ADVERTISEMENT

ಉಡುಪಿ | ವಿದ್ಯಾರ್ಥಿಯಿಂದಲೇ ಶೌಚಾಲಯ ಶುಚೀಕರಣ: ಶಾಲೆಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 6:20 IST
Last Updated 6 ಜುಲೈ 2024, 6:20 IST
ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದ ವರದಿ
ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದ ವರದಿ   

ಉಡುಪಿ: ಇಲ್ಲಿನ ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೇ ಶೌಚಾಲಯ ಶುಚಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಿಇಒ, ಶಾಲೆಯ ಮುಖ್ಯೋಪಾಧ್ಯಾಯರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದಾರೆ.

ಶಾಲೆಯಲ್ಲಿ ಅಧ್ಯಾಪಕರೊಬ್ಬರ ಸೂಚನೆಯ ಮೇರೆಗೆ ವಿದ್ಯಾರ್ಥಿಯೊಬ್ಬ ಶೌಚಾಲಯ ಶುಚಿಗೊಳಿಸುತ್ತಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಶುಕ್ರವಾರ ವರದಿ ಪ್ರಕಟಗೊಂಡಿತ್ತು.

‌‌‘ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೇ ಶೌಚಾಲಯ ಶುಚಿಗೊಳಿಸುತ್ತಿರುವುದರ ಬಗ್ಗೆ ದೂರುಗಳು ಬಂದಿದ್ದು, ಮಕ್ಕಳ ಹಕ್ಕುಗಳ ನಿಯಮದ ಅರಿವಿದ್ದೂ ಮಕ್ಕಳಿಂದ ಈ ಕೆಲಸ ಮಾಡಿಸಿರುವುದರ ಔಚಿತ್ಯವೇನು ಎಂಬುದರ ಕುರಿತು ಖುದ್ದಾಗಿ ಕಚೇರಿಗೆ ಬಂದು ಮಾಹಿತಿ ನೀಡಬೇಕು‌’ ಎಂದು ಬಿಇಒ ಶಬಾನಾ ಅಂಜುಂ ಅವರು ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ್‌ ಕರ್ನೇಲಿಯೊ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ಸೂಚಿಸಿದ್ದಾರೆ.

ADVERTISEMENT

ಕೈಗವಸಾಗಲಿ, ಚಪ್ಪಲಿಯಾಗಲಿ ಧರಿಸದೆ ಶಾಲಾ ಸಮವಸ್ತ್ರದಲ್ಲಿಯೋ ವಿದ್ಯಾರ್ಥಿಯೊಬ್ಬ ಶೌಚಾಲಯವನ್ನು ನೀರು ಹಾಕಿ ಪೊರಕೆಯಿಂದ ಶುಚಿಗೊಳಿಸಿರುವುದು ಗುರುವಾರ ಕಂಡು ಬಂದಿತ್ತು.

‘ಶಾಲೆಗೆ ನೋಟಿಸ್‌ ಜಾರಿ ಮಾಡಲು ಬಿಇಒಗೆ ಸೂಚಿಸಿದ್ದೇನೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಣಪತಿ ಕೆ. ತಿಳಿಸಿದರು.

‌‘ನನ್ನ ಗಮನಕ್ಕೆ ಬಾರದೆ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಶೌಚಾಲಯ ಶುಚಿಗೊಳಿಸಲು ಸೂಚಿಸಿದ್ದರು’ ಎಂದು ಶಾಲಾ ಮುಖ್ಯೋಪಾಧ್ಯಾಯ ಸಂತೋಷ್‌ ಕರ್ನೇಲಿಯೊ ಸ್ಪಷ್ಟನೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.