ADVERTISEMENT

ಜಿಲ್ಲೆಗೆ ಸಮರ್ಪಕವಾಗಿ ಸಿಎನ್‌ಜಿ ಪೂರೈಸಿ

ಕಂಪನಿ ಪ್ರತಿನಿಧಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 5:55 IST
Last Updated 16 ನವೆಂಬರ್ 2024, 5:55 IST
ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು
ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು   

ಉಡುಪಿ: ಜಿಲ್ಲೆಯಲ್ಲಿ ಸಿಎನ್‌ಜಿ ಇಂಧನ ಚಾಲಿತ ಆಟೊ ರಿಕ್ಷಾ ಚಾಲಕರು ಸಮಸ್ಯೆ ಎದುರಿಸುತ್ತಿದ್ದು, ಸಿಎನ್‌ಜಿ ಬಂಕ್‌ಗಳಿಗೆ ಸಮರ್ಪಕವಾಗಿ ಇಂಧನ ಪೂರೈಸಿ ಎಂದು ಮಂಗಳೂರಿನ ಗೇಲ್‌ ಇಂಡಿಯಾ ಕಂಪನಿ ಹಾಗೂ ಅದಾನಿ ಕಂಪನಿ ಪ್ರತಿನಿಧಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಿಎನ್‌ಜಿ ಇಂಧನ ತುಂಬಿಸಿಕೊಳ್ಳಲು ರಿಕ್ಷಾ ಚಾಲಕರು ಬಂಕ್‌ಗಳ ಮುಂದೆ ಕಿ.ಮೀ.ಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಅವರ ದುಡಿಮೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಗೇಲ್‌ ಕಂಪನಿಯಿಂದ ಅದಾನಿ ಕಂಪನಿಯವರು ಜಿಲ್ಲೆಗೆ ಸಿಎನ್‌ಜಿ ಇಂಧನ ಪೂರೈಕೆ ಮಾಡುತ್ತಿದ್ದು, ಎರಡೂ ಕಂಪನಿಯವರು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಸಿಎನ್‌ಜಿ ಇಂಧನ ಕೊರತೆ ಸಮಸ್ಯೆ ಪರಿಹರಿಸಬೇಕು. ನಗರ ವ್ಯಾಪ್ತಿಯಲ್ಲಿರುವ ಉಡುಪಿ, ಮಲ್ಪೆ ಸಿಎನ್‌ಜಿ ಬಂಕ್‌ಗಳಲ್ಲಿ ಇಂಧನಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಈ ಬಂಕ್‌ಗಳಿಗೆ ಇಂಧನ ಪೂರೈಸಲು ಹೆಚ್ಚುವರಿ ಮೂರು ಜಂಬೊ ವಾಹನಗಳನ್ನು ಬಳಸಬೇಕು ಎಂದು ಸೂಚಿಸಿದರು.

ADVERTISEMENT

ಸಾಕಷ್ಟು ಇಂಧನ ನೀಡಲು ಸಿದ್ಧರಿದ್ದೇವೆ. ರಾತ್ರಿ ವೇಳೆಯೂ ಇಂಧನ ಪೂರೈಕೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಗೇಲ್‌ ಕಂಪನಿ ಪ್ರತಿನಿಧಿಗಳು ತಿಳಿಸಿದರು.

ತಂತ್ರಜ್ಞರ ಕೊರತೆ ಇರುವುದರಿಂದ ಮೆಷಿನ್‌ಗಳಲ್ಲಿ ದೋಷ ಕಂಡು ಬಂದರೆ ಸಮಸ್ಯೆ ಎದುರಾಗುತ್ತಿದೆ ಎಂದು ಸಿಎನ್‌ಜಿ ಬಂಕ್‌ ಮಾಲೀಕರು ಸಭೆಯ ಗಮನಕ್ಕೆ ತಂದರು. ಆಗ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಮಾತನಾಡಿ, ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞರನ್ನು ಒದಗಿಸಿ, ಇಲ್ಲದಿದ್ದರೆ ಗುಣಮಟ್ಟದ ಮೆಷಿನ್‌ಗಳನ್ನು ನೀಡಿ ಎಂದು ಕಂಪನಿ ಪ್ರತಿನಿಧಿಗಳಿಗೆ ತಿಳಿಸಿದರು.

ಗೇಲ್‌ ಕಂಪನಿಯಿಂದ ಸರಿಯಾದ ಸಮಯಕ್ಕೆ ಸಿಎನ್‌ಜಿ ಇಂಧನ ಪೂರೈಕೆಯಾಗುತ್ತಿಲ್ಲ ಎಂದು ಸಿಎನ್‌ಜಿ ಬಂಕ್‌ ಮಾಲೀಕರು ಆರೋಪಿಸಿದರು.

ಸೀಜನ್‌ನಲ್ಲಿ ಸಿಎನ್‌ಜಿ ಇಂಧನಕ್ಕೆ ಸಾಕಷ್ಟು ಬೇಡಿಕೆ ಇರುತ್ತದೆ. ಆದರೆ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಸಿಎನ್‌ಜಿ ಬಂಕ್‌ಗಳ ಮುಂಭಾಗದಲ್ಲಿ ಆಟೊ ರಿಕ್ಷಾಗಳನ್ನು ಕಿ.ಮೀ. ಗಟ್ಟಲೆ ಸರದಿಯಲ್ಲಿ ನಿಲ್ಲಿಸುವುದರಿಂದ ತೊಂದರೆಯಾಗುತ್ತಿದೆ ಎಂದು ಸಮೀಪದ ಅಪಾರ್ಟ್‌ಮೆಂಟ್‌ನವರು, ಅಂಗಡಿಯವರು ನಮ್ಮಲ್ಲಿ ದೂರುತ್ತಿದ್ದಾರೆ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.