ಉಡುಪಿ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉಡುಪಿಯ ಕೃಷ್ಣಮಠದಲ್ಲಿ ಗುರುವಾರ ವಿಜೃಂಭಣೆಯಿಂದ ವಿಟ್ಲಪಿಂಡಿ ಉತ್ಸವ ನಡೆಯಿತು.
ರಥಬೀದಿಯಲ್ಲಿ ನಡೆದ ವಿಟ್ಲಪಿಂಡಿಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಬಾಲಗೋಪಾಲನ ಸ್ಮರಣೆ ಮಾಡಿದರು. ಕೃಷ್ಣನ ಲೀಲಾ ವಿನೋದಾವಳಿಗಳನ್ನು ಕಣ್ತುಂಬಿಕೊಂಡರು.
ಮಧ್ಯಾಹ್ನ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು. ಬಳಿಕ ಕೃಷ್ಣನ ಮೃಣ್ಮಯ (ಮಣ್ಣಿನ) ಉತ್ಸವ ಮೂರ್ತಿಯನ್ನು ಬಂಗಾರದ ಪಲ್ಲಕ್ಕಿಯಲ್ಲಿರಿಸಿ ಮಠದ ಮುಖ್ಯದ್ವಾರದವರೆಗೂ ಹೊತ್ತು ತರಲಾಯಿತು.
ಕಾಣಿಯೂರು ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಚಿನ್ನದ ರಥದ ಮೇಲೆ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾ ಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಿದರು. ಗೋವಿಂದನ ಸ್ಮರಣೆ ಮಾಡುತ್ತಾ ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.
ಸಾಂಪ್ರದಾಯಿಕ ಮೊಸರು ಕುಡಿಕೆ ಒಡೆಯುವ ದೃಶ್ಯ ಆಕರ್ಷಕವಾಗಿತ್ತು. ರಥಬೀದಿಯ 14 ಕಡೆಗಳಲ್ಲಿ ಕಟ್ಟಲಾಗಿದ್ದ ಮೊಸರು, ಕುಂಕುಮ, ಮಂಡಕ್ಕಿ ಅರಳಿನ ಕುಡಿಕೆಗಳನ್ನು ಗೊಲ್ಲರು ಒಡೆದು ಸಂಭ್ರಮಿಸಿದರು. ಹುಲಿ ಕುಣಿತ ಹಾಗೂ ವೇಷದಾರಿಗಳ ನೃತ್ಯ ಗಮನ ಸೆಳೆಯಿತು.
ರಥೋತ್ಸವ ಮುಗಿದ ಬಳಿಕ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಧ್ವಸರೋವರದಲ್ಲಿ ವಿಸರ್ಜಿಸುವ ಮೂಲಕ ವಿಟ್ಲಪಿಂಡಿ ಉತ್ಸವ ಸಂಪನ್ನಗೊಂಡಿತು. ವಿಟ್ಲಪಿಂಡಿಗೆ ಆಗಮಿಸಿದ್ದ ಸಹಸ್ರಾರು ಭಕ್ತರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಇದಕ್ಕೂ ಮುನ್ನ ಕೃಷ್ಣ ಜನ್ಮಾಷ್ಟಮಿ ದಿನವಾದ ಬುಧವಾರ ರಾತ್ರಿ ರೋಹಿಣಿ ನಕ್ಷತ್ರದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಕೃಷ್ಣನಿಗೆ ಅರ್ಘ್ಯ ಸಮರ್ಪಿಸಿದರು. ಅಷ್ಟಮಿಯ ಧಾರ್ಮಿಕ ವಿಧಿವಿಧಾನಗಳಲ್ಲಿ ಅರ್ಘ್ಯ ಪ್ರಧಾನ ಪ್ರಮುಖವಾದುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.