗೆದ ಬಳಿಕ ಹೂವನ್ನೂ ಒಣಗಿಸಿಟ್ಟುಕೊಳ್ಳಬಹುದು. ಅದನ್ನು ಪಾನ್ ಬೀಡಾಗಳಿಗೆ ಹಾಕಲು ಬಳಸುತ್ತಾರೆ. ಹೂವಿನ ಮಕರಂದ ಕೂಡ ಸೌಂದರ್ಯವರ್ಧಕ ಉತ್ಪನ್ನಗಳಿಗೆ ಬಳಕೆಯಾಗುತ್ತದೆ ಎಂದು ಅವರು ವಿವರಿಸಿದರು.
‘ಕೇಸರಿಯು ವರ್ಷದಲ್ಲಿ ಮೂರು ತಿಂಗಳು ಮಾತ್ರ ಹೂವು ಬಿಡುತ್ತದೆ. ಒಂದು ಗ್ರಾಂಗೆ ₹400 ರಂತೆ ಮಾರಾಟ ಮಾಡಿದ್ದೇವೆ’ ಎಂದೂ ಹೇಳಿದರು.
ಜುಲೈ ತಿಂಗಳಲ್ಲಿ ಕೇಸರಿಯ ಬೀಜ ಹಾಕಿದ್ದೆವು. ಈಗ ಹೂವಾಗಲು ಶುರುವಾಗಿದೆ. ಈ ಬಾರಿಯ ಫಸಲು ನೋಡಿಕೊಂಡು ಬೆಳೆಯನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಿದ್ದೇವೆಅನಂತಜಿತ್ ತಂತ್ರಿ ಸಾಫ್ಟ್‌ವೇರ್ ಎಂಜಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.