ಹೆಬ್ರಿ: ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಆಶ್ರಯದಲ್ಲಿ ಆರ್ಡಿಯ ಚಾರ್ಮಾಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಪ್ರೌಢಶಾಲೆಯಲ್ಲಿ ಈಚೆಗೆ ಕನ್ನಡದ ತೇರು ಸರಣಿ ಕಾರ್ಯಕ್ರಮ ನಡೆಯಿತು.
ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಗಂಗಾಧರ ರಾವ್ ಉದ್ಘಾಟಿಸಿ ಮಾತನಾಡಿ, ಶಾಲೆಗಳಲ್ಲಿ ಸಾಹಿತ್ಯ, ವಿಚಾರ ಕಮ್ಮಟಗಳನ್ನು ಏರ್ಪಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ಸೃಜನಶೀಲತೆ ಬೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮಾತನಾಡಿ, ಕನ್ನಡ ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ಆ ನಿಟ್ಟಿನಲ್ಲಿ ಶಾಲೆಗಳಲ್ಲಿ ಕನ್ನಡ ತೇರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಕನ್ನಡವನ್ನು ಆಳವಾಗಿ ಅರಿತುಕೊಂಡು ನಿತ್ಯ ಜೀವನದಲ್ಲಿ ಬಳಸಬೇಕು. ಇತರ ಭಾಷೆಗಳನ್ನು ದ್ವೇಷಿಸದೆ ಕನ್ನಡ ಸಂಸ್ಕೃತಿ ಅಳವಡಿಸಿಕೊಳ್ಳುವ ಮೂಲಕ ಕನ್ನಡವನ್ನು ಪ್ರೀತಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಕವನ ವಾಚನ, ಭಾಷಣ, ಗೀತಗಾಯನ, ಪ್ರಬಂಧ, ಕವಿಗಳನ್ನು ಗುರುತಿಸುವಿಕೆ ಸ್ಪರ್ಧೆ ಏರ್ಪಡಿಸಿ ವಿಜೇತರಾದ 27 ಮಂದಿಗೆ ಪ್ರಶಸ್ತಿಪತ್ರ, ಪದಕ ನೀಡಲಾಯಿತು. ಯುವ ಸಾಹಿತಿ ನವೀನ್ ಶೆಟ್ಟಿ ಮಡಾಮಕ್ಕಿ ‘ಸಂಸ್ಕಾರ ಮತ್ತು ಮೌಲ್ಯಗಳು’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ನಿವೃತ್ತ ಮುಖ್ಯಶಿಕ್ಷಕರಾದ ಶೇಖರ ಶೆಟ್ಟಿಗಾರ್, ಲಕ್ಷ್ಮಣ್ ಕುಕ್ಕುಜೆ, ಬೆಳ್ವೆ ಜನಜಾಗೃತಿ ವೇದಿಕೆ ಅಧ್ಯಕ್ಷ ವಸಂತ ಕುಮಾರ್ ಶೆಟ್ಟಿ, ಶಿಕ್ಷಕ ಪ್ರಕಾಶ್ ಭಟ್ ಮಾತನಾಡಿದರು. ಶಿಕ್ಷಕ ಜಯಶೀಲ ಶೆಟ್ಟಿ ನಿರೂಪಿಸಿದರು. ಶ್ರೀಕಾಂತ್ ವಂದಿಸಿದರು. ಸೃಜನ್ ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.