ಉಡುಪಿ: ಎಲ್ಲೆಲ್ಲೂ ಗೋವಿಂದನ ನಾಮಸ್ಮರಣೆ, ಹುಲಿವೇಷಗಳ ಅಬ್ಬರ, ಗುರ್ಜಿಗಳಿಗೆ ಕಟ್ಟಿದ್ದ ಮಡಕೆಗಳನ್ನು ಒಡೆಯಲು ಗೊಲ್ಲವೇಷಧಾರಿಗಳ ಹರಸಾಹಸ, ರಥಬೀದಿಯಲ್ಲಿ ಪ್ರವಾಹದೋಪಾದಿಯಲ್ಲಿ ಜನಸಾಗರ...
ಇಂತಹ ಅಭೂತಪೂರ್ವ ಸನ್ನಿವೇಶಗಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿಯ ಕೃಷ್ಣ ಮಠದಲ್ಲಿ ಮಂಗಳವಾರ ನಡೆದ ವಿಟ್ಲಪಿಂಡಿ ಮಹೋತ್ಸವವು ಸಾಕ್ಷಿಯಾಯಿತು.
ಅಷ್ಟಮಿಯ ದಿನವಾದ ಸೋಮವಾರ ಕೃಷ್ಣ ಮಠದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ಮಧ್ಯರಾತ್ರಿ ದೇವರಿಗೆ ನೈವೇದ್ಯ ಸಮರ್ಪಿಸಿ ಮಹಾಪೂಜೆ ನೆರವೇರಿಸಿದ್ದ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಚಂದ್ರೋದಯದ ವೇಳೆ ಶ್ರೀಕೃಷ್ಣ ದೇವರಿಗೆ ಅರ್ಘ್ಯ ಪ್ರದಾನ ಮಾಡಿದ್ದರು. ಬಳಿಕ ಭಕ್ತರಿಗೂ ಅರ್ಘ್ಯ ಬಿಡುವ ಅವಕಾಶ ನೀಡಲಾಗಿತ್ತು. ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಸುಶೀಂದ್ರ ತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠದ ವಿದ್ಯೇಶತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.
ಮಂಗಳವಾರ ಬೆಳಿಗ್ಗೆಯಿಂದಲೇ ಭಾರಿ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀಗಳಾದ ಸುಶೀಂದ್ರ ತೀರ್ಥ ಸ್ವಾಮೀಜಿ ಪಲ್ಲಪೂಜೆ ನೆರವೇರಿಸಿದರು. ಬೆಳಿಗ್ಗೆ 11 ಗಂಟೆಯಿಂದಲೇ ಭಕ್ತರಿಗೆ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಭಕ್ತರು ಸರದಿಯಲ್ಲಿ ನಿಂತು ಭೋಜನ ಪ್ರಸಾದ ಸ್ವೀಕರಿಸಿದರು.
ಮಧ್ಯಾಹ್ನ 3 ಗಂಟೆಯಿಂದ ಶ್ರೀಕೃಷ್ಣ ದೇವರ ಮೃಣ್ಮಯ ಮೂರ್ತಿಯ ಮೆರವಣಿಗೆ ರಥಬೀದಿಯಲ್ಲಿ ನಡೆಯಿತು. ಈ ವೇಳೆ ರಥಬೀದಿಯುದ್ದಕ್ಕೂ ಜನರು ಕಿಕ್ಕಿರಿದು ತುಂಬಿದ್ದರು.
ನಡುವೆ ಶ್ರೀಪಾದರು ಹುಲಿವೇಷಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ಇದೇ ವೇಳೆ ಆಕರ್ಷಕ ಮಲ್ಲಗಂಬ ಪ್ರದರ್ಶನವೂ ನಡೆಯಿತು. ದೇವರ ಮೂರ್ತಿಯ ಮೆರವಣಿಗೆ ಸಾಗಿದಂತೆ ರಥಬೀದಿಯ ಅಲ್ಲಲ್ಲಿ ಸ್ಥಾಪಿಸಿದ್ದ ಗುರ್ಜಿಗಳಲ್ಲಿ ಕಟ್ಟಿದ್ದ ಮೊಸರು ಕುಡಿಕೆಗಳನ್ನು ನೀಲ ಬಣ್ಣದ ಮುಖಾಲಂಕಾರ ಮಾಡಿದ್ದ ಗೊಲ್ಲ ವೇಷಧಾರಿಗಳು ಒಡೆದರು.
ವಿಟ್ಲಪಿಂಡಿ ಮಹೋತ್ಸವದ ಅಂಗವಾಗಿ ನಗರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೃಷ್ಣ ಮಠದತ್ತ ಜನ ಸಾಗರ ಹರಿದುಬಂದ ಕಾರಣ ಮಠದ ಸುತ್ತ ಮುತ್ತಲಿನ ಬಹುತೇಕ ರಸ್ತೆಗಳಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
ರಸ್ತೆ ಬದಿಗಳಲ್ಲಿ ಮಕ್ಕಳ ಆಟದ ಸಾಮಗ್ರಿ, ಫ್ಯಾನ್ಸಿ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟವೂ ಗರಿಗೆದರಿತ್ತು.
ಧರೆಗಿಳಿದ ಹಾಲಿವುಡ್ ಪಾತ್ರಗಳು
ವಿಟ್ಲಪಿಂಡಿ ಮಹೋತ್ಸವದ ಮೆರವಣಿಗೆಯ ವೇಳೆ ಅಲ್ಲಲ್ಲಿ ಬಾಲಿವುಡ್ ಪಾತ್ರಗಳ ವೇಷಧಾರಿಗಳು ಗಮನ ಸೆಳೆದರು. ರವಿ ಕಟಪಾಡಿವ ಹಾಗೂ ಸಂಗಡಿಗ ಈ ಬಾರಿ ಅವತಾರ್–2 ವೇಷ ತೊಟ್ಟು ಜನರನ್ನು ರಂಜಿಸಿದರು. ಗುರ್ಜಿಗೆ ಹತ್ತಿ ಕಸರತ್ತು ಪ್ರದರ್ಶಿಸಿದರು. ರಥಬೀದಿಯ ವೇದಿಕೆಯೊಂದರಲ್ಲಿ ಚಾರ್ಲಿ ಚಾಪ್ಲಿನ್ ವೇಷಧಾರಿಯು ತನ್ನ ಹಾವಭಾವದಿಂದ ನೋಡುಗರನ್ನು ನಗೆಗಡಲಲ್ಲಿ ತೇಲಿಸಿದ್ದ. ಏಲಿಯನ್, ಪ್ರೆಡೇಟರ್ ವೇಷಧಾರಿಗಳೂ ಜನರ ಚಿತ್ತಾಪಹರಿಸಿದರು. ಹೆಚ್ಚಿನ ವೇಷಧಾರಿಗಳು ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಉದ್ದೇಶದಿಂದ ವೇಷತೊಟ್ಟು ಹಣ ಸಂಗ್ರಹ ಮಾಡಿದ್ದರು.
ಹುಲಿ ವೇಷಧಾರಿಗಳ ಅಬ್ಬರ
ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಗರದಲ್ಲಿ ಎರಡು ದಿನಗಳಿಂದ ಅಬ್ಬರಿಸಿದ್ದ ಹುಲಿವೇಷಧಾರಿಗಳು ವಿಟ್ಲಪಿಂಡಿಯ ವೇಳೆ ವೇದಿಕೆಗಳಲ್ಲಿ ಪ್ರದರ್ಶನ ನೀಡಿದರು. ವಿಟ್ಲಪಿಂಡಿಯಂದು ಸಂಜೆ ರಾಜಾಂಗಣದಲ್ಲಿ ಹುಲಿ ವೇಷಧಾರಿಗಳ ಕುಣಿತ ರಂಗೇರಿತ್ತು. ಹುಲಿ ವೇಷದ ಜೊತೆಗೆ ತಾಸೆ, ಡೋಲು, ಬ್ಯಾಂಡ್ ಮೊದಲಾದ ಹಿ ಮ್ಮೇಳ ವಾದ್ಯಗಳು ನೆರೆದಿದ್ದ ಸಭಿಕರಿಗೆ ರೋಮಾಂಚನ ಉಂಟು ಮಾಡಿದವು. ಬಾಲಕರ ಹುಲಿವೇಷದ ತಂಡದ ಸದಸ್ಯರು ತಮ್ಮ ನರ್ತನ ಹಾಗೂ ಕಸರತ್ತುಗಳ ಮೂಲಕ ಜನರನ್ನು ಮೋಡಿ ಮಾಡಿದರು. ರಥಬೀದಿಯಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಕಲ್ಕೂರ ಬಿಲ್ಡರ್ಸ್ ಮತ್ತು ಡೆವಲಪರ್ಸ್ ವತಿಯಿಂದ ಕಾಡಬೆಟ್ಟು ಹುಲಿವೇಷ ತಂಡ ಕಟ್ಟಿ ಬೆಳೆಸಿರುವ ದಿ. ಅಶೋಕ್ ರಾಜ್ ಅವರಿಗೆ ಘೋಷಿಸಿದ್ದ ‘ತುಳುನಾಡ ಪೆರ್ಮೆದ ಪಿಲಿ’ ಮರಣೋತ್ತರ ಪ್ರಶಸ್ತಿಯನ್ನು ಅವರ ಮಗಳು ಸುಷ್ಮಾ ರಾಜ್ ಹಾಗೂ ಕುಟುಂಬ ಸದಸ್ಯರಿಗೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.