ಭಾರತೀಯ ಜ್ಞಾನಪರಂಪರೆಯ ಬಹುಮುಖಿ ಆಯಾಮಗಳಲ್ಲಿ ಪೂರ್ವ ಮೀಮಾಂಸ, ಉತ್ತರ ಮೀಮಾಂಸ (ವೇದಾಂತ), ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗವೆಂಬ ಷಟ್‍ದರ್ಶನಗಳು, ವೇದಗಳು, ಉಪನಿಷತ್‍ಗಳು, ಮಹಾಭಾರತ, ಭಗವದ್ಗೀತೆ ಹಾಗೂ ಹತ್ತಾರು ಶಾಸ್ತ್ರ, ಪುರಾಣಗಳು ಎಷ್ಟು ಪ್ರಾಮುಖ್ಯತೆಯನ್ನು ಪಡೆದಿವೆಯೋ, ಆಚಾರ್ಯತ್ರಯರ ತ್ರಿಮತಗಳು ಕೂಡ ಭಾವುಕ ಆಸ್ತಿಕರ ಬದುಕಿನಲ್ಲಿ ಅಷ್ಟೇ ಪ್ರಾಮುಖ್ಯತೆ ಪಡೆದಿವೆ.
ದ್ವೈತ, ಅದ್ವೈತ, ವಿಶಿಷ್ಟಾದ್ವೈತವೆಂದು ಕರೆಯಲಾಗುವ ಮೂರು ಮತಗಳಲ್ಲಿ ಒಂದು ಶಾಖೆಯಾಗಿರುವ ಎಂಟುನೂರು ವರ್ಷಗಳ ಮಾಧ್ವತತ್ವಶಾಸ್ತ್ರೀಯ ಪರಂಪರೆಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಜ.18 ರಂದು ನಡೆಯುವ ಪರ್ಯಾಯವೆಂಬ ಧಾರ್ಮಿಕ-ಲೌಕಿಕ ಅಧಿಕಾರ ಹಸ್ತಾಂತರ, ಉಡುಪಿಯ ಇತಿಹಾಸದಲ್ಲಿ ಅನೂಚಾನವಾಗಿ ನಡೆದು ಬಂದಿರುವ ನಿಗದಿತ ದ್ವೈವಾರ್ಷಿಕ ಸಂಭ್ರಮಾಚರಣೆ ಕಳೆದ ಕೆಲವು ದಶಕಗಳಿಂದ ರಾಷ್ಟ್ರೀಯ ಉತ್ಸವವಾಗಿ ಮಹತ್ವ ಪಡೆದಿದೆ.
2024ರ ಜ.18ರಂದು ಈ ಬಾರಿಯ ಪರ್ಯಾಯ ಪೀಠವನ್ನು ಅಲಂಕರಿಸಲಿರುವ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಮ್ಮ ಎರಡು ವರ್ಷಗಳ ನಾಲ್ಕನೆಯ ಪರ್ಯಾಯವನ್ನು ‘ವಿಶ್ವ ಗೀತಾ ಪರ್ಯಾಯ’ವೆಂದು ಘೋಷಿಸಿದ್ದಾರೆ.
ತಮ್ಮ ಪರ್ಯಾಯದ ಅವಧಿಯಲ್ಲಿ ಕೋಟಿ ಗೀತಾ ಲೇಖನ ಯಜ್ಞ ಅರುಣೋದಯದಿಂದ ಸೂರ್ಯಾಸ್ತಮಾನದವರೆಗೆ ಎರಡು ವರ್ಷಗಳ ಕಾಲ ಅಖಂಡ ಗೀತಾ ಪಾರಾಯಣ, ಸುವರ್ಣ ಪಾರ್ಥಸಾರಥಿ ರಥ, ಯಾತ್ರಿಕರಿಗೆ ಕ್ಷೇತ್ರಾವಾಸ ಅಷ್ಟೋತ್ತರ ಭವನ (ವಸತಿ ಸಂಕೀರ್ಣ), ಮತ್ತು ಉಡುಪಿಯ ಕಲ್ಸಂಕದಲ್ಲಿ ಶ್ರೀಕೃಷ್ಣನ ಮೂರ್ತಿ ಹಿಡಿದುಕೊಂಡಿರುವ ಮಧ್ವಮತ ಸ್ಥಾಪಕ ಶ್ರೀ ಮಧ್ವಾಚಾರ್ಯರ ಪ್ರತಿಮೆ ಇರುವ ಸ್ವಾಗತಂ ಕೃಷ್ಣ ಮಹಾದ್ವಾರದ ನಿರ್ಮಾಣವೆಂಬ ಐದು ಪ್ರಮುಖ ಯೋಜನೆಗಳ ಅನುಷ್ಠಾನದ ಸಂಕಲ್ಪ ಕೈಗೊಂಡಿರುವ ಸ್ವಾಮೀಜಿಯವರ ಪರ್ಯಾಯ ಅಂತರರಾಷ್ಟ್ರೀಯ ಮಟ್ಟದಲ್ಲೂ ಜನಕೋಟಿ ಸಂಭ್ರಮಿಸಬೇಕಾದ ‘ಗ್ಲೋಬಲ್ ಪರ್ಯಾಯ’; ವಿಶ್ವಗೀತಾ ಪರ್ಯಾಯವೆಂದು ಹೇಳಲು ಹಲವು ಕಾರಣಗಳಿವೆ.
ವಿಶ್ವ ಸಂಸ್ಥೆಯಲ್ಲಿ ಭಾಷಣ
ಕೋಟಿ ಗೀತಾ ಲೇಖನ ಯಜ್ಞದ ಮೂಲಕ ಭಗವದ್ಗೀತೆಯ ತಿರುಳನ್ನು ವಿಶ್ವಮಟ್ಟದಲ್ಲಿ ಜನಸಾಮಾನ್ಯರಿಗೆ ತಿಳಿಸುವ ಶ್ಲಾಘನೀಯ ಹೆಜ್ಜೆ ಇಟ್ಟಿರುವ ಸುಗುಣೇಂದ್ರ ತೀರ್ಥರು ಎಂಟು ಶತಮಾನಗಳ ಮಾಧ್ವಪರಂಪರೆಯಲ್ಲಿ, ವಿಶ್ವದ ಒಂದು ಅತ್ಯಂತ ಉನ್ನತ ವೇದಿಕೆಯಾಗಿರುವ ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆಯನ್ನು ಖಂಡಿಸಿ, ಅದರ ನಿವಾರಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿ 2015ರ ಏ.22 ರಂದು ಭಾಷಣ ಮಾಡುವ ಗೌರವ ಪಡೆದ ಮೊತ್ತ ಮೊದಲ ಮಾಧ್ವಯತಿ.
ಸಾಗರೋಲ್ಲಂಘನ ಮಾಡಿದ ವೈದಿಕರಿಗೆ ಸಾಮಾಜಿಕ ಬಹಿಷ್ಕಾರ ವಿಧಿಸುವ ಸಂಪ್ರದಾಯವಿದ್ದ ಈ ದೇಶದಲ್ಲಿ ಸಾಗರೋಲ್ಲಂಘನೆ ಮಾಡಿ ವಿಶ್ವದಾದ್ಯಂತ 108 ಕೃಷ್ಣ ದೇವಾಲಯಗಳನ್ನು ನಿರ್ಮಿಸಿ, ಅಂದು ಸ್ವಾಮಿ ವಿವೇಕಾನಂದರು ಮಾಡಿದಂತೆ, ಪ್ರಪಂಚದ ಎಲ್ಲೆಡೆ ಹಿಂದೂ ಧರ್ಮದ ಸಾರವನ್ನು ಪ್ರಸಾರ ಮಾಡಲು ಕಂಕಣಬದ್ಧರಾಗಿರುವ ಸುಗುಣೇಂದ್ರ ತೀರ್ಥರು, ಒಂದು ವಲಯದ ಪಾರಂಪರಿಕ ಪ್ರವಾಹಕ್ಕೆ ಎದುರಾಗಿ ಈಜುವ ಸಾಹಸ ಮಾಡಿ ಯಶಸ್ವಿಯಾಗಿರುವವರು.
ಪರಿಣಾಮವಾಗಿ ಈಗಾಗಲೇ ಅವರು ಜಾಗತಿಕ ಮಟ್ಟದಲ್ಲಿ ಆಸ್ಟ್ರೇಲಿಯಾದ ಸಿಡ್ನಿ ಹಾಗೂ ಮೆಲ್ಬೋರ್ನ್‍ನಲ್ಲಿ, ಇಂಗ್ಲೆಂಡ್‌ನ ಲಂಡನ್‍ನಲ್ಲಿ, ಕೆನಡಾದ ಟೊರೊಂಟೋದಲ್ಲಿ ಹಾಗೂ ಅಮೆರಿಕಾದ ಎಡಿಸನ್, ಯಾಲೆ, ಅಟ್ಲಾಂಟ, ಹ್ಯೂಸ್ಟನ್, ಡಲಾಸ್, ಫೀನಿಕ್ಸ್, ಲಾಸ್ ಏಂಜಲೀಸ್, ಸ್ಯಾನ್ ಹೋಸ್, ಸಿಯಾಟಲ್ ಮೊದಲಾದ ನಗರಗಳಲ್ಲಿ ಶ್ರೀಕೃಷ್ಣ ವೃಂದಾವನ ಸರಣಿ ಮಂದಿರಗಳನ್ನು ಸ್ಥಾಪಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಇಷ್ಟೊಂದು ಕೃಷ್ಣ ದೇವಾಲಯಗಳನ್ನು ನಿರ್ಮಿಸಿ ಜ್ಞಾನಸತ್ರ ನಡೆಸುತ್ತಿರುವ ಇನ್ನೊಬ್ಬ ಮಾಧ್ವಯತಿ ಬೇರೆ ಇಲ್ಲ. ಅಲ್ಲದೆ, ಅಮೆರಿಕಾದ ಮಿನಿಯಾಪೊಲಿಸ್, ಓರ್ಲಾಂಡೊ, ಬೇಕರ್ಸ್ ಫೀಲ್ಡ್‍ಗಳಲ್ಲಿ ಸ್ವಾಮೀಜಿ ಸ್ಥಳೀಯ ಹಿಂದೂ ಮಂದಿರಗಳ ಹಾಗೂ ಗೋಶಾಲೆಗಳ ಶಿಲಾನ್ಯಾಸ, ಉದ್ಘಾಟನೆಗಳನ್ನೂ ನೆರವೇರಿಸಿದ್ದಾರೆ.
ಇವೆಲ್ಲದರ ಜೊತೆಗೆ ಹ್ಯೂಸ್ಟನ್‍ನಲ್ಲಿ ಮಧ್ವಾಚಾರ್ಯರ ಬೃಹತ್ ಪ್ರತಿಮೆ ಸ್ಥಾಪಿಸುತ್ತಿದ್ದಾರೆ. ಆಸ್ಟಿನ್‍ನಲ್ಲಿಯೂ ನೂತನ ಶ್ರೀಕೃಷ್ಣವೃಂದಾವನ ಮೂಡುತ್ತಿದೆ. ಮೆಲ್ಬೋರ್ನ್ ಶ್ರೀಕೃಷ್ಣ ವೃಂದಾವನ ಶಾಖೆ, ಅಲ್ಲಿ ಸಂಭವಿಸಿದ ಕಾಳ್ಗಿಚ್ಚು ಹಾಗೂ ವಿಶ್ವವನ್ನೇ ಕಾಡಿದ ಕೊರೊನಾ ಸಂದರ್ಭದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿದ ಆಸ್ಟೇಲಿಯಾ ಸರ್ಕಾರ ಮೆಲ್ಬೊರ್ನ್ ಶಾಖೆಯ ಅಭಿವೃದ್ಧಿಗೆ ನೆರವು ನೀಡಿದೆ.
ಇನ್ನೊಂದೆಡೆ, ಸುಗುಣೇಂದ್ರ ತೀರ್ಥರು ವಿಶ್ವ ಸಂಸ್ಥೆಯ ಸಹಸಂಸ್ಥೆಯಾದ ‘ವಿಶ್ವಶಾಂತಿ ಧರ್ಮ ಸಂಸ್ಥೆ’ಯ ಮೂರು ಬಾರಿ ಜಾಗತಿಕ ಅಧ್ಯಕ್ಷರಾಗಿ ಝಜಕಿಸ್ತಾನ್, ಕೀನ್ಯಾ, ಟರ್ಕಿ, ಫಿಲಿಫಿನ್ಸ್, ಜಪಾನ್, ತೈವಾನ್, ಅಮ್ಮಾನ್, ವಿಯೆನ್ನಾ, ನ್ಯೂಯಾರ್ಕ್, ವ್ಯಾಟಿಕನ್, ಸಾಲ್ಟ್‌ಲೇಕ್ ಸಿಟಿ, ಮ್ಯಾಡ್ರಿಡ್, ಅಬುದಾಬಿ, ಸಿಂಗಾಪುರ, ಮಾಸ್ಕೊ, ಕ್ಯೂಟೋ, ಹಿರೋಶಿಮಾ ಮೊದಲಾದ ಕಡೆ ಜಾಗತಿಕ ಶಾಂತಿ ಸಮ್ಮೇಳನಗಳ ನೇತೃತ್ವ ವಹಿಸಿದ್ದಾರೆ.
28 ದೇಶಗಳಲ್ಲಿ ಪ್ರವಾಸ
ಕ್ರೈಸ್ತ ಧರ್ಮದ ಮಹಾಗುರುಗಳಾದ ಪೋಪ್ ಅವರ ಎರಡು ಬಾರಿಯ ಆಹ್ವಾನದ ಮೇರೆಗೆ ರೋಮ್‍ನ ವ್ಯಾಟಿಕನ್ ಸಿಟಿಗೆ ಭೇಟಿನೀಡಿ, ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಸೇರಿದಂತೆ ಜಾಗತಿಕ ನಾಯಕರ ಜೊತೆ ವಿಶ್ವ ಪರಿಸರ ಸಂರಕ್ಷಣೆ, ಪ್ಯಾರಿಸ್ ಒಪ್ಪಂದ ಮೊದಲಾದ ಹತ್ತು ಹಲವು ಮಹಾಯೋಜನೆಗಳ ಕುರಿತು ಚರ್ಚಿಸಿ ಸಹಭಾಗಿಗಳಾಗಿದ್ದಾರೆ.
ದುಬೈ, ಮಸ್ಕತ್, ಶಾರ್ಜಾ, ಬಹರೇನ್, ಜರ್ಮನಿ, ನ್ಯೂಜಿಲೆಡ್ ಮೊದಲಾದ 28 ದೇಶಗಳಲ್ಲಿ ಪ್ರವಾಸ ಮಾಡಿ ಧಾರ್ಮಿಕ ಜಾಗೃತಿ ಮೂಡಿಸಿದ ವಿಶೇಷ ಕೀರ್ತಿ ಸುಗುಣೇಂದ್ರ ತೀರ್ಥರಿಗೆ ಸಲ್ಲುತ್ತದೆ.
ಜಾಗತಿಕ ಪ್ರಶಸ್ತಿ
ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಜಾಗತಿಕ ಶಾಂತಿ ರಾಯಭಾರಿ ಪ್ರಶಸ್ತಿಗೆ ಆಹ್ವಾನಿತರಾದ ಹಾಗೂ ಅಮೇರಿಕದ ಅರಿಝೋನಾ ರಾಜ್ಯ ಸರ್ಕಾರದಿಂದ ಪ್ರತಿವರ್ಷ ಅ.8ರಂದು 'ಸುಗುಣೇಂದ್ರ ತೀರ್ಥ ಡೇ' ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಓಕ್ಲಹೋಮಾ ಸಿಟಿ ಕೀ ಸಮರ್ಪಣೆಯ ಗೌರವವನ್ನು ಸ್ವೀಕರಿಸಿರುವ ಶ್ರೀಗಳು ಜಪಾನಿನ ನೊಬೆಲ್ ಶಾಂತಿ ಪ್ರಶಸ್ತಿಯಂತಿರುವ ಒಂದು ಕೋಟಿ ರೂಪಾಯಿ ಮೊತ್ತದ ನಿವಾನೋ ಶಾಂತಿ ಪ್ರಶಸ್ತಿಯ ಆಯ್ಕೆ ಕರ್ತರಾಗಿದ್ದಾರೆ.
ವಾಷಿಂಗ್ಟನ್‌ನ ವೈಟ್‍ಹೌಸ್, ಆಸ್ಟ್ರೇಲಿಯಾ ಪಾರ್ಲಿಮೆಂಟ್ ಸಮುಚ್ಛಯ ಮೊದಲಾದೆಡೆ ವಿಶ್ವಶಾಂತಿಯ ರಾಯಭಾರಿಯಾಗಿ ಭಾರತವನ್ನು ಪ್ರತಿನಿಧಿಸುತ್ತ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದ್ದಾರೆ. ಪೂನಾದಲ್ಲಿ ಜಾಗತಿಕ ಧಾರ್ಮಿಕ ನಾಯಕರ ಸಮ್ಮೇಳನ, ನ್ಯೂಜೆರ್ಸಿಯಲ್ಲಿ ಜಗತ್ತಿನ ಪೂರ್ವ-ಪಶ್ಚಿಮ ವಿದ್ವಾಂಸರ ಸಮ್ಮೇಳನ, ಅಮೇರಿಕಾದ ಅನೇಕ ಕಡೆ 'ಅಕ್ಕ' ಸಮ್ಮೇಳನಗಳ ಉದ್ಘಾಟನೆ ಹಾಗೂ ಸಿಂಗಾಪುರದಲ್ಲಿ ಅಂತರ ರಾಷ್ಟ್ರೀಯ ಭಗವದ್ಗೀತಾ ಸಮ್ಮೇಳನದ ಉದ್ಘಾಟನೆಯ ಮೂಲಕ ವಿಶ್ವಾದಾದ್ಯಂತ ಭಾರತದ ಸನಾತನ ಧರ್ಮದ ಪ್ರಸಾರ ಮಾಡಿದ್ದಾರೆ.
ಹಾರ್ವರ್ಡ್, ಆಕ್ಸ್‌ಫರ್ಡ್, ಪ್ರಿನ್ಸ್‍ಟನ್, ರಡ್ಗರ್ಸ್, ಆರಿಜೋನಾ, ಸ್ಟಾನ್‍ಫರ್ಡ್ ಮೊದಲಾದ ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸನಾತನಧರ್ಮದ ಬಗ್ಗೆ ಸಂವಾದ ನಡೆಸಿರುವ ಸ್ವಾಮೀಜಿ ಅಮೆರಿಕದ ಹಿಂದಿನ ಅಧ್ಯಕ್ಷ ಜಾರ್ಜ್‍ಬುಷ್ ದಂಪತಿ ಜೊತೆ ಭಾರತೀಯ ಸಾಂಸ್ಕೃತಿಕ ಸೌಹಾರ್ದ ಸಂವಾದವನ್ನು ನಡೆಸಿದ್ದಾರೆ. ಇರಾಕ್ ಸಂಘರ್ಷ ಹಾಗೂ ಶ್ರೀಲಂಕಾ-ಎಲ್‌ಟಿಟಿಇ ಸಂಘರ್ಷದ ಪರಿಹಾರ ಸಮಾಲೋಚನಾ ಸಭೆಯಲ್ಲಿಯೂ ಭಾಗವಹಿಸಿದ್ದಾರೆ.
ಜ.18 ರ ಪರ್ಯಾಯ ಸಮಾರಂಭಕ್ಕಾಗಿ ನಾಡಿನ ಜನತೆ ಕುತೂಹಲದಿಂದ ಎದುರು ನೋಡುತ್ತಿದೆ. ಸುಗುಣೇಂದ್ರ ತೀರ್ಥರನ್ನು ‘ಅಂದು ನರೇಂದ್ರ, ಇಂದು ಸುಗುಣೇಂದ್ರ’ ಎಂದು ದೇಶ ಕೊಂಡಾಡುವಂತಾಗಲಿ. ಅವರ ಪರ್ಯಾಯ ನಿಜವಾದ ಅರ್ಥದಲ್ಲಿ ವಿಶ್ವ ಪರ್ಯಾಯವಾಗಲಿ.
ಇಂದು ಅಸಹನೆ, ಅಂತರ್ ಧಾರ್ಮಿಕ ಕಲಹ, ಅಶಾಂತಿ, ಅರ್ಥಹೀನ ಯುದ್ಧ, ಅಸಂಗತ ಸಂಘರ್ಷಗಳಿಂದ ಜಗತ್ತು ನಲುಗುತ್ತಿದೆ. ಇಂತಹ ಸ್ಥಿತಿಯಲ್ಲಿ ‘ಋತಮುಗ್ರಂ’ (ವಿಶ್ವವ್ಯವಸ್ಥೆ ಉಗ್ರ / ಕ್ರೂರವಾಗಿದೆ) ಎಂಬ ಉಪನಿಷತ್ ವಾಕ್ಯ ಆದಷ್ಟು ಕಡಿಮೆ ನಿಜವಾಗುವಂತೆ ಮತ್ತು ಪ್ರಪಂಚ ಆದಷ್ಟು ಹೆಚ್ಚು ಕರುಣಾಳುವಾಗುವಂತೆ ಜಾಗತಿಕ ಮಟ್ಟದಲ್ಲಿ ಧಾರ್ಮಿಕ ಸಮತೋಲನ, ಆಧ್ಯಾತ್ಮಿಕ ಸಾಮರಸ್ಯ ಸ್ಥಾಪಿಸುವ ನಿಟ್ಟಿನಲ್ಲಿ ಸುಗುಣೇಂದ್ರತೀರ್ಥರು ಗ್ಲೋಬಲ್ ಗುರುವಾಗಿ ಮಹತ್ವದ ಪಾತ್ರವಹಿಸುವಂತಾಗಲಿ ಎಂದು ಹಾರೈಸೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.