ADVERTISEMENT

ಉಡುಪಿ | ‘ದೈಹಿಕ ಸದೃಢತೆಗೆ ಕ್ರೀಡೆ ಪೂರಕ’

ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾಧಿಕಾರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 5:12 IST
Last Updated 26 ನವೆಂಬರ್ 2024, 5:12 IST
ಪೊಲೀಸ್‌ ಕ್ರೀಡಾಕೂಟಕ್ಕೆ ಬಲೂನ್ ಹಾರಿಸುವ ಮೂಲಕ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಚಾಲನೆ ನೀಡಿದರು
ಪೊಲೀಸ್‌ ಕ್ರೀಡಾಕೂಟಕ್ಕೆ ಬಲೂನ್ ಹಾರಿಸುವ ಮೂಲಕ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಚಾಲನೆ ನೀಡಿದರು   

ಉಡುಪಿ: ‘ಪ್ರತಿಯೊಬ್ಬರ ದೈಹಿಕ ದೃಢತೆಗೆ ಕ್ರೀಡಾ ಚಟುವಟಿಕೆಗಳು ಪೂರಕವಾಗಿವೆ. ಸದಾ ಕೆಲಸದ ಒತ್ತಡವನ್ನು ಅನುಭವಿಸುವ ಪೊಲೀಸರ ದೈಹಿಕ ಸಾಮರ್ಥ್ಯ ಹಾಗೂ ಸಾಮಾಜಿಕ ಒಲವು ಹೆಚ್ಚಿಸುವ ನಿಟ್ಟಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ’ ಎಂದು ಜಿಲ್ಲಾಧಿಕಾರಿ  ಕೆ. ವಿದ್ಯಾಕುಮಾರಿ ಹೇಳಿದರು.

ಅಜ್ಜರಕಾಡುವಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಉಡುಪಿ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಸೇವೆ ಅಪಾರ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ದೈನಂದಿನ ಕರ್ತವ್ಯ ನಿಭಾಯಿಸುವುದರ ಜೊತೆಗೆ ಕ್ರೀಡೆಯ ಬಗೆಗಿನ ಅಭಿರುಚಿ ಬೆಳೆಸಿಕೊಂಡಿರುವುದು ಉತ್ತಮ ವಿಚಾರ ಎಂದರು.

ADVERTISEMENT

ಕರಾವಳಿ ಕಾವಲು ಪಡೆಯ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್ ಮಾತನಾಡಿ, ಪೊಲೀಸರು ಹಾಗೂ ಸಿಬ್ಬಂದಿ  ಕ್ರೀಡೆಗಳಲ್ಲಿ ಸಕ್ರಿಯವಾಗಿ ಉತ್ಸಾಹದಿಂದ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದರು.

ಕ್ರೀಡಾಕೂಟದಲ್ಲಿ ವಿವಿಧ ಪೊಲೀಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಡಿಎಆರ್ ಉಡುಪಿಯ ಆರ್.ಎಸ್.ಐ ಅಮೀರ್ ಪಾಶಾ ಪ್ರಮಾಣ ವಚನ ಬೋಧಿಸಿದರು.

ಉಡುಪಿ ಡಿಎಆರ್ ಎಪಿಸಿ ಜೀವನ್ ನಾಯ್ಕ್ ಕ್ರೀಡಾಜ್ಯೋತಿ ತಂದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಅರುಣ್ ಕೆ. ಸ್ವಾಗತಿಸಿದರು. ಯೋಗೇಶ್ ನಾಯ್ಕ್ ನಿರೂಪಿಸಿದರು. ಎಎಸ್‌ಪಿ ಎಸ್.ಟಿ. ಸಿದ್ದಲಿಂಗಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.