ಉಡುಪಿ: ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದಲ್ಲಿ ನಿರ್ದೋಷಿಯಾಗಿರುವ ಸಂತೋಷ್ ರಾವ್ ಅವರು ಕಾರ್ಕಳದ ಕುಂಟಾಡಿ ಬೈಲಡ್ಕದ ಬಾಲಾಜಿ ಮಂದಿರದಲ್ಲಿ ‘ಮೌನಿ’ಯಾಗಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ.
‘ಯಾರೊಂದಿಗೂ ಮಾತನಾಡಲು ಬಯಸದ ಸಂತೋಷ್ ರಾವ್ ಮಂದಿರದಲ್ಲಿ ದೇವರ ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದು, ದೇಗುಲದ ವಠಾರ ಶುಚಿಗೊಳಿಸುವುದಲ್ಲಿ ತಲ್ಲೀನರಾಗಿರುತ್ತಾರೆ. ಬಿಡುವಿನ ವೇಳೆಯಲ್ಲಿ ಜಪ ಮಾಡುತ್ತಾರೆ. ಈ ಸೇವಾ ಕಾರ್ಯಗಳಿಗೆ ಪ್ರತಿಯಾಗಿ ಹಣ ಪಡೆಯುತ್ತಿಲ್ಲ’ ಎಂದು ಮಂದಿರದ ಗುರುಸ್ವಾಮಿ ಮಾಹಿತಿ ನೀಡಿದರು.
‘ಬಾಲಾಜಿ ಮಂದಿರಕ್ಕೂ ಸಂತೋಷ ರಾವ್ ಕುಟುಂಬಕ್ಕೂ ಭಾವನಾತ್ಮಕ ನಂಟಿದೆ. ಸಂತೋಷ್ ರಾವ್ ಹಾಗೂ ತಂದೆ ನಿವೃತ್ತ ಶಿಕ್ಷಕ ಸುಧಾಕರ ರಾವ್ ಆಗಾಗ ಮಂದಿರಕ್ಕೆ ಬರುತ್ತಿದ್ದರು. ಧರ್ಮಸ್ಥಳದಲ್ಲಿ ಸೌಜನ್ಯಾ ಕೊಲೆಯಾಗುವ ಎರಡು ದಿನ ಮೊದಲು ಮಂದಿರ ಬಿಟ್ಟು ಹೋಗಿದ್ದರು. ನಂತರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ಪಡೆದ ಬಳಿಕ ಮಂದಿರಕ್ಕೆ ಬಂದು ಉಳಿದಿದ್ದರು. ನ್ಯಾಯಾಲಯಕ್ಕೆ ಹಾಜರಾಗಲು ಸಂತೋಷ್ ರಾವ್ ಅವರನ್ನು ಸಹೋದರರು ಮಂದಿರದಿಂದಲೇ ಕರೆದೊಯ್ಯುತ್ತಿದ್ದರು’ ಎಂದು ಹೇಳಿದರು.
ಸಂತೋಷ ರಾವ್ ಅನ್ನ ಸೇವಿಸುವುದಿಲ್ಲ. ದಿನಕ್ಕೆ ಎರಡು ಹೊತ್ತು ಬೇಕಾದ ಆಹಾರವನ್ನು ಸ್ವತಃ ಸಿದ್ಧಪಡಿಸಿಕೊಂಡು ಸೇವಿಸುತ್ತಾರೆ. ಚಹಾ, ಕಾಫಿ ಸೇವನೆ ಮಾಡುವುದಿಲ್ಲ ಎಂದು ಗುರುಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.