ADVERTISEMENT

ಶಿರೂರು: ಇಂದು ಪ್ರತಿಭಟನೆ

ಬೈಂದೂರು ಶಿರೂರು ಟೋಲ್‌ ಗೇಟ್‌ ಬಳಿ ವಿವಿಧ ಸಂಘಟನೆಗಳಿಂದ ನಾಳೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 5:35 IST
Last Updated 30 ಜುಲೈ 2022, 5:35 IST
ಐಆರ್‌ಬಿ ಕಂಪನಿ ಶಿರೂರಿನಲ್ಲಿ ನಿರ್ಮಿಸಿರುವ ಟೋಲ್ ಪ್ಲಾಜಾ
ಐಆರ್‌ಬಿ ಕಂಪನಿ ಶಿರೂರಿನಲ್ಲಿ ನಿರ್ಮಿಸಿರುವ ಟೋಲ್ ಪ್ಲಾಜಾ   

ಬೈಂದೂರು: ಶಿರೂರು ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಟೋಲ್ ಗೇಟ್‌ನಿಂದ ಆಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಜುಲೈ 30ರಂದು ಪ್ರತಿಭಟನೆ ನಡೆಯಲಿದೆ. 2021ರ ಮಾರ್ಚ್ 30ರಂದು ಪ್ರತಿಭಟನೆ ನಡೆಸಿದ್ದರೂ ಇಲ್ಲಿಯವರೆಗೆ ಯಾವುದೇ ಸ್ಪಂದನ ಸಿಕ್ಕಿರಲಿಲ್ಲ. ಆ ಕಾರಣದಿಂದ ಪುನ: ಪ್ರತಿಭಟನೆಗೆ ಕರೆ ನೀಡಲಾಗಿದೆ.

ಶಿರೂರು ಬಪ್ಪನಬೈಲು ಸಮೀಪ ಟೋಲ್‌ಗೇಟ್‌ ನಿರ್ಮಾಣಕ್ಕಾಗಿ ನೂರಾರು ಎಕರೆ ಜಾಗವನ್ನು ಸ್ವಾಧೀನ ಪಡಿಸಿಕೊಂಡಿದ್ದರು. ಮನೆ, ನಿವೇಶನವನ್ನು ಕಳೆದುಕೊಂಡ ನಿರಾಶ್ರಿತರಿಗೆ ಈವರೆಗೂ ಬದಲಿ ವ್ಯವಸ್ಥೆ ಕಲ್ಪಿಸಿಲ್ಲ. ಕೃಷಿಭೂಮಿಯ ಪಕ್ಕದಲ್ಲೇ ಇದ್ದ ಕೆರೆ ಮುಚ್ಚಿದ್ದರಿಂದ 30 ಹೆಕ್ಟರ್‌ನಷ್ಟು ಗದ್ದೆಗಳಲ್ಲಿ ವ್ಯವಸಾಯ ಮಾಡಂದತಹ ಪರಿಸ್ಥಿತಿ ಎದುರಾಗಿದೆ ಎನ್ನವುದು ಸ್ಥಳೀಯ ರೈತರ ದೂರಾಗಿದೆ.

ಕೊಂಕಣ ರೈಲು ನಿಲ್ದಾಣದ ಸಂಪರ್ಕ ರಸ್ತೆಯಿಂದ ಶಿರೂರು ಪಾದಚಾರಿ ಒಳಸುರಂಗದವರೆಗೆ ಸಂಪರ್ಕ ರಸ್ತೆ ನಿರ್ಮಿಸಬೇಕು, ಗಂಗಾ ಕಲ್ಯಾಣ ಯೋಜನೆಯ 2 ಕೊಳವೆ ಬಾವಿಗಳನ್ನು ಪುನಃ ಕೊರೆಸಬೇಕು, ದೇವತಾ ಕೆರೆಯ ಹೂಳೆತ್ತಿಸಬೇಕು, ಟೋಲ್ ಸಮೀಪ ಎರಡು ಬದಿಗಳಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಬೇಕು, ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯ ಯುವಕ ಯುವತಿಯರಿಗೆ ಅವರ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ನೀಡಬೇಕು, ಅಳ್ವೆಗದ್ದೆ ಕ್ರಾಸ್‌ನಲ್ಲಿ ರಿಕ್ಷಾ ನಿಲ್ದಾಣ ನಿರ್ಮಿಸಬೇಕು, ಮೇಲಿನ ಎಲ್ಲಾ ಬೇಡಿಕೆಗಳ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

ADVERTISEMENT

ಐಆರ್‌ಬಿಯ ನಿರ್ಲಕ್ಷ್ಯ ಹಾಗೂ ಬೇಜವಬ್ದಾರಿಯ ಧೋರಣೆಯಿಂದ ಪದೇಪದೇ ರಸ್ತೆ ಅವಘಡಗಳು ನಡೆಯುತ್ತಿದ್ದು, ಇನ್ನು ಮುಂದೆ ಇಂತಹ ದುರ್ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ. ಶನಿವಾರದ ಪ್ರತಿಭಟನೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು, ವಿವಿಧ ಸಂಘಟನೆಯ ಮುಖಂಡರು ಹಾಗೂ ಸಾವಿರಾರು ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.