ADVERTISEMENT

ಉಡುಪಿ: ಮಣ್ಣಿನ ಸತ್ವ ಅರಿಯಲು ಕೃಷಿ ಭೂಮಿಗಿಳಿದ ವಿದ್ಯಾರ್ಥಿಗಳು

ನವೀನ್‌ಕುಮಾರ್‌ ಜಿ.
Published 30 ಜುಲೈ 2024, 5:49 IST
Last Updated 30 ಜುಲೈ 2024, 5:49 IST
ಮಣ್ಣು ಪರೀಕ್ಷೆಗಾಗಿ ವಿದ್ಯಾರ್ಥಿಗಳು ಮಾದರಿ ಸಂಗ್ರಹಿಸಿದರು
ಮಣ್ಣು ಪರೀಕ್ಷೆಗಾಗಿ ವಿದ್ಯಾರ್ಥಿಗಳು ಮಾದರಿ ಸಂಗ್ರಹಿಸಿದರು   

ಉಡುಪಿ: ಬೇಸಾಯ ಮಾಡುವವರು ಕೂಡ ಮಣ್ಣಿನ ಪರೀಕ್ಷೆಗೆ ಉಪೇಕ್ಷೆ ತೋರುವ ಈ ಸಂದರ್ಭದಲ್ಲಿ ಮಣ್ಣಿನ ಸತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಕೃಷಿ ಇಲಾಖೆ ಮಾಡಿದೆ.

ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಚಾರದಲ್ಲಿರುವ ಜವಾಹರ್‌ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಈಚೆಗೆ ಚಾರ ಪರಿಸರದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿದ್ದ ಪ್ರದೇಶಗಳಿಗೆ ತೆರಳಿ ಮಣ್ಣಿನ ಮಾದರಿ ಸಂಗ್ರಹಿಸಿದ್ದಾರೆ.

ಶಾಲೆಯ ಸಮವಸ್ತ್ರ ಧರಿಸಿ, ಪುಸ್ತಕದ ಬ್ಯಾಗನ್ನು ಹೆಗಲಿಗೇರಿಸುವ ಬದಲು ಕೈಗಳಲ್ಲಿ ಸಲಿಕೆ, ಗುದ್ದಲಿ, ಬಕೆಟ್‌ ಹಿಡಿದು ವಿದ್ಯಾರ್ಥಿಗಳು ಕೃಷಿ ಪ್ರದೇಶಗಳಿಗೆ ತೆರಳಿ ಮಣ್ಣು ಅಗೆಯುವುದನ್ನು ನೋಡಿದ ಕೃಷಿಕರಲ್ಲೂ ಅಚ್ಚರಿ ಮೂಡಿತ್ತು.

ADVERTISEMENT

ಚಾರದ ಜವಾಹರ್‌ ನವೋದಯ ವಿದ್ಯಾಲಯದ 67 ವಿದ್ಯಾರ್ಥಿಗಳನ್ನು ಜಿಲ್ಲೆಯಿಂದ ಮಣ್ಣು ಪರೀಕ್ಷೆಯ ಮಾದರಿ ಸಂಗ್ರಹಕ್ಕಾಗಿ ಆಯ್ಕೆ ಮಾಡಲಾಗಿತ್ತು.

ಮಕ್ಕಳ ಕೈಯಲ್ಲೇ ಮಣ್ಣಿನ ಮಾದರಿ ಸಂಗ್ರಹಿಸಿ, ಪರೀಕ್ಷೆ ಮಾಡಿಸುವ ಮೂಲಕ ಅವರಲ್ಲಿ ಮಣ್ಣಿನ ಆರೋಗ್ಯ, ಕೃಷಿಯ ಕುರಿತು ಅರಿವು ಮೂಡಿಸಲಾಗಿದೆ. ತಾವು ಸಂಗ್ರಹಿಸಿರುವ ಮಣ್ಣಿನ ಮಾದರಿಯನ್ನು ವಿದ್ಯಾರ್ಥಿಗಳು ಪರೀಕ್ಷೆಗಾಗಿ ಕೃಷಿ ಇಲಾಖೆಯ ಮಣ್ಣು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಿದ್ದಾರೆ.

ಕೃಷಿ ಆಯುಕ್ತಾಲಯದಿಂದ ಮಣ್ಣು ಪರೀಕ್ಷೆ ನಡೆಸುವ ಕಿಟ್‌ಗಳನ್ನು ಶಾಲೆಗೆ ನೀಡಲಾಗಿದ್ದು, ಇದನ್ನು ಬಳಸಿಯೂ ಮುಂದೆ ವಿದ್ಯಾರ್ಥಿಗಳು ಮಣ್ಣು ಪರೀಕ್ಷೆ ನಡೆಸಲಿದ್ದಾರೆ.

ಕೃಷಿ ಇಲಾಖೆಯ ಉಪ ಯೋಜನಾ ನಿರ್ದೇಶಕ (ಆತ್ಮ) ರಾಜೇಶ್‌ ಡಿ.ಪಿ. ಮತ್ತು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ (ಕೆ.ವಿ.ಕೆ) ವಿಜ್ಞಾನಿ ಜಯಪ್ರಕಾಶ್‌ ಅವರು ಮಣ್ಣು ಪರೀಕ್ಷೆಗೂ ಮೊದಲು ಶಾಲೆಗೆ ತೆರಳಿ ವಿದ್ಯಾರ್ಥಿಗಳಿಗೆ ತರಬೇತಿಯನ್ನೂ ನೀಡಿದ್ದರು.

ಮಣ್ಣಿನ ಪರೀಕ್ಷೆ ನಡೆಸಿದ ಬಳಿಕ ಅದರ ಫಲಿತಾಂಶದ ಆಧಾರದಲ್ಲಿ ರೈತರಿಗೆ, ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಗುತ್ತದೆ. ಅದರ ಅನ್ವಯ ಯಾವಾಗ ಯಾವ ಗೊಬ್ಬರ ಬಳಸಬೇಕು ಎಂಬುದನ್ನು ತಿಳಿಸಲಾಗುತ್ತದೆ.

ಕೃಷಿ ಸಂಜೀವಿನಿಯ ತಾಂತ್ರಿಕ ಸಹಾಯಕರಾದ ಪ್ರಕೃತಿ ಅವರು ನೀಡಿದ ಸಲಹೆಗಳನ್ನು ಪಾಲಿಸಿ ವಿದ್ಯಾರ್ಥಿಗಳು ಮಣ್ಣಿನ ಮಾದರಿ ಸಂಗ್ರಹಿಸಿ ಸಂಭ್ರಮಪಟ್ಟರು.

ಮಣ್ಣಿನ ಪರೀಕ್ಷೆಯಿಂದ ರೈತರಿಗೆ ತಮ್ಮ ಕೃಷಿ ಭೂಮಿಯಲ್ಲಿನ ಲೋಪ ದೋಷಗಳನ್ನು ತಿಳಿದುಕೊಳ್ಳಬಹುದಾಗಿದೆ. ಅದರ ಫಲಿತಾಂಶದ ಆಧಾರದ ಮೇಲೆ ವೈಜ್ಞಾನಿಕವಾಗಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿ, ಬೆಳೆಗಳಿಗೆ ಬೇಕಾಗುವ ಅಗತ್ಯ ಪೋಷಕಾಂಶಗಳನ್ನು ರಸಗೊಬ್ಬರಗಳ ಮೂಲಕ ನೀಡಬಹುದು. ಈ ಮೂಲಕ ಬೆಳೆಗಳನ್ನು ಸರಿಯಾದ ರೀತಿಯಲ್ಲಿ ಬೆಳೆಯಬಹುದು. ಅಲ್ಲದೆ ಮಣ್ಣನ್ನು ಮೌಲ್ಯಮಾಪನ ಮಾಡಿದರೆ ಅದರ ಗುಣಗಳಾದ ನೀರು ಹಿಡಿದಿಟ್ಟುಕೊಳ್ಳುವಿಕೆ, ಸಾಂದ್ರತೆ, ಸ್ವರೂಪ ಇತ್ಯಾದಿಗಳನ್ನೂ ತಿಳಿಯಬಹುದು ಎನ್ನುತ್ತಾರೆ ರಾಜೇಶ್‌ ಡಿ.ಪಿ.

ಬೆಳೆಯ ಮೂಲಕ ನಾವು ಎಷ್ಟು ಪೋಷಕಾಂಶಗಳನ್ನು ಹೊರತೆಗೆಯುತ್ತೇವೋ, ಅಷ್ಟೇ ಪೋಷಕಾಂಶಗಳನ್ನು ಮರಳಿ ಮಣ್ಣಿಗೆ ನೀಡಬೇಕು. ಇಲ್ಲದಿದ್ದರೆ ಫಸಲು ಗುಣಮಟ್ಟ ಕಳೆದುಕೊಳ್ಳುತ್ತದೆ. ಮಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಈಗಲೇ ಮಣ್ಣು, ಬೆಳೆಗಳ ಬಗ್ಗೆ ಅರಿವು ಮೂಡಿಸುವುದರ ಮೂಲಕ ಕೃಷಿಯನ್ನು ಉಳಿಸಬಹುದು ಎನ್ನುತ್ತಾರೆ ಬ್ರಹ್ಮಾವರ ಕೆ.ವಿ.ಕೆ.ಯ ವಿಜ್ಞಾನಿ ಜಯಪ್ರಕಾಶ್‌.

ರೈತರು ಎರಡರಿಂದ ಮೂರು ವರ್ಷಗಳಿಗೊಮ್ಮೆ ತಮ್ಮ ಕೃಷಿ ಜಮೀನಿನ ಮಣ್ಣು ಪರೀಕ್ಷೆ ನಡೆಸಬೇಕು. ಇದರಿಂದ ಮಣ್ಣಿನ ಆರೋಗ್ಯ ಕಾಪಾಡಬಹುದು. ಮತ್ತು ಬೆಳೆಗಳಿಂದ ಗುಣಮಟ್ಟದ ಮತ್ತುಉತ್ತಮ ಇಳುವರಿ ಪಡೆಯಬಹುದು.
-ರಾಜೇಶ್‌ ಡಿ.ಪಿ. ಉಪ ಯೋಜನಾ ನಿರ್ದೇಶಕ (ಆತ್ಮ) ಕೃಷಿ ಇಲಾಖೆ
ಏಕದಳ ಬೆಳೆ ಬೆಳೆದ ಬಳಿಕ ದ್ವಿದಳ ಬೆಳೆ ಬೆಳೆಯಬೇಕು. ಇದರಿಂದ ಮಣ್ಣಿನ ಫಲವತ್ತತೆ ನಷ್ಟವಾಗುವುದಿಲ್ಲ. ಜಿಲ್ಲೆಯಲ್ಲಿ ಭತ್ತದ ಬೆಳೆಯುತ್ತಿರುವುದರಿಂದ ಭತ್ತ ಬೆಳೆದ ಬಳಿಕ ಆ ಗದ್ದೆಗಳಲ್ಲಿ ತರಕಾರಿ ಕೃಷಿ ಮಾಡಬೇಕು.
-ಜಯಪ್ರಕಾಶ್‌, ವಿಜ್ಞಾನಿ ಬ್ರಹ್ಮಾವರದ ಕೆ.ವಿ.ಕೆ
ವಿದ್ಯಾರ್ಥಿಗಳು ಕೆಲವು ಕಡೆಗಳಿಂದ ಮಣ್ಣಿನ ಮಾದರಿ ಸಂಗ್ರಹಿಸಿದ್ದಾರೆ. ಹಲವು ಮಂದಿ ರೈತರ ಮಾಹಿತಿಯನ್ನೂ ಸಂಗ್ರಹಿಸಿದ್ದಾರೆ. ಮಳೆ ಕಡಿಮೆಯಾಗಿ ಮಣ್ಣಿನ ತೇವಾಂಶ ಕಡಿಮೆಯಾದಾಗ ಇನ್ನಷ್ಟು ಪ್ರದೇಶಗಳಿಂದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು.
-ಶ್ರೀಕಾಂತ್‌, ಪ್ರಾಧ್ಯಾಪಕ ಜವಾಹರ್‌ ನವೋದಯ ವಿದ್ಯಾಲಯ ಚಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.