ಉಡುಪಿ: ‘ಸರ್ಕಾರದ ನೌಕರರು ಹಾಗೂ ಜನಪ್ರತಿನಿಧಿಗಳು ಜತೆಯಾಗಿ ಶ್ರಮಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಕಾಣಲು ಸಾಧ್ಯ’ ಎಂದು ಶಾಸಕ ಕೆ. ರಘುಪತಿಭಟ್ ತಿಳಿಸಿದರು.
ರಾಜ್ಯ ಸರ್ಕಾರಿ ನೌಕಕರ ಸಂಘ ಹಾಗೂ ಜಿಲ್ಲಾ ಶಾಖೆ ಭಾನುವಾರ ನಗರದಲ್ಲಿ ಆಯೋಜಿಸಿದ್ದ 2017ನೇ ಸಾಲಿನ ಸಂಘದ ಕಾರ್ಯಕಲಾಪಗಳ ಸಂಕ್ಷಿಪ್ತ ಆಡಳಿತ ವರದಿ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಜನಪ್ರತಿನಿಧಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸರ್ಕಾರಿ ನೌಕರರ ಸಹಕಾರ ಅಗತ್ಯವಾಗಿದೆ. ಸರ್ಕಾರಿ ನೌಕರರು ಕಾನೂನಿನ ಪ್ರಕಾರ ನಡೆಸುಕೊಳ್ಳಬೇಕಾಗುತ್ತದೆ. ಕೊಂಚ ಎಚ್ಚರ ತಪ್ಪಿದರೂ ಅವರು ಬಾರಿ ದಂಡ ತೆರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಾನೂನಿನ ಚೌಕಟಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಸುಮಾರು 6,500 ಸರ್ಕಾರಿ ನೌಕರರಿದ್ದಾರೆ. ಯಾವುದೇ ಸಮಸ್ಯೆಗಳನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ. ಆದರೆ ಸಂಘದ ಮೂಲಕ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯ. ಸಂಘಟನೆ ಬಲಗೊಂಡಷ್ಟು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೆಚ್ಚಿನ ಶಕ್ತಿ ಬರುತ್ತದೆ. ಆದ್ದರಿಂದ ಸಂಘದ ಬಲವರ್ಧನೆಗೆ ಹೆಚ್ಚು ಗಮನ ನೀಡಬೇಕು. ಉತ್ತಮವಾದ ಸಂಘಟನೆ ಇದ್ದರೆ ವೃತ್ತಿಯಲ್ಲಿ ಎದುರಾಗುವ ಎಲ್ಲ ರೀತಿಯ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು ಎಂದು ಹೇಳಿದರು.
ಸರ್ಕಾರ ಹಾಗೂ ಜನಪ್ರತಿನಿಧಿಗಳು ಇನ್ನೂ ಕಾರ್ಯಪ್ರವೃತ್ತರಾಗಿಲ್ಲ. ಈ ಬಗ್ಗೆ ಡಿ.10ರಂದು ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗುತ್ತದೆ. ರಾಜ್ಯ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವತ್ತ ಪ್ರಯತ್ನ ನಡೆಸಲಾಗುತ್ತದೆ ಎಂದರು.
ಸಂಘ ಅಧ್ಯಕ್ಷ ಸುಬ್ರಹ್ಮಣ್ಯ ಸೇರಿಗಾರ್ ಮಾತನಾಡಿ, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಪರಿಶ್ರಮದಿಂದಾಗಿ ರಾಜ್ಯ ಸರ್ಕಾರದ ನೌಕರರು ಉತ್ತಮ ವೇತನ ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಮಾನಸಿಕ ಸಂತೃಪ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಭಾರಿ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಜೀವಹಾನಿ ಒಳಗಾದ ಮಡಿಕೇರಿ ಜನರಿಗೆ ಪುನರ್ ವಸತಿ ಕಲ್ಪಿಸಲು ರಾಜ್ಯ ಸರ್ಕಾರದ ನೌಕಕರು ಒಂದು ದಿನದ ವೇತನವನ್ನು ನೀಡಿದ್ದಾರೆ. ಈಗಾಗಲೇ 102 ಕೋಟಿ ಸಂಗ್ರಹವಾಗಿದ್ದು, ಮುಂದಿನ ದಿನದಲ್ಲಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಅವರಿಗೆ ಹಸ್ತಾಂತರಿಸಲಾಗುತ್ತದೆ. ರಾಜ್ಯ ಸರ್ಕಾರದ ನೌಕರರ ಹೆಸರಿನಲ್ಲಿ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುತ್ತದೆ ಎಂದು ಹೇಳಿದರು.
2019 ಜನವರಿ ಹಾಗೂ ಫೆಬ್ರವರಿ ಸಂಘದ ಚುನಾವಣೆ ನಡೆಯಲಿದೆ. ಆ ಜಿಲ್ಲೆಯಲ್ಲಿ ಶಾಖಾ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತದೆ. ಇದಕ್ಕೆ ಜಿಲ್ಲೆಯ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ನೀಡಬೇಕಾಗ ಬಹುದು ಎಂದು ಹೇಳಿದರು.
ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕಿ ಸಾವಿತ್ರಿ, ಸಂಘದ ಗೌರವ ಅಧ್ಯಕ್ಷ ರವೀಂದ್ರ ಹೆಬ್ಬಾರ್, ಕಾರ್ಯದರ್ಶಿ ಎಚ್.ಉದಯ ಕುಮಾರ್ ಶೆಟ್ಟಿ, ಖಜಾಂಚಿ ಬಿ.ಚಂದ್ರಶೇಖರ, ರಾಜ್ಯ ಪರಿಷತ್ ಸದಸ್ಯ ಕಿರಣ್, ಉಪಾಧ್ಯಕ್ಷ ಎಚ್. ದೇವರಾಜ್‌ಪಾಣ, ಉಪಾಧ್ಯಕ್ಷ ಸುಭಾಶ್ಚಂದ್ರ ಹೆಗ್ಡೆ, ಜೊತೆ ಕಾರ್ಯದರ್ಶಿ ರಾಘವೇಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.