ADVERTISEMENT

ಭಗವದ್ಗೀತೆ ಮೋಕ್ಷ ಶಾಸ್ತ್ರವಲ್ಲ, ವಿಶ್ವ ಗ್ರಂಥ: ಸುಗುಣೇಂದ್ರ ತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 4:03 IST
Last Updated 25 ಅಕ್ಟೋಬರ್ 2024, 4:03 IST
ಭಗವದ್ಗೀತೆ: ಸಾರ್ವತ್ರಿಕ ತತ್ವಶಾಸ್ತ್ರ ಗೋಷ್ಠಿಯಲ್ಲಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿದರು
ಭಗವದ್ಗೀತೆ: ಸಾರ್ವತ್ರಿಕ ತತ್ವಶಾಸ್ತ್ರ ಗೋಷ್ಠಿಯಲ್ಲಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿದರು   

ಉಡುಪಿ: ಲೌಕಿಕ, ಪಾರಮಾರ್ಥಿಕ ಸತ್ಯವನ್ನು ಪ್ರತಿಪಾದಿಸುವ ಭಗವದ್ಗೀತೆ, ಸರ್ವಕಾಲದಲ್ಲೂ, ಸರ್ವವ್ಯಾಪಿಯಾಗಿರುವ ಏಕೈಕ ವಿಶ್ವಗ್ರಂಥವಾಗಿದೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಪ್ರಾಚ್ಯವಿದ್ಯಾ ಸಮ್ಮೇಳನದ ಮೊದಲ ಗೋಷ್ಠಿ ‘ಭಗವದ್ಗೀತೆ: ಸಾರ್ವತ್ರಿಕ ತತ್ವಶಾಸ್ತ್ರ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಗವದ್ಗೀತೆ ಕೇವಲ ಮೋಕ್ಷ ಶಾಸ್ತ್ರವಲ್ಲ, ಲೌಕಿಕ, ಪಾರ ಲೌಕಿಕ, ಸರ್ವ ವೇದಗಳನ್ನು ಒಳಗೊಂಡಿರುವ ಗ್ರಂಥ. ವೈದ್ಯರು, ಎಂಜಿನಿಯರ್‌ಗಳು, ಪ್ರಾಧ್ಯಾಪಕರು ಹೀಗೆ ಎಲ್ಲ ಕ್ಷೇತ್ರಗಳಲ್ಲಿರುವವರು, ಜನ ಸಾಮಾನ್ಯರ ಸಮಸ್ಯೆಗಳಿಗೆ ಗೀತೆಯಲ್ಲಿ ಪರಿಹಾರ ಕಾಣಲು ಸಾಧ್ಯ. ಜೀವನ ಮೌಲ್ಯಗಳನ್ನು ಬೋಧಿಸುವ ಗೀತೆ, ಒಬ್ಬೊಬ್ಬರನ್ನೂ ಒಂದೊಂದು ವಿಧದಲ್ಲಿ ಸಂತೈಸುತ್ತದೆ. ಕೋಟಿ ಗೀತಾ ಯಜ್ಞದಲ್ಲಿ ಭಾಗವಹಿಸಿರುವವರ ಅನುಭವಗಳು ಇದನ್ನು ಸಾಕ್ಷೀಕರಿಸಿವೆ. ಗೀತೆಯ ಬಗೆಗಿನ ವ್ಯಾಖ್ಯಾನ, ಚಿಂತನ–ಮಂಥನ ನಿರಂತರವಾಗಿ ನಡೆಯಬೇಕು’ ಎಂದು ಆಶಿಸಿದರು.

ಆಸ್ಟ್ರೇಲಿಯದ ವಸುದೇವ ಕ್ರಿಯಾ ಯೋಗದ ರಾಜೇಂದ್ರ ಯೆಂಕಣ್ಣಮೂಲೆ ಮಾತನಾಡಿ, ‘ಎಲ್ಲ ಧರ್ಮಗ್ರಂಥಗಳು ಹಾಗೂ ಮಹಾಭಾರತವನ್ನು ತಕ್ಕಡಿಯಲ್ಲಿಟ್ಟು ತೂಗಿದರೆ, ವಿಷ್ಣು ಸಹಸ್ರನಾಮ ಮತ್ತು ಭಗವದ್ಗೀತೆ ಒಳಗೊಂಡಿರುವ ಮಹಾಭಾರತದ ತೂಕವೇ ಹೆಚ್ಚು. ಗೀತೆಯನ್ನು ಪುನರಪಿ ಉಚ್ಚರಿಸಿದರೆ, ತ್ಯಾಗದ ಪದ ಹೊರಹೊಮ್ಮುತ್ತದೆ. ಅಂದರೆ, ಗೀತೆಯ ಸಂದೇಶ ಕೂಡ ತ್ಯಾಗದ ತಾತ್ಪರ್ಯವೇ ಆಗಿದೆ. ಧರ್ಮ ಮಾರ್ಗದ ಕಾಯಕದಲ್ಲಿ ನೈತಿಕತೆಯ ಪ್ರಜ್ಞೆಯನ್ನು ಗೀತೆ ಜಾಗೃತಗೊಳಿಸುತ್ತದೆ. ಗೀತಾ ಪಠಣದ ಅಭ್ಯಾಸದಿಂದ ಸಕಾರಾತ್ಮಕ ಚಿಂತನೆ ಆವಿರ್ಭವಿಸುತ್ತದೆ’ ಎಂದರು.

ADVERTISEMENT

ವಿಚಾರ ಮಂಡಿಸಿದ ಅಮೆರಿಕದ ಸಿಸಿಇ ಸ್ಟರ್ಲಿಂಗ್ ಯುನಿರ್ವಸಲ್ ಗ್ರೂಪ್‌ನ ಪೂರ್ಣಪ್ರಸಾದ್ ಅವರು, ‘ಕೃಷ್ಣಾನುಸಂಧಾನವು ಅತ್ಯಂತ ವೈಜ್ಞಾನಿಕವಾಗಿದೆ. ಕೃಷ್ಣನು ಜಗತ್ತಿನ ಮೊದಲ ಮನಃಶಾಸ್ತ್ರಜ್ಞ ಮತ್ತು ಅರ್ಜುನನು ಅವನ ಮೊದಲ ಮನೋರೋಗಿ. ಒಳಗಣ್ಣಿನಿಂದ ಅರ್ಜುನನ ಮನಸ್ಸನ್ನು ಅರ್ಥೈಸಿಕೊಂಡ ಕೃಷ್ಣನು ಗೀತೋಪದೇಶದ ಮೂಲಕ ಮನಃಪರಿವರ್ತನೆ ಮಾಡಿದ ಯಶಸ್ವಿ ಮನಃಶಾಸ್ತ್ರಜ್ಞ. ಜಗತ್ತಿನ ಏಳು ಬಿಲಿಯನ್ ಜನರಲ್ಲೂ ಅರ್ಜುನನಿದ್ದಾನೆ. ಅರ್ಜುನ ಆಂತರಿಕ ಸಂಘರ್ಷಗಳು ನಮ್ಮೊಳಗೂ ನಡೆಯುತ್ತವೆ. ಗೀತೆ ಇವೆಲ್ಲಕ್ಕೂ ಉತ್ತರ ಒದಗಿಸುತ್ತದೆ’ ಎಂದರು.

ಭಗವದ್ಗೀತೆಯಲ್ಲಿ ಭಾಗವತ ತತ್ವ ಅಡಕವಾಗಿರುವುದನ್ನು ಉದಾಹರಣೆಯೊಂದಿಗೆ ವಿವರಿಸಿದ ಪುತ್ತಿಗೆ ಮಠದ ಅಮೆರಿಕ ಶಾಖೆಯ ಆಸ್ಥಾನ ವಿದ್ವಾಂಸ ಕೇಶವ ರಾವ್ ತಾಡಿಪತ್ರಿ, ಭಕ್ತಿ ಮಾರ್ಗ ಅನುಸರಿಸಿ ಇಂದ್ರಿಯ ನಿಗ್ರಹ, ಮನಸ್ಸಿನ ನಿಯಂತ್ರಣದ ಮೂಲಕ ಪರತತ್ವ ಪಡೆಯಲು ಸಾಧ್ಯ. ಭಗವದ್ಗೀತೆ ಇದನ್ನೇ ಉಪದೇಶಿಸುತ್ತದೆ ಎಂದರು.

ನಿವೃತ್ತ ಪ್ರಾಂಶುಪಾಲ ಸುಧೀರ್‌ ರಾಜ್ ಕೆ ಮಾತನಾಡಿ, ಜ್ಞಾನ ಖಣಿಯಾಗಿರುವ ಕೃಷ್ಣ ಕಾಲಾತೀತ ನಾಯಕ. ಹೃದಯಕ್ಕೆ ಹಿತ ನೀಡುವ ಕೃಷ್ಣನ ಭಾಷೆಯೇ ಸಂಗೀತದಂತೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.