ADVERTISEMENT

11 ವರ್ಷಗಳಿಗೊಮ್ಮೆ ಅಪ್ಪಳಿಸುವ ಪ್ರಬಲ ಸೌರ ಮಾರುತ

ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳಲಿದೆ ಸುಂದರ ಪ್ರಭೆ: ಡಾ.ಎ.ಪಿ.ಭಟ್‌

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 11:50 IST
Last Updated 13 ಜುಲೈ 2021, 11:50 IST
ಸೌರ ಮಾರುತ (ಸಾಂದರ್ಭಿಕ ಚಿತ್ರ)
ಸೌರ ಮಾರುತ (ಸಾಂದರ್ಭಿಕ ಚಿತ್ರ)   

ಉಡುಪಿ: 11 ವರ್ಷಗಳಿಗೊಮ್ಮೆ ಪ್ರಬಲವಾದ ಸೌರ ಮಾರುತಗಳು ಭೂಮಿಗೆ ಅಪ್ಪಳಿಸುತ್ತವೆ. ಶತಮಾನಗಳಿಂದಲೂ ಈ ಪ್ರಕ್ರಿಯೆ ನಡೆದುಕೊಂಡು ಬಂದಿದೆ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸ್ಥಾಪಕ ಸಂಯೋಜಕ ಡಾ.ಎ.ಪಿ.ಭಟ್ ತಿಳಿಸಿದರು.

ಸೂರ್ಯನ ಪ್ರಬಲ ಮಾರುತಗಳು ಶಕ್ತಿ ಪ್ರವಾಹದಂತೆ ಹರಿಯುವ ಪ್ರಕ್ರಿಯೆಯನ್ನು ಸೂರ್ಯನ ಮಾರುತಗಳು ಎನ್ನಲಾಗುತ್ತದೆ. 2020ರಿಂದ ಸೌರ ಮಾರುತದ ಆವರ್ತನೆ ಆರಂಭವಾಗಿದ್ದು, ಎಕ್ಸ್‌ 1 ಮಾರುತ ಅತಿ ಹೆಚ್ಚು ಶಕ್ತಿಯುತವಾಗಿದೆ ಎಂದು ವಿಜ್ಞಾನಿಗಳು ಅಂದಾಜಿಸಿರುವದಾಗಿ ತಿಳಿಸಿದ್ದಾರೆ.

ಸೌರ ಮಾರುತಗಳ ಶಕ್ತಿಯನ್ನು ಎ, ಬಿ, ಸಿ, ಎಂ ಹಾಗೂ ಎಕ್ಸ್ ಎಂದು ವಿಂಗಡಿಸಿ ಅಳೆಯಲಾಗುತ್ತಿದೆ. ಎ ಕಡಿಮೆ ಶಕ್ತಿಯ ಸೌರ ಮಾರುತವಾದರೆ, ಎಕ್ಸ್ ಅತಿ ಹೆಚ್ಚಿನ ಶಕ್ತಿ ಹೊಂದಿರುವ ಸೌರ ಮಾರುತ. 2011ರಲ್ಲಿ ಶಕ್ತಿಯುತ ಸೌರ ಮಾರುತ ಭೂಮಿಗೆ ಅಪ್ಪಳಿಸಿತ್ತು ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಹನ್ನೊಂದು ವರ್ಷಗಳ ಸೌರ ಮಾರುತದ ಆವರ್ತನೆಯಲ್ಲಿ ಅತಿ ಹೆಚ್ಚಿನ ಶಕ್ತಿ ಉತ್ಸರ್ಜನೆಯಾಗುವ ಮಾರುತ ಈಗ ಬೀಸಲಿದೆ. ಈ ಪ್ರಕ್ರಿಯೆ ಹೊಸತಲ್ಲ ಎಂದು ತಿಳಿಸಿರುವ ಡಾ.ಎ.ಪಿ.ಭಟ್‌, ಸೂರ್ಯನ ಮೇಲೆ ಕಾಣುವ ಕಲೆಗಳಿಂದ ಸೌರಮಾರುತದ ಶಕ್ತಿಯನ್ನು ಅರಿಯಬಹುದು. ಸೂರ್ಯನ ಕಲೆಗಳು ದೊಡ್ಡದಾಗಿದ್ದರೆ ಪ್ರಬಲ ಸೌರ ಮಾರುತ ಎಂದು ಅಂದಾಜಿಸಬಹುದಾಗಿದ್ದು, ಭೂಮಿಗೆ ಅಪ್ಪಳಿಸುವ ಸಾದ್ಯತೆಗಳು ಹೆಚ್ಚಿರುತ್ತವೆ. ಜುಲೈ 3ರಂದು ಇಂತಹ ವಿದ್ಯಮಾನವೊಂದು ವಿಜ್ಞಾನಿಗಳ ಗಮನಕ್ಕೆ ಬಂದಿದ್ದು, ಇದೊಂದು ಪ್ರಬಲ ಸೌರ ಮಾರುತ ಎಂದು ಅಂದಾಜಿಸಿರುವುದಾಗಿ ತಿಳಿಸಿದ್ದಾರೆ.

ಸೌರಮಾರುತಗಳ ಹೊಡೆತಗಳನ್ನು ಭೂಮಿ ಸಹಸ್ರಾರು ವರ್ಷಗಳಿಂದ ಸಹಿಸಿಕೊಂಡು ಬಂದಿದೆ. ಭೂಮಿಯ ಸುತ್ತಲೂ ಇರುವ ಭೂ ಅಯಾನು ಕವಚಗಳು (ವಾನ್ ಅಲೆನ್ ಬೆಲ್ಟ್) ಸೂರ್ಯ ಮಾರುತಗಳಿಗೆ ನೇರವಾಗಿ ಭೂಮಿಗೆ ನುಗ್ಗಲು ಅವಕಾಶ ನೀಡುವುದಿಲ್ಲ. ಭೂಮಿಯ ಸುತ್ತ 5 ಸಾವಿರ ಹಾಗೂ 15 ಸಾವಿರ ಕಿ.ಮೀ. ದೂರದಲ್ಲಿರುವ ಕಾಂತ ಕ್ಷೇತ್ರದಲ್ಲಿ ಭೂ ಅಯಾನು ಕವಚಗಳು ಸುತ್ತಿಕೊಂಡಿವೆ.

ಸಮಭಾಜಕ ವೃತ್ತದ ಸುತ್ತಲೂ ಉಬ್ಬಿದಂತೆ ಹಾಗೂ ಧ್ರುವ ಪ್ರದೇಶಗಳಲ್ಲಿ ತೆಳುವಾಗಿರುವ ಕಾರಣ ಸೌರ ಮಾರುತಗಳು ಭೂಮಿಯ ಧ್ರುವ ಪ್ರದೇಶಗಳಿಗೆ ‌ಅಪ್ಪಳಿಸುವ ಸಾಧ್ಯತೆಗಳು ಹೆಚ್ಚು. ಸೌರ ಮಾರುತಗಳಿಂದ ಆಕಾಶದಲ್ಲಿರುವ ಗಗನ ಯಾತ್ರಿಗಳಿಗೆ, ಕೃತಕ ಉಪಗ್ರಹಗಳಿಗೆ ತೊಂದರೆಯಾಗಬಹುದು. ಸೌರ ಮಾರುತಗಳ ವಿದ್ಯುತ್ ಕಾಂತೀಯ ಶಕ್ತಿಯುತ ಕಣಗಳು ಕೃತಕ ಉಪಗ್ರಹಗಳ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಪ್ರಭಾವ ಬೀರಬಹುದು ಎಂದು ತಿಳಿಸಿದ್ದಾರೆ.

ಧ್ರುವ ಪ್ರಭೆಯಸುಂದರ ದರ್ಶನ:

ಸೌರ ಮಾರುತಗಳ ಅಬ್ಬರದ ಕಾಲದಲ್ಲಿ ಉತ್ತರ ಹಾಗೂ ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಸುಂದರ ಪ್ರಭೆ ಕಾಣಿಸಿಕೊಳ್ಳಲಿದೆ. ಈ ಪ್ರದೇಶಗಳಲ್ಲಿ ಭೂಮಿಯ ವಾತಾವರಣದೊಳಗೆ ನುಸುಳುವ ಸೌರ ಮಾರುತ ಕಣಗಳು ವಾತಾವರಣದ ಕಣಗಳೊಂದಿಗೆ ಘರ್ಷಿಸಿದಾಗ ಬಣ್ಣ ಬಣ್ಣದ ಬೆಳಕು ಸೃಷ್ಟಿಯಾಗುತ್ತದೆ. ಉತ್ತರದ ಆಕಾಶದಲ್ಲಿ ಕೆಲ ನಿಮಿಷ ಮನೋಹರವಾಗಿ ಗೋಚರಿಸುತ್ತವೆ ಧ್ರುವ ಪ್ರಭೆಗಳು ಎನ್ನುತ್ತಾರೆ ಡಾ.ಎ.ಪಿ.ಭಟ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.