ಉಡುಪಿ: ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡಬೇಕು ಎಂಬ ಉದ್ದೇಶದಿಂದ ಆರಂಭವಾದ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಕುರಿತು ಕಾಂಗ್ರೆಸ್ ಪಕ್ಷವು ವಿನಾಕಾರಣ ವಿವಾದಗಳನ್ನು ಹುಟ್ಟು ಹಾಕಿ, ಪ್ರವಾಸೋದ್ಯಮದ ಕಗ್ಗೊಲೆ ನಡೆಸುತ್ತಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆರೋಪಿಸಿದರು.
ಪರಶುರಾಮ ಮೂರ್ತಿಯ ಕುರಿತು ಸುಳ್ಳಿನ ಮೆರವಣಿಗೆ ನಡೆಯುತ್ತಿದೆ. ಕಾರ್ಕಳದ ಮೂಲಕ ಹಾದುಹೋಗುವ ದಕ್ಷಿಣ ಕನ್ನಡ ಮತ್ತು ಉಡುಪಿಯ ಜನರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವ ಉದ್ದೇಶದಿಂದ ಮೂರ್ತಿ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
₹11 ಕೋಟಿಯ ಯೋಜನೆಯನ್ನು ಪರಶುರಾಮ ಥೀಂ ಪಾರ್ಕ್‌ಗಾಗಿ ಸಿದ್ಧಪಡಿಸಲಾಗಿತ್ತು. ಅದಕ್ಕೆ ಸರ್ಕಾರ ಬಿಡುಗಡೆ ಮಾಡಿದ್ದು ₹6.75 ಕೋಟಿ ಮಾತ್ರ. ಇನ್ನು ನಾಲ್ಕೂವರೆ ಕೋಟಿ ಹಣ ಮಂಜೂರು ಆಗಿದ್ದರೂ ಬಿಡುಗಡೆಯಾಗಿರಲಿಲ್ಲ ಎಂದು ವಿವರಿಸಿದರು.
ಮೂರ್ತಿ ನಿರ್ಮಾಣದ ಬಳಿಕ ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳು ಮುಗಿದ ನಂತರ ಪರಾಜಿತ ಅಭ್ಯರ್ಥಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು, ಸೋಲಿನ ಹತಾಶೆಯಿಂದ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಪ್ರತಿ ಸಲವೂ ಬೇರೆ ಬೇರೆ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ ಎಂದರು.
ಪರಶುರಾಮ ಮೂರ್ತಿಯ ಕಾಮಗಾರಿ ಮುಂದುವರಿಸಬೇಕೆಂದು ನ್ಯಾಯಾಲಯವು ಸೂಚಿಸಿದಾಗ, ಕಾಮಗಾರಿ ಸ್ಥಳಕ್ಕೆ ತೆರಳುವ ರಸ್ತೆಗೆ ಮಣ್ಣು ಹಾಕಿ ಮುಚ್ಚಲಾಗಿದೆ. ಈ ಕುರಿತು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಶಾಸಕರು ದೂರಿದರು.
ಪರಶುರಾಮ ಮೂರ್ತಿ ಪೈಬರ್ ಅಲ್ಲ ಕಂಚಿನದ್ದು ಎಂದು ನ್ಯಾಯಾಲಯವೇ ಹೇಳಿದೆ ಎಂದರು.
ಉದಯ್ ಕುಮಾರ್ ಶೆಟ್ಟಿ ಅವರು ಈಗ ಶಿಲ್ಪಿಯ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಶಿಲ್ಪಿಯ ಗೋದಾಮಿಗೆ ಮಹಜರು ಮಾಡಲು ಹೋದಾಗ, ರಸ್ತೆಗೆ ಮಣ್ಣು ಹಾಕಿ ಮುಚ್ಚಿದಾಗ ಈ ಅನುಕಂಪ ಎಲ್ಲಿ ಹೋಗಿತ್ತು ಎಂದೂ ಪ್ರಶ್ನಿಸಿದರು.
ಶಿಲ್ಪಿ ಕೃಷ್ಣ ನಾಯ್ಕ ಅವರಿಗೆ ಕೊಟ್ಟ ₹1 ಕೋಟಿ ಎಲ್ಲಿ ಹೋಯಿತು ಎಂದು ಪ್ರಶ್ನಿಸುತ್ತಿದ್ದೀರಿ. ನಿಮ್ಮದೇ ಸರ್ಕಾರ ಇದೆ ತನಿಖೆ ಮಾಡಿ ಕಂಡು ಹಿಡಿಯಿರಿ ಎಂದ ಶಾಸಕರು, ಈ ಪ್ರಕರಣದ ತನಿಖೆಯ ಪ್ರಶ್ನಾವಳಿಗಳನ್ನು ಕಾಂಗ್ರೆಸ್ ಕಚೇರಿಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಿದರು.
ಥೀಮ್ ಪಾರ್ಕ್ ಎಂದರೆ ಅದು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ್ದು, ಅಲ್ಲಿ ಧಾರ್ಮಿಕತೆಯ ವಿಚಾರ ಬರುವುದಿಲ್ಲ. ಆದರೆ ಉದಯ್ ಕುಮಾರ್ ಶೆಟ್ಟಿ ಅವರು ಈ ವಿಚಾರಕ್ಕೆ ಧಾರ್ಮಿಕತೆಯ ಬಣ್ಣ ಹಚ್ಚುತ್ತಿದ್ದಾರೆ ಎಂದರು.
ಅಭಿವೃದ್ಧಿ ವಿರೋಧಿ ಟೂಲ್‌ಕಿಟ್ ಹೊಂದಿರುವ ಬಗ್ಗೆ ಕಾರ್ಕಳದ ಜನರು ಜಾಗೃತರಾಗಬೇಕು. ಪರಶುರಾಮ ಮೂರ್ತಿಯ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದರು.
ಮೂರು ಕ್ಷೇತ್ರಗಳಲ್ಲೂ ಗೆಲುವು’
ಸಂಡೂರು ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದೆ. ಉಪ ಚುನಾವಣೆ ನಡೆಯಲಿರುವ ಮೂರು ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಉಪಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಆಂತರಿಕ ಬೇಗುದಿ ಹೊರಬರಲಿದೆ. ಇದೇ 23ರ ನಂತರ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಾರೆ. ಹೊಸ ಮುಖ್ಯಮಂತ್ರಿಯೊಂದಿಗೆ ಬೆಳಗಾವಿ ಅಧಿವೇಶನ ನಡೆಯಲಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು. ಮತ್ತೆ ಸದ್ದು ಮಾಡುತ್ತಿರುವ ನಕ್ಸಲ್ ಚಟುವಟಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕರು ಕಾಂಗ್ರೆಸ್ ನಗರ ನಕ್ಸಲರಿಗೆ ದೊಡ್ಡ ಪ್ರಮಾಣದ ಬೆಂಬಲ ನೀಡಿದೆ. ನಗರ ನಕ್ಸಲರನ್ನು ಒಟ್ಟು ಸೇರಿಸಿ ಸರ್ಕಾರ ಸಭೆ ಮಾಡುತ್ತಿದೆ. ಈಗ ಕಸ್ತೂರಿ ರಂಗನ್ ವಿಚಾರ ಇಟ್ಟುಕೊಂಡು ನಕ್ಸಲರು ಮತ್ತೊಮ್ಮೆ ಬೆಳಕಿಗೆ ಬಂದಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.