ADVERTISEMENT

ಉಡುಪಿ | ಬೀದಿ ನಾಯಿ ಹಾವಳಿ: ಬೇಕಿದೆ ಪರಿಹಾರೋಪಾಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 7:09 IST
Last Updated 15 ಜುಲೈ 2024, 7:09 IST
ಉಡುಪಿ ನಗರದಲ್ಲಿ ಬೀದಿನಾಯಿಗಳು ಗುಂಪುಗೂಡಿರುವುದು
ಉಡುಪಿ ನಗರದಲ್ಲಿ ಬೀದಿನಾಯಿಗಳು ಗುಂಪುಗೂಡಿರುವುದು   

ಉಡುಪಿ: ನಗರ ಹಾಗೂ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಸ್‌ ನಿಲ್ದಾಣ, ಮಾರುಕಟ್ಟೆ, ಅಂಗಡಿ ಬದಿಗಳಲ್ಲಿ ಬೀಡು ಬಿಟ್ಟಿರುವ ಬೀದಿ ನಾಯಿಗಳು ಜನರಲ್ಲಿ ಆತಂಕ ಉಂಟು ಮಾಡುತ್ತಿವೆ.

ಸಂಜೆ ಹಾಗೂ ಮುಂಜಾನೆ ನಡೆದಾಡುವವರನ್ನು, ದ್ವಿಚಕ್ರ ವಾಹನ ಸವಾರರನ್ನು, ಶಾಲೆಗೆ ಹೋಗುವ ಮಕ್ಕಳನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದು ಕಚ್ಚುವ ಪ್ರಕರಣಗಳು ಹೆಚ್ಚಾಗುತ್ತಿವೆ. ತಡರಾತ್ರಿ ಕೆಲಸ ಮುಗಿಸಿಕೊಂಡು ನಡೆದುಕೊಂಡು ಅಥವಾ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವರ ಮೇಲೆ ಹೆಚ್ಚಾಗಿ ನಾಯಿಗಳು ದಾಳಿ ನಡೆಸುತ್ತಿವೆ.

ಎಲ್ಲೆಂದರಲ್ಲಿ ಹೋಟೆಲ್‌ ತ್ಯಾಜ್ಯ, ಮಾಂಸದಂಗಡಿಗಳ ತ್ಯಾಜ್ಯಗಳನ್ನು ಬಿಸಾಡುವುದರಿಂದ ಅವುಗಳನ್ನು ತಿನ್ನಲು ನಾಯಿಗಳು ಗುಂಪುಗೂಡುತ್ತವೆ. ಕೆಲವೊಮ್ಮೆ ಸಮೀಪದಲ್ಲಿ ನಡೆದಾಡುವ ಮನುಷ್ಯರ ಮೇಲೂ ಅವುಗಳು ಕಚ್ಚುತ್ತವೆ. ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಮರ್ಪಕವಾಗಿ ನಡೆಯದ ಕಾರಣ ಅವುಗಳ ಸಂಖ್ಯೆ ಮಿತಿ ಮೀರಿ ಜನರಿಗೆ ಸಂಕಷ್ಟ ತಂದೊಡ್ಡುತ್ತಿವೆ. ಜೊತೆಗೆ ಜಾನುವಾರುಗಳಿಗೂ ಅವುಗಳು ಕಚ್ಚುತ್ತವೆ.

ADVERTISEMENT

ಕೆಲವರು ಸಾಕು ನಾಯಿಗಳ ಮರಿಗಳನ್ನೂ ಬೀದಿಗೆ ಬಿಡುತ್ತಾರೆ ಅವುಗಳೂ ಜನರಿಗೆ ಆಪತ್ತು ತಂದೊಡ್ಡುತ್ತವೆ. ನಾಯಿ ಕಡಿತಕ್ಕೊಳಗಾದವರು ನಿರ್ಲಕ್ಷ್ಯ ವಹಿಸಿ ರೇಬಿಸ್‌ ನಿರೋಧಕ ಚುಚ್ಚುಮದ್ದು ಪಡೆಯದಿದ್ದರೆ ರೇಬಿಸ್‌ ಕಾಯಿಲೆಗೆ ಒಳಗಾಗುವ ಸಾಧ್ಯತೆಯೂ ಇದೆ.

ಉಡುಪಿ ನಗರ ವ್ಯಾಪ್ತಿಯಲ್ಲಿ ಮಣಿಪಾಲದಲ್ಲೇ ಅತಿ ಹೆಚ್ಚು ನಾಯಿ ಕಡಿತ ಪ್ರಕರಣಗಳು ದಾಖಲಾಗುತ್ತಿವೆ. ಇಲ್ಲಿನ ವಿದ್ಯಾರ್ಥಿಗಳು ಬೀದಿ ನಾಯಿಗಳ ಹಾವಳಿಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೆ ಮಲ್ಪೆ, ಆದಿ ಉಡುಪಿ, ಅಜ್ಜರಕಾಡು, ಕಿದಿಯೂರು ಮೊದಲಾದ ಕಡೆಗಳಲ್ಲೂ ಇವುಗಳ ಉಪಟಳ ಹೆಚ್ಚಿದೆ ಎಂದು ನಾಗರಿಕರು ದೂರಿದ್ದಾರೆ.

ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಅವುಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಆದ್ಯತೆ ನೀಡಬೇಕು ಎಂದು ಈಚೆಗೆ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರು ಸೂಚನೆ ನೀಡಿದ್ದರು.

ನಗರಸಭೆ ಮತ್ತು ಪಂಚಾಯಿತಿ ವ್ಯಾಪ್ತಿಗಳಲ್ಲಿ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟವರು ಮುತುವರ್ಜಿ ವಹಿಸುತ್ತಿಲ್ಲ ಈ ಕಾರಣಕ್ಕೆ ಅವುಗಳ ಸಂಖ್ಯೆ ಮಿತಿಮೀರಿ ಜನರಿಗೆ ಸಂಕಷ್ಟ ತಂದೊಡ್ಡುತ್ತವೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಕಾಪು: ತಾಲ್ಲೂಕಿನ ಪಡುಬಿದ್ರಿ, ಶಿರ್ವ, ಕಟಪಾಡಿ ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆ ಸ್ಕೂಟರ್‌ನಲ್ಲಿ ಸಂಚರಿಸುವವರನ್ನು ನಾಯಿಗಳು ಅಟ್ಟಿಸಿಕೊಂಡು ಬರುತ್ತವೆ. ಇವುಗಳ ಹಾವಳಿಯಿಂದ ಅಲ್ಲಿನ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಕೆಲವೊಮ್ಮೆ ನಾಯಿಗಳು ವಾಹನಗಳ ಹಿಂದೆಯೇ ಓಡುವುದರಿಂದ ಅಪಘಾತಗಳು ಕೂಡ ನಡೆದಿವೆ.

ಹೆಬ್ರಿ: ಹೆಬ್ರಿಯಲ್ಲೂ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಅವುಗಳು ವಾಹನ ಸವಾರರನ್ನು ಓಡಿಸಿಕೊಂಡು ಬರುತ್ತಿವೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಮೀನು ಮಾರಾಟ ಮಾಡುವಲ್ಲಿ, ಕೋಳಿ ಮಾಂಸ ಮಾರಾಟ ಅಂಗಡಿ, ಮಾಂಸಹಾರಿ ಹೋಟೆಲ್‌ ಮತ್ತು ಫಾಸ್ಟ್‌ ಪುಡ್‌ ಸೆಂಟರ್‌ ಎದುರು ಬೀದಿನಾಯಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಮಾಂಸ ಸಹಿತ ಆಹಾರ ಅರಸಿ ಸಾಕುನಾಯಿಗಳು ಕೂಡ ಪೇಟೆಗೆ ಬಂದು ಸಾರ್ವಜನಿಕರಿಗೆ ಸಮಸ್ಯೆಯೊಡ್ಡುತ್ತಿವೆ. ಬೀದಿನಾಯಿಗಳನ್ನು ನಿಯಂತ್ರಿಸಲು ವಿಶೇಷ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಸ್ಥಳೀಯಾಡಳಿತವನ್ನು ಒತ್ತಾಯಿಸಿದ್ದಾರೆ.

ಶಿರ್ವ: ಕಟಪಾಡಿ, ಶಿರ್ವ ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಕಡೆ ನಾಯಿಗಳ ಸಂಖ್ಯೆ ಹೆಚ್ಚಾದರೆ ಮತ್ತೊಂದು ಕಡೆ ಆಹಾರವಿಲ್ಲದೆ ಅನೇಕ ಬೀದಿನಾಯಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ‌

ಹಸಿದ ನಾಯಿಗೆ ತಿಂಡಿಕೊಂಡುವ ವೇಳೆ ಕೆಲವರು ನಾಯಿ ಕಡಿತಕ್ಕೂ ಒಳಗಾಗುತ್ತಿದ್ದಾರೆ. ಬೀದಿ ನಾಯಿಗಳ ಬಗ್ಗೆ ಸ್ಥಳೀಯಾಡಳಿತ ಮತ್ತು ಸಾರ್ವಜನಿಕರು ಅಸಡ್ಡೆ ತೋರಿಸುತ್ತಿರುವುದರಿಂದ ಬೀದಿ ನಾಯಿಗಳ ನಿಯಂತ್ರಣ ಕಷ್ಟಕರವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ಬೀದಿ ನಾಯಿಗಳಿಗೆ ಪಶು ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆಯಿದೆ ಎನ್ನುತ್ತಾರೆ ಕೋಟೆ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ವಿಜಯ್ ಕುಮಾರ್.

ಪೂರಕ ಮಾಹಿತಿ: ಹಮೀದ್‌ ಪಡುಬಿದ್ರಿ, ಸುಕುಮಾರ್‌ ಮುನಿಯಾಲ್‌, ಪ್ರಕಾಶ್‌ ಸುವರ್ಣ ಕಟಪಾಡಿ

ರೇಬೀಸ್ ಚುಚ್ಚುಮದ್ದು ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ದಾಸ್ತಾನಿದೆ. ನಾಯಿ ಕಡಿತಕ್ಕೊಳಗಾದವರಿಗೆ ಚುಚ್ಚುಮದ್ದು ನೀಡಲು ಕ್ರಮ ವಹಿಸಲಾಗಿದೆ
ಡಾ.ಐ.ಪಿ.ಗಡಾದ್‌ ಜಿಲ್ಲಾ ವೈದ್ಯಾಧಿಕಾರಿ
ಮಲ್ಪೆ ಪ್ರದೇಶದಲ್ಲಿ ಬೆಳಿಗ್ಗೆ ಬೈಕ್‌ನಲ್ಲಿ ತೆರಳುವಾಗ ಕೆಲವು ನಾಯಿಗಳು ಕಚ್ಚಲು ಬರುತ್ತವೆ. ನಗರದ ಕೆಲವು ಪ್ರದೇಶಗಳಲ್ಲಿ ಅವುಗಳ ಸಂಖ್ಯೆ ಮಿತಿಮೀರಿದೆ
ಶ್ರೀನಿವಾಸ ಖಾಸಗಿ ಸಂಸ್ಥೆ ಉದ್ಯೋಗಿ

Quote - ಬೀದಿಯಲ್ಲಿ ಸಾಯುವ ನಾಯಿಗಳ ಕಳೇಬರ ವಿಲೇವಾರಿ ಮಾಡಲು ಶಂಕರಪುರದ ಸಾಯಿ ಸಾಂತ್ವನ ಮಂದಿರ ಟ್ರಸ್ಟ್‌ ವತಿಯಿಂದ ಆ್ಯಂಬುಲೆನ್ಸ್‌ನೊಂದಿಗೆ ಕಾರ್ಯಕರ್ತರನ್ನು ನೇಮಿಸಲಾಗಿದೆ ಸಾಯಿ ಈಶ್ವರ್ ಗುರೂಜಿ ಶಂಕರಪುರ ಮುಖ್ಯಸ್ಥರು ಶಂಕರಪುರ ಸಾಯಿ ಸಾಂತ್ವನ ಮಂದಿರ ಟ್ರಸ್ಟ್‌

‘ಟೆಂಡರ್‌ ಕರೆಯಲಾಗಿದೆ’
ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವ ಸಂಸ್ಥೆಗಳಿಂದ ಟೆಂಡರ್‌ ಕರೆಯಲಾಗಿದೆ. ಮಣಿಪಾಲದಲ್ಲಿ ಖಾಸಗಿಯವರು ಸ್ವಂತ ಖರ್ಚಿನಲ್ಲಿ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಪ್ರಾಣಿಗಳಿಗೆ ಆಶ್ರಯ ಕೇಂದ್ರ ಸ್ಥಾಪಿಸಲು ಜಾಗದ ಕೊರತೆ ಇದೆ. ದಾನಿಗಳು ಜಾಗ ನೀಡಿದರೆ ಕೇಂದ್ರ ಸ್ಥಾಪಿಸಿ ಬೀದಿನಾಯಿಗಳಿಗೆ ಅಲ್ಲಿ ಆಶ್ರಯ ನೀಡಬಹುದು. ಅವುಗಳಿಗೆ ಆಹಾರವನ್ನೂ ನೀಡಿ ಉತ್ತಮ ರೀತಿಯಲ್ಲಿ ನೋಡಿಕೊಳ್ಳಬಹುದು ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ತಿಳಿಸಿದರು.
‘ಜಾನುವಾರುಗಳಿಗೆ ನೀಡುವ ಚುಚ್ಚುಮದ್ದು ಲಭ್ಯ’
2024–25ನೇ ಸಾಲಿನಲ್ಲಿ ಬೀದಿ ನಾಯಿ ಸೇರಿದಂತೆ ಜಾನುವಾರುಗಳಿಗೆ ನೀಡಲು ಅಂದಾಜು 1 ಲಕ್ಷ ಡೋಸ್‌ನಷ್ಟು ರೇಬಿಸ್ ನಿರೋಧಕ ಚುಚ್ಚುಮದ್ದುಗಳು ಬಂದಿವೆ. ಅವುಗಳನ್ನು ಅಗತ್ಯಕ್ಕನುಸಾರವಾಗಿ ನೀಡಲಾಗುವುದು. ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಮರ್ಪಕವಾಗಿ 5 ವರ್ಷಗಳವರೆಗೆ ನಡೆದರೆ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಸಾಧ್ಯ. ಈ ಶಸ್ತ್ರಚಿಕಿತ್ಸೆ ನಡೆಸಬೇಕಾದರೆ ಪ್ರಾಣಿ ಕಲ್ಯಾಣ ಮಂಡಳಿಯಿಂದ ಅಂಗೀಕಾರ ಪಡೆದಿರುವ ಶಸ್ತ್ರಚಿಕಿತ್ಸಕರು ಇರಬೇಕು. ಅವರ ಲಭ್ಯತೆ ಕಡಿಮೆ ಇರುವುದರಿಂದ ಶಸ್ತ್ರಚಿಕಿತ್ಸೆ ಸಮರ್ಪಕವಾಗಿ ನಡೆಯುತ್ತಿಲ್ಲ. ನಾಯಿಗಳನ್ನು ಎಲ್ಲಿಂದ ಹಿಡಿದು ಕೊಂಡೊಯ್ಯುತ್ತಾರೊ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಅದೇ ಜಾಗದಲ್ಲಿ ಬಿಟ್ಟುಬರಬೇಕೆಂಬ ನಿಯಮವಿದೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ರೆಡ್ಡಪ್ಪ ಎಂ.ಸಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.