ಕುಂದಾಪುರ: ಇತಿಹಾಸ ಪ್ರಸಿದ್ದವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವೈಭವದ ಶ್ರೀ ಮನ್ಮಹಾರಥೋತ್ಸವ ಬುಧವಾರ ಸಂಪನ್ನಗೊಂಡಿತು. ದೇವಿಯ ವಿಜೃಂಭಣೆಯ ಉತ್ಸವಕ್ಕೆ ಆಸು ಪಾಸಿನ ಗ್ರಾಮಗಳಿಂದ, ರಾಜ್ಯದ ವಿವಿಧ ಭಾಗಗಳಿಂದ, ಹೊರರಾಜ್ಯ ಹಾಗೂ ವಿದೇಶಗಳಿಂದ ಭಾರಿ ಸಂಖ್ಯೆಯ ಭಕ್ತರು ನೆರೆದಿದ್ದರು.
ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ತಂತ್ರಿ ರಾಮಚಂದ್ರ ಅಡಿಗರ ನೇತೃತ್ವದಲ್ಲಿ ನಡೆದವು. ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥ ಬಲಿಯ ಬಳಿಕ ಮಧ್ಯಾಹ್ನ 12.30ರ ಮಿಥುನ ಲಗ್ನದಲ್ಲಿ ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಗರ್ಭಗುಡಿಯಿಂದ ತರಲಾದ ಜೋಡಿ ಉತ್ಸವ ಮೂರ್ತಿಗಳನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥ ಪೂಜೆ ನೆರವೇರಿಸಿ ರಥೋತ್ಸವ ನಡೆಸಲಾಯಿತು.
ಸಾವಿರಾರು ಭಕ್ತರ ಜಯಘೋಷದ ನಡುವೆ, ಬೀದಿ ಗಣಪತಿ ದೇವಸ್ಥಾನದವರೆಗೆ ರಥ ಸಾಗಿತು. ಸಂಜೆ 5ಗಂಟೆಯ ಬಳಿಕ ಬ್ರಹ್ಮರಥದಲ್ಲಿ ದೇವರನ್ನು ಕೂರಿಸಿ ರಥಬೀದಿಯಲ್ಲಿ ಶಂಕರಾಶ್ರಮದವರೆಗೆ ಕೊಂಡೊಯ್ಯಲಾಯಿತು. ಜಾತ್ರೆಯ ತೇರಿನ ಈ ವೈಭವಕ್ಕೆ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.
ರಥಬೀದಿಯ ಸಂಭ್ರಮದ ಉತ್ಸವಾಚರಣೆ ಬಳಿಕ ದೇವರನ್ನು ರಥದಿಂದ ಇಳಿಸಿ ದೇವಸ್ಥಾನದ ಒಳಗೆ ತೆಗೆದುಕೊಂಡು ಹೋಗಲಾಯಿತು. ಹಿರಿಯ ಖುತ್ವಿಜರಾದ ಕೆ.ಎನ್.ನರಸಿಂಹ ಅಡಿಗ, ಶ್ರೀಧರ ಅಡಿಗ, ಕೆ.ಎನ್.ಗೋವಿಂದ ಅಡಿಗ, ಸುಬ್ರಹ್ಮಣ್ಯ ಅಡಿಗ, ವಿಘ್ನೇಶ್ ಅಡಿಗ ಇದ್ದರು.
ಕೋವಿಡ್ 19ನಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ರಥೋತ್ಸವ ಈ ವರ್ಷ ಅದ್ಧೂರಿಯಾಗಿ ನಡೆಯಿತು. ಕುಂದಾಪುರ ಉಪ ವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಪೊಲೀಸರು ಬಿಗಿ ಭದ್ರತೆ ವ್ಯವಸ್ಥೆ ಮಾಡಿದ್ದರು.
ಮಾ.5 ರಂದು ಗಣಪತಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ವಾರ್ಷಿಕ ಉತ್ಸವಾಚರಣೆ, 9 ರಂದು ಮಾಂಗಲ್ಯೋತ್ಸವ ಮಯೂರಾರೋಹಣೋತ್ಸವ, 10ರಂದು ಡೋಲಾರೋಹಣೋತ್ಸವ, 11 ರಂದು ಪುಷ್ಪಮಂಟಪಾರೋಹಣೋತ್ಸವ, 12ರಂದು ವೃಷಭಾರೋಹಣೋತ್ಸವ, 13ರಂದು ಗಜಾರೋಹಣೋತ್ಸವ, 14 ರಂದು ಸಿಂಹಾರೋಹಣೋತ್ಸವ ನಡೆದಿದ್ದವು.
ಮಾರ್ಚ್ 16ರಂದು ಓಕುಳಿ ಹಾಗೂ ಅವಭೃತ ಸ್ನಾನ ನಡೆಯಲಿದ್ದು 17ರಂದು ಅಶ್ವರೋಹಣೋತ್ಸವ, ಮಹಾಪೂರ್ಣಾಹುತಿ, ಧ್ವಜಾರೋಹಣ, ಪೂರ್ಣಕುಂಭಾಭಿಷೇಕ ಹಾಗೂ ಅಂಕುರ ಪ್ರಸಾದ ವಿತರಣೆ ನಡೆಯಲಿದೆ.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ಎಡಿಸಿ ಬಿ.ಎನ್.ವೀಣಾ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಸದಸ್ಯರಾದ ಗಣೇಶ್ ಕಿಣಿ ಬೆಳ್ವೆ, ಡಾ.ಅತುಲಕುಮಾರ ಶೆಟ್ಟಿ, ಗೋಪಾಲಕೃಷ್ಣ ನಾಡ, ಜಯಾನಂದ ಹೋಬಳಿದಾರ್, ಸಂಧ್ಯಾ ರಮೇಶ್, ರತ್ನಾ ರಮೇಶ್ ಕುಂದರ್, ಕೆ.ಪಿ.ಶೇಖರ್, ಬ್ರಹ್ಮರಥ ದಾನಿ ಉದ್ಯಮಿ ಸುನೀಲ್ ಶೆಟ್ಟಿ, ವೀರಭದ್ರ ದೇವಸ್ಥಾನದ ನಿರ್ಮಾತೃ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಹಿಂದಿನ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ್, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಗೋವಿಂದ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮಕೃಷ್ಣ ಭಟ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ವಂಡಬಳ್ಳಿ ಜಯರಾಮ್ ಶೆಟ್ಟಿ, ಚುಚ್ಚಿ ನಾರಾಯಣ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.