ADVERTISEMENT

ವಾಣಿಜ್ಯ ಶಾಸ್ತ್ರದತ್ತ ಹೆಚ್ಚಿದ ಒಲವು: ಉಪನಿರ್ದೇಶಕ ಮಾರುತಿ

ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 5:42 IST
Last Updated 23 ಅಕ್ಟೋಬರ್ 2024, 5:42 IST
ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ ಉದ್ಘಾಟಿಸಿದರು
ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ ಉದ್ಘಾಟಿಸಿದರು   

ಉಡುಪಿ: ‘ಇತ್ತೀಚೆಗಿನ ದಿನಗಳಲ್ಲಿ ವಾಣಿಜ್ಯ ಶಾಸ್ತ್ರ ವಿಷಯ ಆಯ್ಕೆ ಮಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ’ ಎಂದು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ ಅಭಿಪ್ರಾಯಪಟ್ಟರು.

ದಿ ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾದ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗವು ರವೀಂದ್ರ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಿಂದೆ ಕಾಲೇಜುಗಳಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಅದರಿಂದ ಆ ವಿಷಯದ ಉಪನ್ಯಾಸಕರಲ್ಲೂ ಚಿಂತೆ ಕಾಡಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ವಾಣಿಜ್ಯ ವಿಷಯ ಕೂಡ ಹೆಚ್ಚಿನ ಪ್ರಾಮುಖ್ಯ ಪಡೆದುಕೊಂಡಿದೆ. ಉಪನ್ಯಾಸಕರ ಪರಿಶ್ರಮ ಹಾಗೂ ಸರ್ಕಾರದ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಪ್ರತಿಪಾದಿಸಿದರು.

ADVERTISEMENT

ದೇಶದ ಆರ್ಥಿಕ ಬೆಳವಣಿಗೆ, ವ್ಯಾಪಾರಕ್ಕೆ ಸಂಬಂಧಿಸಿದ ವಿಚಾರಗಳು ಒಳಗೊಂಡಂತೆ ಹೊಸ ಹೊಸ ವಿಷಯಗಳು ವಾಣಿಜ್ಯ ಶಾಸ್ತ್ರದಲ್ಲಿ ಒಳಗೊಂಡು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಇದರಿಂದ ಈ ವಿಷಯಕ್ಕೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ವಾಣಿಜ್ಯ ಶಾಸ್ತ್ರ ವಿಷಯ‌ ಕಲಿತ ವಿದ್ಯಾರ್ಥಿಗಳಿಗೆ ಇಂದು ದೇಶ ವಿದೇಶಗಳಲ್ಲಿ ಉದ್ಯೋಗಾವಕಾಶಗಳೂ ಹೆಚ್ಚಿವೆ ಎಂದು ಹೇಳಿದರು.

ಪ್ರತಿಯೊಬ್ಬರೂ ತಮ್ಮ ವೃತ್ತಿಯ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ಉಪನ್ಯಾಸಕರು ಕೂಡ ಕಾಲಕ್ಕೆ ತಕ್ಕಂತೆ ನೂತನ ಬೋಧನಾ ಶೈಲಿ ಅಳವಡಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಉತ್ತಮ ಉಪನ್ಯಾಸಕರಾಗಲು ಸಾಧ್ಯ ಎಂದರು.

ಮಣಿಪಾಲ ಎಜಿಇ ಕಾರ್ಯದರ್ಶಿ ಸಿಎ ಬಿ.ಪಿ. ವರದರಾಯ ಪೈ ಮಾತನಾಡಿ, ಇಂದು ಇಂಟರ್ನೆಟ್‌ನಿಂದಾಗಿ ವಿದ್ಯಾರ್ಥಿಗಳು ಪಠ್ಯಕ್ಕೆ ಸಂಬಂಧಿಸಿ ಹೆಚ್ಚು ವಿಷಯಗಳನ್ನು ತಿಳಿದುಕೊಂಡಿರುತ್ತಾರೆ. ಇದರಿಂದಾಗಿ ಉಪನ್ಯಾಸಕರು ಹೆಚ್ಚಿನ ಅಧ್ಯಯನ ಮಾಡುವ ಅಗತ್ಯವಿದೆ ಎಂದರು.

ದಿ ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾದ ಮಂಗಳೂರು ವಿಭಾಗದ ಅಧ್ಯಕ್ಷ ರಾಕೇಶ್ ನಾಯಕ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯ ಕನಸನ್ನು ಪೋಷಿಸುವಲ್ಲಿ ಉಪನ್ಯಾಸಕರ ಪಾತ್ರ ಮಹತ್ವದ್ದು ಎಂದರು.

ಕಾಲೇಜು ಪ್ರಾಂಶುಪಾಲ ಲಕ್ಷ್ಮಿ ನಾರಾಯಣ ಕಾರಂತ ಮಾತನಾಡಿ, ವಾಣಿಜ್ಯ ಶಾಸ್ತ್ರ ಅಧ್ಯಯನ ಮಾಡಿದವರಿಗೆ ಇಂದು ಉದ್ಯೋಗಾವಕಾಶಗಳು ಹೆಚ್ಚಿವೆ ಎಂದರು.

ಎನ್. ಸುಬ್ರಹ್ಮಣ್ಯ ಕುಮಾರ್, ಸಿ.ಎ ಪ್ರದೀಪ್ ಜೋಗಿ, ಮಾಲತಿ ದೇವಿ ಇದ್ದರು. ಮಲ್ಲಿಕಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವನಿತಾ ಮಯ್ಯ ಸ್ವಾಗತಿಸಿದರು.

Highlights - ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಮಂಡನೆ ವಾಣಿಜ್ಯ ಶಾಸ್ತ್ರ ಉಪನ್ಯಾಸಕರು ಭಾಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.