ಪಡುಬಿದ್ರಿ: ಅಂಗವಿಕಲ ಬಾಲಕ ಆರೋಗ್ಯ ಕೀರ್ತನ್ ಮನೆಗೆ ಸಿಬ್ಬಂದಿಯೊಡನೆ ತೆರಳಿ ಆಧಾರ್‌ಕಾರ್ಡ್ ಮಾಡಿಸಲು ನೆರವಾಗಿ ಮಾನವೀಯತೆ ಮೆರೆದ ತಹಶೀಲ್ದಾರ್ ಡಾ.ಪ್ರತಿಭಾ ಆರ್. ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಪಲಿಮಾರು ಗ್ರಾಮದ ಅಡ್ವೆ ಬಳಿಯ ಗುರುಸ್ವಾಮಿ, ಮಮತಾ ದಂಪತಿಯ 14 ವರ್ಷ ವಯಸ್ಸಿನ ಮಗ ಆರೋಗ್ಯ ಕೀರ್ತನ್ ನೋಡಲು 4 ವರ್ಷ ವಯಸ್ಸಿನ ಮಗುವಿನ ದೇಹದಾರ್ಢ್ಯ ಹೊಂದಿದ್ದಾನೆ. ಕೈಕಾಲು ಸ್ವಾಧೀನವಿಲ್ಲದ ಆತ ಹಾಸಿಗೆಯಲ್ಲೇ ಮಲಗಿದ್ದು, ತಾಯಿಯೇ ಎಲ್ಲ ಸೇವೆ ಮಾಡಬೇಕಾದ ಪರಿಸ್ಥಿತಿ. ಗುರುಸ್ವಾಮಿ ಅವರು ಪೆಟ್ರೋಲ್ ಬಂಕೊಂದರಲ್ಲಿ ರಾತ್ರಿ ಪಾಳಿಯಲ್ಲಿ ವಾಚ್‌ಮನ್ ಕೆಲಸ ಮಾಡುತ್ತಿದ್ದಾರೆ. ಎಲ್‌ಎಲ್‌ಬಿ ಶಿಕ್ಷಣ ಪಡೆದಿರುವ ಮಮತಾ ಗೃಹಿಣಿಯಾಗಿ ಮಗನಿಗಾಗಿ ಬದುಕು ಮೀಸಲಿಟ್ಟಿದ್ದಾರೆ. ದಂಪತಿಗಳಿಗೆ ಕ್ರಿಷ್ಮಾ ಎಂಬ 9 ವರ್ಷದ ಮಗಳಿದ್ದಾಳೆ.
6 ವರ್ಷಗಳಿಂದ ಆರೋಗ್ಯ ಕೀರ್ತನ್‌ಗೆ ಆಧಾರ್ ಮಾಡಿಸಲು ಪ್ರಯತ್ನಿಸಿದ್ದರು. ಆದರೆ ಅಂಗವಿಕಲ ಪ್ರಮಾಣಪತ್ರ ಮಾಡಿಸಲು ಹೋದಾಗ ಆಧಾರ್‌ಕಾರ್ಡ್ ತರಲು ಹೇಳಿದ್ದರು. ಎಷ್ಟೇ ಪ್ರಯತ್ನಿಸಿದರೂ ಮಾಡಿಸಲು ಆಗಿರಲಿಲ್ಲ. ಆಧಾರ್ ಕೇಂದ್ರಕ್ಕೆ ಮಗನನ್ನು ಕರೆದೊಯ್ಯಲು ಸಾಧ್ಯವಾಗದೆ ಆಧಾರ್ ಕಾರ್ಡ್ ಮಾಡಿಸಲಾಗಿರಲಿಲ್ಲ.
ಗ್ರಾಮ ಒನ್ ಸೆಂಟರ್ ನಡೆಸುತ್ತಿರುವ ಇಸ್ಮಾಯಿಲ್ ಪಲಿಮಾರು ಅವರು ಈ ಕುಟುಂಬದ ಕಷ್ಟ ಕಂಡು ತಹಶೀಲ್ದಾರ್ ಗಮನಕ್ಕೆ ತಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಪ್ರತಿಭಾ ಅವರು ಆತನ ಮನೆಗೆ ತೆರಳಿ ಕಾರ್ಡ್ ಮಾಡಿಸಿಕೊಟ್ಟಿದ್ದು, ಕುಟುಂಬ ಸಂತೋಷ ಪಡುವಂತಾಗಿದೆ.
‘ಆರು ವರ್ಷಗಳಿಂದ ಈ ಕುಟುಂಬ ಆಧಾರ್‌ಕಾರ್ಡ್ ಮಾಡಿಸಲು ಪ್ರಯತ್ನಿಸುತ್ತಿತ್ತು. ಅಂಗವಿಕಲ ಮಗುವಿಗೆ ನೆರವಾದ ಆತ್ಮ ತೃಪ್ತಿ ಉಂಟಾಗಿದೆ’ ಎನ್ನುತ್ತಾರೆ ಇಸ್ಮಾಯಿಲ್.
‘ಮೇಡಂ ನಮ್ಮ ಮನೆಗೆ ಬಂದಿದ್ದು, ಬಡವರ ಮನೆಗೆ ಭಾಗ್ಯ ಲಕ್ಷ್ಮಿ ಬಂದಂತಾಯಿತು. ಕಾರ್ಡ್‌ನಿಂದ ಮಗನಿಗೆ ಅಂಗವಿಕಲರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಮೇಡಂಗೆ ನಾವು ಸದಾ ಚಿರಋಣಿ’ ಎಂದು ಗುರುಸ್ವಾಮಿ, ಮಮತಾ ಹೇಳಿದರು.
ಸೌಲಭ್ಯ ವಂಚಿತರಾಗಬಾರದು: ಕಾಪು ತಾಲ್ಲೂಕಿನಲ್ಲಿ ಈ ರೀತಿ ಹಾಸಿಗೆ ಹಿಡಿದ ಹಿರಿಯರು, ಅಂಗವಿಕಲ ವ್ಯಕ್ತಿಗಳ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಕೊಡಲು ಯೋಜನೆ ಹಾಕಿಕೊಂಡಿದ್ದೇನೆ. ಯಾವ ವ್ಯಕ್ತಿಯೂ ಕಾರ್ಡ್ ಇಲ್ಲದ ಕಾರಣಕ್ಕೆ ಸೌಲಭ್ಯ ವಂಚಿತರಾಗಬಾರದು ಎಂಬುದು ನಮ್ಮ ಧ್ಯೇಯ. ಈ ಅಂಗವಿಕಲ ಬಾಲಕನಿಗೆ ಸರ್ಕಾರದ ಕಡೆಯಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಲು ಕ್ರಮ ವಹಿಸಲಾಗುವುದು ಎಂದು ತಹಶೀಲ್ದಾರ್ ಪ್ರತಿಭಾ ತಿಳಿಸಿದರು.
ಆಧಾರ್‌ಕಾರ್ಡ್ ಆಪರೇಟರ್ ಸಂಧ್ಯಾ, ಪೂರ್ಣಿಮಾ ಕಾರ್ಡ್ ಮಾಡಲು ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.