ಉಡುಪಿ: ‘ಇಲ್ಲಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಯಾವುದೇ ರಹಸ್ಯ ಕ್ಯಾಮೆರಾ ಇರಿಸಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಡಬೇಡಿ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಹೇಳಿದರು.
ಶೌಚಾಲಯದಲ್ಲಿ ನಡೆದಿದೆ ಎನ್ನಲಾದ ವಿಡಿಯೊ ಚಿತ್ರೀಕರಣ ಪ್ರಕರಣದ ವಿಚಾರಣೆ ನಡೆಸಲು ಗುರುವಾರ ಕಾಲೇಜಿಗೆ ಭೇಟಿ ನೀಡಿದ ಅವರು ಕಾಲೇಜಿನ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ಆಡಳಿತ ಮಂಡಳಿಯ ಪ್ರಮುಖರು, ಸಂತ್ರಸ್ತೆ ಹಾಗೂ ಕಾಲೇಜಿನ ಹಲವು ವಿದ್ಯಾರ್ಥಿನಿಯರ ಜತೆ ಸುದೀರ್ಘ ಚರ್ಚೆ ನಡೆಸಿದರು. ಘಟನೆ ನಡೆದಿದೆ ಎನ್ನಲಾದ ಕಾಲೇಜಿನ ಶೌಚಾಲಯಕ್ಕೆ ತೆರಳಿ ಪರಿಶೀಲಿಸಿದರು.
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ರವರೆಗೂ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದರು.
ಬಳಿಕ ಮಾತನಾಡಿದ ಅವರು, ‘ಪೊಲೀಸ್ ಇಲಾಖೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣದ ತನಿಖೆ ಆರಂಭಿಸಿದ್ದು ಪೂರ್ಣಗೊಳ್ಳುವವರೆಗೂ ಮಾಧ್ಯಮಗಳು ಆಧಾರರಹಿತ ಸುದ್ದಿ ಪ್ರಕಟಿಸಬಾರದು. ವಿದ್ಯಾರ್ಥಿನಿಯರ ಮೊಬೈಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದ್ದು ವರದಿ ಬಂದ ನಂತರ ವಿಡಿಯೊ ಚಿತ್ರೀಕರಣವಾಗಿರುವ ಸತ್ಯಾಸತ್ಯತೆ ಬಯಲಾಗಲಿದೆ’ ಎಂದು ಹೇಳಿದರು.
ಇದಕ್ಕೂ ಮುನ್ನ ಬುಧವಾರ ರಾತ್ರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹಾಗೂ ಎಸ್‌ಪಿ ಹಾಕೆ ಅಕ್ಷಯ್ ಮಚ್ಚಿಂದ್ರ ಅವರೊಂದಿಗೆ ಚರ್ಚಿಸಿದ ಖುಷ್ಬು ಪ್ರಕರಣದ ಮಾಹಿತಿ ಪಡೆದುಕೊಂಡರು.
‘ವಿದ್ಯಾರ್ಥಿನಿಯರ ಮೂರು ಮೊಬೈಲ್‌ಗಳಲ್ಲಿದ್ದ ಸಂಪೂರ್ಣ ಡೇಟಾವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಮೊಬೈಲ್‌ನಲ್ಲಿ ಡಿಲೀಟ್ ಆಗಿದೆ ಎನ್ನಲಾದ ವಿಡಿಯೊ ಮರು ಪಡೆಯಲು 40 ಗಂಟೆಗಳ ಕಾಲ ಯತ್ನಿಸಿದರೂ ಪ್ರಯೋಜನವಾಗಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ಕಳುಹಿಸಬೇಕಾಗಿದ್ದು ಸಾಕ್ಷ್ಯಗಳು ಲಭ್ಯವಾದರೆ ಮಾತ್ರ ಸ್ಪಷ್ಟತೆ ಸಿಗಲಿದೆ’ ಎಂದರು.
‘ಸಾಕ್ಷ್ಯ ಸಿಗದಿದ್ದರೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಭಯೋತ್ಪಾದಕರ ಕೈವಾಡವಿದೆ ಎಂಬ ವಾಟ್ಸ್‌ಆ್ಯಪ್ ಸಂದೇಶಗಳು ಹರಿದಾಡುತ್ತಿದ್ದು ಸಂಶಯಾಸ್ಪದ ಸಂಗತಿಗಳನ್ನು ಹರಿಬಿಡಲಾಗುತ್ತಿದೆ. ಘಟನೆಯ ಹಿಂದೆ ಬಿಗ್ ಥಿಯರಿ ಇದೆ ಎಂದು ಭಾವಿಸಬೇಕಿಲ್ಲ. ನ್ಯಾಯಾಧೀಶರಾಗಿ ತೀರ್ಪು ಕೊಡುವ ಅಗತ್ಯವೂ ಇಲ್ಲ. ಮಹಿಳಾ ಆಯೋಗ ಮತ್ತು ಪೊಲೀಸ್ ಇಲಾಖೆ ಕರ್ತವ್ಯವನ್ನು ಸೂಕ್ತವಾಗಿ ನಿಭಾಯಿಸುತ್ತಿದೆ’ ಎಂದು ಖುಷ್ಬು ಹೇಳಿದರು.
ಪ್ರಕರಣದಲ್ಲಿ ಎಳೆಯ ಮನಸ್ಸುಗಳು ಇದ್ದು ಸರಿಯಾದ ಹಾದಿಯಲ್ಲಿ ತನಿಖೆ ಆಗಬೇಕು. ಮುಂಚಿತವಾಗಿ ಅಂತಿಮ ತೀರ್ಮಾನಕ್ಕೆ ಬರಲಾಗದು. ಮಹಿಳಾ ಆಯೋಗ ಮಹಿಳೆಯರ ರಕ್ಷಣೆಗೆ ಇರುವ ಸಂಸ್ಥೆಯಾಗಿದ್ದು ರಾಜಕೀಯ ಒತ್ತಡವಿಲ್ಲದೆ, ಕೋಮು ಪ್ರಭಾವವಿಲ್ಲದೆ ತನಿಖೆ ನಡೆಸಲಿದೆ. ನಿರ್ದಿಷ್ಟ ಕೋಮಿಗೆ ಸೇರಿದ ಮಹಿಳೆಯರ ರಕ್ಷಣೆಗೆ ಬಂದಿಲ್ಲ ಎಂದು ಖುಷ್ಬು ಹೇಳಿದರು.
ಬ್ರೇಕಿಂಗ್ ನ್ಯೂಸ್ ಕೊಡಲು ನಾನು ಬಂದಿಲ್ಲ. ಅರ್ಜೆಂಟ್ ಮಾಡಲು ಇದು ಟು ಮಿನಿಟ್ಸ್ ನೂಡಲ್ಸ್ ಅಲ್ಲ. ಸತ್ಯಾಂಶವನ್ನು ಪೊಲೀಸ್ ಇಲಾಖೆ ಬಹಿರಂಗಪಡಿಸಲಿದೆಖುಷ್ಬು ಸುಂದರ್, ಸದಸ್ಯೆ, ರಾಷ್ಟ್ರೀಯ ಮಹಿಳಾ ಆಯೋಗ
ತಳ್ಳಾಟ ನೂಕಾಟ
ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿದ ಯುವತಿಯರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಪೊಲೀಸ್ ಇಲಾಖೆ ತನಿಖೆಯ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿ ನಗರದ ಹುತಾತ್ಮ ಸೈನಿಕರ ಸ್ಮಾರಕದ ಎದುರು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆದು ನೂಕಾಟವಾಯಿತು. ಪ್ರತಿಭಟನಾನಿರತರನ್ನು ಪೊಲೀಸರು ಕರೆದೊಯ್ಯಲು ಮುಂದಾದಾಗ ಶಾಸಕ ಯಶ್‌ಪಾಲ್ ಸುವರ್ಣಮಧ್ಯೆ ಪ್ರವೇಶಿಸಿ ಅವಕಾಶ ನೀಡಲಿಲ್ಲ.
ಉಡುಪಿ ಪ್ರಕರಣಕ್ಕೂ ಮಣಿಪುರದಲ್ಲಿ ನಡೆದ ಘಟನೆಗಳಿಗೂ ವ್ಯತ್ಯಾಸವಿದೆ. ಅಲ್ಲಿ ಜನರ ಎದುರಲ್ಲೇ ಅತ್ಯಾಚಾರ ಆಗಿದೆ. ಆದರೂ ಉಡುಪಿಗೆ ಆಯೋಗದ ಸದಸ್ಯೆ ಓಡೋಡಿ ಬಂದಿದ್ದಾರೆ.ಕೃಪಾ ಆಳ್ವಾ, ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ
‘ಕೇರಳದವರ ಕುತಂತ್ರ ಶಂಕೆ’
‘ಶೌಚಾಲಯದಲ್ಲಿ ವಿಡಿಯೊ ಮಾಡಿದ್ದರ ಹಿಂದೆ ಕೇರಳದವರ ಕುತಂತ್ರ ಇರುವ ಸಾಧ್ಯತೆ ಇದೆ. ವಿಷಯ ಗೊತ್ತಾಗದೇ ಇದ್ದಿದ್ದರೆ ಈ ವಿಡಿಯೊಗಳು ಎಲ್ಲೆಲ್ಲಿಗೆ ತಲುಪುತ್ತಿದ್ದವು ಎಂಬುದನ್ನು ಯೋಚನೆ ಮಾಡುವುದು ಕಷ್ಟ. ಆದರೆ ಕಾಂಗ್ರೆಸ್ ಒಂದು ವರ್ಗದ ವಿದ್ಯಾರ್ಥಿನಿಯರನ್ನು ರಕ್ಷಿಸುವುದಕ್ಕಾಗಿ ಹೆಣಗಾಡುತ್ತಿದೆ. ಹೀಗಾಗಿ ಪ್ರಕರಣವನ್ನು ಎಸ್‌ಐಟಿಗೆ ವಹಿಸಬೇಕು’ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಒತ್ತಾಯಿಸಿದರು.
ವಿಡಿಯೊ ಪ್ರಕರಣ ‘ಉಡುಪಿ ಫೈಲ್ಸ್’ ಆಗುವುದುಬೇಡ. ತಂತ್ರಜ್ಞಾನದ ನೆರವು ಪಡೆದುಕೊಂಡು ಇದರ ಹಿಂದಿನ ಉದ್ದೇಶವನ್ನು ಕಂಡುಹಿಡಿಯಬೇಕು.ಸುದರ್ಶನ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ
‘ವ್ಯವಸ್ಥಿತ ಷಡ್ಯಂತ್ರ ಶಂಕೆ’
‘ಶೌಚಾಲಯದಲ್ಲಿ ವಿದ್ಯಾರ್ಥಿನಿಯ ಖಾಸಗಿ ವಿಡಿಯೊ ಚಿತ್ರೀಕರಿಸಿ ಅನ್ಯ ಗ್ರೂಪ್‌ಗಳಿಗೆ ಕಳುಹಿಸಿರುವ ಸಂಶಯವಿದ್ದು ಪ್ರಕರಣದ ಹಿಂದೆ ವ್ಯವಸ್ಥಿತ ಷಡ್ಯಂತ್ರ ಹಾಗೂ ಜಾಲ ಇದೆ. ತನಿಖೆಯ ಮೇಲೆ ಸರ್ಕಾರ ಪ್ರಭಾವ ಬೀರುತ್ತಿದ್ದು ನ್ಯಾಯ ಸಿಗದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತದ ಕಾರ್ಯಕಾರಿಣಿ ಸಮಿತಿ ಸದಸ್ಯ ಶ್ರೀಕಾಂತ್ ಶೆಟ್ಟಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.